ಕೆ ಆರ್ ಎಸ್ ಸುತ್ತಮುತ್ತ ಟ್ರಯಲ್ ಬ್ಲಾಸ್ಟ್ ಮಾಡಲು ಅಧಿಕಾರಿಗಳು ಮುಂದಾಗಿದ್ದು, ಇದಕ್ಕೆ ರಾಣಿ ಪ್ರಮೋದಾದೇವಿ ಒಡೆಯರ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಕೆ ಆರ್ ಎಸ್ ಅಣಕಟ್ಟೆಯ 20 ಕಿಲೋಮೀಟರ್ ಅಂತರದಲ್ಲಿ ಬ್ಲಾಸ್ಟ್ ಮಾಡಲು ಯೋಜನೆ ರೂಪಿಸಿರುವುದಕ್ಕೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಕೆ ಆರ್ ಎಸ್ ಸುತ್ತ ಬ್ಲಾಸ್ಟ್ ಮಾಡಿದರೆ ಕೆ ಆರ್ ಎಸ್ ಗೆ ಅಪಾಯ ಎದುರಾಗಲಿದೆ. ಈ ಕಾರಣಕ್ಕೆ ಎರಡು ವರ್ಷಗಳಿಂದ ಬೇಬಿ ಬೆಟ್ಟ ಸೇರಿ ಸುತ್ತ ಮುತ್ತ ನೂರಾರು ಕ್ವಾರಿಗಳನ್ನ ಸ್ಥಗಿತಗೊಳಿಸಲಾಗಿದೆ. ಈ ನಡುವೆ ಟ್ರಯಲ್ ಬ್ಲಾಸ್ಟ್ ಮಾಡಲು ಮುಂದಾಗಿರುವ ಅಧಿಕಾರಿಗಳ ನಡೆಯನ್ನ ರಾಜಮಾತೆ ಖಂಡಿಸಿದ್ದಾರೆ.
ಬೇಬಿ ಬೆಟ್ಟದಲ್ಲಿ ಟ್ರಯಲ್ ಬ್ಲಾಸ್ಟ್ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ರಾಜವಂಶಸ್ಥೆ ಪ್ರಮೋದಾ ದೇವಿ ಒಡೆಯರ್. ಬೇಬಿ ಬೆಟ್ಟದಲ್ಲೇ ಟ್ರಯಲ್ ಮಾಡಬೇಕು ಅಂತೇನೂ ಇಲ್ಲ. ನಮ್ಮ ಜಾಗದಲ್ಲಿ ಟ್ರಯಲ್ ಬ್ಲಾಸ್ಟ್ ಮಾಡುವಾಗ ಕನಿಷ್ಠ ನಮ್ಮ ಅನುಮತಿ ಪಡೆಯಬೇಕಿತ್ತು ಎಂದು ಹೇಳಿದ್ದಾರೆ.
ಮೈಸೂರಿನಲ್ಲಿ ಇಂದು ಈ ಬಗ್ಗೆ ಮಾತನಾಡಿದ ಪ್ರಮೋದಾದೇವಿ ಒಡಯರ್, ಯಾಕಿಷ್ಟು ಹಿಂಸೆ ಕೊಡುತ್ತಿದ್ದಾರೋ ಗೊತ್ತಿಲ್ಲ. ರಾಜ್ಯ ವಿಲೀನ ಸಂದರ್ಭದಲ್ಲಿ ಭಾರತ ಸರ್ಕಾರ ಮತ್ತು ರಾಜವಂಶದ ನಡುವೆ ಒಪ್ಪಂದ ಏರ್ಪಟ್ಟಿತ್ತು. ರಾಜ ಮನೆತನಕ್ಕೆ ಒಂದಷ್ಟು ಖಾಸಗಿ ಆಸ್ತಿಯನ್ನು ಪಟ್ಟಿ ಮಾಡಿ ಇನ್ನುಳಿದ ಎಲ್ಲಾ ಆಸ್ತಿಗಳನ್ನು ದೇಶದೊಂದಿಗೆ ವಿಲೀನ ಮಾಡಿದರು. ಈ ಸಂಬಂಧ 1950ರಲ್ಲಿ ಕೇಂದ್ರ ಸರ್ಕಾರ ಮತ್ತು ರಾಜವಂಶಸ್ಥ ನಡುವೆ ಒಪ್ಪಂದ ಏರ್ಪಟ್ಟಿದೆ. ಇದರ ಮುಂದುವರಿದ ಭಾಗವಾಗಿ 1951ರಲ್ಲಿ ಖಾಸಗಿ ಆಸ್ತಿಗಳ ಪಟ್ಟಿಯನ್ನು ಸರ್ಕಾರಿ ಆದೇಶದ ಮೂಲಕ ಖಚಿತ ಪಡಿಸಲಾಗಿದೆ. ಯಾವುದು ನಮ್ಮ ಖಾಸಗಿ ಆಸ್ತಿ, ಯಾವುದು ಸರ್ಕಾರಿ ಆಸ್ತಿ ಎಂಬುದು ಅಧಿಕಾರ ನಡೆಸುವ ಎಲ್ಲರಿಗೂ ಗೊತ್ತಿದೆ.
ಬೇಬಿ ಬೆಟ್ಟ ಸುತ್ತಲಿನ 1623ಎಕರೆ ನಮ್ಮ ಖಾಸಗಿ ಆಸ್ತಿ. ಅಧಿಕಾರಿಗಳು ಅದನ್ನ ಬಿ ಕರಾಬು ಎಂದು ಘೋಷಿಸಿದರು. ಅದರ ಪರಿಣಾಮವಾಗಿ ಗಣಿಗಾರಿಕೆ ಚಟುವಟಿಕೆ ಪ್ರಾರಂಭವಾಯಿತು.ಈಗ ಟ್ರಯಲ್ ಬ್ಲಾಸ್ಟ್ ಮಾಡಲು ಹೊರಟಿದ್ದಾರೆ. ನಮ್ಮ ಜಾಗದಲ್ಲಿ ಟ್ರಯಲ್ ಬ್ಲಾಸ್ಟ್ ಮಾಡುವಾಗ ಕನಿಷ್ಠ ನಮ್ಮ ಅನುಮತಿ ಪಡೆಯಬೇಕಿತ್ತು. ಎಲ್ಲಾ ಗೊತ್ತಿದ್ದು ಉದ್ದೇಶಪೂರ್ವಕವಾಗಿ ಗೊಂದಲ ಸೃಷ್ಟಿ ಮಾಡಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು