ಬೆಂಗಳೂರು – ದೇಶದಲ್ಲಿ ದಾಖಲಾಗುವ ಸೈಬರ್ ಅಪರಾಧಗಳ ಪಟ್ಟಿಯಲ್ಲಿ ಕರ್ನಾಟಕ 2ನೇ ಸ್ಥಾನ ಹಾಗೂ ಮಹಾನಗರಗಳ ಪೈಕಿ ಬೆಂಗಳೂರು ಮೊದಲ ಸ್ಥಾನ ಪಡೆದ ಕುಖ್ಯಾತಿಗೆ ಪಾತ್ರವಾಗಿದೆ.
ಈ ನಡುವೆ ಸೈಬರ್ ಪ್ರಕರಣಗಳ (Cyber Crime) ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ಕರ್ನಾಟಕ ಪೊಲೀಸರು ತೀರಾ ಹಿಂದೆ ಬಿದ್ದಿದ್ದಾರೆ. ಸೈಬರ್ ವಂಚಕರು ಕ್ಷಣಾರ್ಧದಲ್ಲಿ ತಮ್ಮ ಚಾಲೂಕುತನ ತೋರಿಸಿ ಪರಾರಿಯಾದರೆ, ಇವರನ್ನು ಪತ್ತೆ ಹಚ್ಚಲು ರಾಜ್ಯದ ಪೊಲೀಸರು ಹೈರಾಣರಾಗುತ್ತಿದ್ದಾರೆ.
ಕೇಂದ್ರ ಸರ್ಕಾರದ ಅಪರಾಧ ವಿಭಾಗದ ಅಂಕಿಅಂಶಗಳ ಪ್ರಕಾರ ಕಳೆದ 2022ರಲ್ಲಿ ದಾಖಲಾದ 12,556 ಸೈಬರ್ ಅಪರಾದ ಪ್ರಕರಣಗಳ ಪೈಕಿ 612 ಪುರುಷರು ಹಾಗೂ 67 ಮಹಿಳೆಯರು ಸೇರಿ ಕೇವಲ 679 ವಂಚಕರನ್ನಷ್ಟೇ ಬಂಧಿಸುವಲ್ಲಿ ಕರ್ನಾಟಕದ ಪೊಲೀಸರು ಯಶಸ್ವಿಯಾಗಿದ್ದಾರೆ.
ಸೈಬರ್ ಅಪರಾಧಗಳನ್ನು ಭೇದಿಸುವಲ್ಲಿ ಉತ್ತರ ಪ್ರದೇಶ ಪೊಲೀಸರು ದೇಶದಲ್ಲೇ ಮೊದಲ ಸ್ಥಾನದಲ್ಲಿದ್ದಾರೆ.ಉತ್ತರ ಪ್ರದೇಶದಲ್ಲಿ ಒಟ್ಟಾರೆ ದಾಖಲಾದ 10,117 ಸೈಬರ್ ಅಪರಾಧ ಪ್ರಕರಣಗಳಲ್ಲಿ ಭಾಗಿಯಾದ 7107 ಪುರುಷ ಹಾಗೂ 15 ಮಹಿಳೆಯರು ಸೇರಿ 7,122 ಆರೋಪಿಗಳನ್ನು ಪತ್ತೆ ಹಚ್ಚಿದ್ದಾರೆ.
ದೇಶದ ಮಹಾನಗರಗಳ ಪೈಕಿ ಬೆಂಗಳೂರು ನಗರ ಐಟಿ ಹಬ್ ಎಂದು ಹೆಸರುವಾಸಿಯಾಗಿದೆ. ಇಲ್ಲಿ ತಂತ್ರಜ್ಞಾನ ಆಧಾರಿತ ಕೆಲಸಗಳು ಹೆಚ್ಚಿರುವುದರಿಂದ ಸಹಜವಾಗಿಯೇ ಬೆಂಗಳೂರು ಸೈಬರ್ ವಂಚಕರ ಟಾರ್ಗೆಟ್ ಆಗಿದೆ. ಪ್ರತಿನಿತ್ಯದ ಕೆಲಸಗಳಿಗೂ ಜನರು ಆ್ಯಪ್ಗಳನ್ನು ಅವಲಂಬಿಸಿರುವುದು ಇದಕ್ಕೆ ಕಾರಣ. ತಂತ್ರಜ್ಞಾನಗಳ ಹೆಚ್ಚಿನ ಬಳಕೆಯನ್ನು ನಾವು ಬೆಂಗಳೂರಿನಲ್ಲಿ ಕಾಣುತ್ತೇವೆ. ಹಾಗಾಗಿ ಸೈಬರ್ ವಂಚನೆಗಳೆಂದು ಬಂದಾಗ ಅವುಗಳಿಂದ ವಂಚನೆಗೊಳಗಾಗುವ ಅತಿ ಹೆಚ್ಚು ಜನರು ಬೆಂಗಳೂರಿನಲ್ಲಿ ಸಿಗುತ್ತಿದ್ದಾರೆ. ನ್ಯಾಷನಲ್ ಕ್ರೈಂ ರೆಕಾರ್ಡ್ಸ್ ಬ್ಯೂರೋದ ಬಿಡುಗಡೆಗೊಳಿಸಿರುವ ಮಾಹಿತಿಗೂ ಸಿಗದ ಅನೇಕ ಪ್ರಕರಣಗಳಿವೆ.
ಎಷ್ಟೋ ಪ್ರಕರಣಗಳು ವರದಿಯಾಗುವುದೇ ಇಲ್ಲ. ಸೈಬರ್ ಕ್ರೈಂ ಕುರಿತು ಜನರಲ್ಲಿ ನಿರಂತರ ಜಾಗೃತಿ ಮೂಡಿಸುವ ಅಗತ್ಯವಿದೆ” ಎಂದು ಸೈಬರ್ ತಜ್ಞರು ಅಭಿಪ್ರಾಯ ಪಡುತ್ತಾರೆ.
ಸೈಬರ್ ಅಪರಾಧ ಪ್ರಕರಣಗಳ ವರದಿ ಹೀಗಿದೆ
2022 ಪ್ರಕರಣಗಳು:
ತೆಲಂಗಾಣ – 15,297
ಕರ್ನಾಟಕ – 12,556
ಉತ್ತರ ಪ್ರದೇಶ – 10,117
ಮಹಾರಾಷ್ಟ್ರ – 8,249
ಆಂಧ್ರಪ್ರದೇಶ – 2,341
2022ರ ಹೆಚ್ಚು ಸೈಬರ್ ಕೇಸ್ :
ಬೆಂಗಳೂರು – 9,940
ಮುಂಬೈ – 4724
ಹೈದರಾಬಾದ್ – 4436
ಲಕ್ನೋ – 1134
ದೆಹಲಿ – 685