ರಾಜ್ಯಸಭೆ ಚುನಾವಣೆ ಅಖಾಡ ಕುತೂಹಲ ಮೂಡಿಸಿದೆ. ಅದರಲ್ಲೂ ಮತದಾನ ವೈಖರಿಯಂತೂ ಅಚ್ಚರಿ ಹಾಗು ಹೊಸ ರಾಜಕೀಯ ತಿರುವುಗಳ ಮುನ್ಸೂಚನೆ ನೀಡಿದೆ. ಜೆಡಿಎಸ್ ನ ಕೋಲಾರ ಕ್ಷೇತ್ರದ ಶಾಸಕ ಕೆ.ಶ್ರೀನಿವಾಸಗೌಡ ಪಕ್ಷದ ವಿಪ್ ಉಲ್ಲಂಘಿಸಿ ಕಾಂಗ್ರೆಸ್ ಅಭ್ಯರ್ಥಿ ಪರ ಮತ ಹಾಕಿದ್ದಾರೆಂದು ಹೇಳಲಾಗಿದೆ. ಇದರ ಜೊತೆಯಲ್ಲಿ ಗುಬ್ಬಿ ಕ್ಷೇತ್ರದ ಜೆಡಿಎಸ್ ಶಾಸಕ ಎಸ್.ಆರ್. ಶ್ರೀನಿವಾಸ್ ಕೂಡಾ ವಿಪ್ ಉಲ್ಲಂಘಿಸಿದ್ದಾರೆಂದು ಹೇಳಲಾಗಿದೆ.
ಇವರೊಂದಿಗೆ ಪಕ್ಷದ ನಾಯಕತ್ವದ ಬಗ್ಗೆ ಬೇಸರಗೊಂಡಿರುವ ಅರಸೀಕೆರೆ ಕ್ಷೇತ್ರದ ಶಾಸಕ ಶಿವಲಿಂಗೇಗೌಡ ಕೂಡಾ ಪಕ್ಷಾಂತರ ಮಾಡಲಿದ್ದಾರೆಂದು ಹೇಳಲಾಗಿತ್ತು. ಆದರೆ ಈ ನಿರೀಕ್ಷೆ ಹುಸಿಗೊಳಿಸಿದ ಅವರು ಜೆಡಿಎಸ್ ಅಭ್ಯರ್ಥಿ ಗೆ ಮೊದಲ ಪ್ರಾಶಸ್ತ್ಯದ ಮತ ಚಲಾಯಿಸಿದರು. ಈ ನಡುವೆ ಜೆಡಿಎಸ್ ಪಕ್ಷದ ಏಜೆಂಟ್ ಎಚ್.ಡಿ.ರೇವಣ್ಣ ಅವರ ಮತವನ್ನು ಅಸಿಂಧುಗೊಳಿಸುವಂತೆ ಬಿಜೆಪಿ ಚುನಾವಣಾಧಿಕಾರಿಗೆ ದೂರು ಸಲ್ಲಿಸಿದೆ.
ಮತದಾನ ನಡೆಯುವ ವೇಳೆ ತಮ್ಮ ಹಕ್ಕು ಚಲಾಯಿಸಿದ ಎಚ್.ಡಿ.ರೇವಣ್ಣ, ಕೆಪಿಸಿಸಿ ಅಧ್ಯಕ್ಷ ಹಾಗು ಕಾಂಗ್ರೆಸ್ ಏಜೆಂಟ್ ಆಗಿದ್ದ ಡಿ.ಕೆ.ಶಿವಕುಮಾರ್‍ಗೆ ತೋರಿಸಿ ಮತ ಚಲಾವಣೆ ಮಾಡಿದರು ಎಂದು ಆರೋಪಿಸಲಾಗಿದೆ.
ನಿಯಮಗಳ ಪ್ರಕಾರ ಮತ ಚಲಾಯಿಸುವಾಗ ಆಯಾ ಪಕ್ಷದ ಏಜೆಂಟರಿಗೆ ತೋರಿಸಬೇಕು. ಅನ್ಯ ಪಕ್ಷಗಳ ಏಜೆಂಟರಿಗೆ ತೋರಿಸಿದರೆ ಆ ಮತವನ್ನು ಅಸಿಂಧುಗೊಳಿಸುವ ಸಾಧ್ಯತೆ ಇದೆ. ಬಿಜೆಪಿಯ ಚುನಾವಣಾ ಏಜೆಂಟ್ ಆಗಿರುವ ಸಿ.ಟಿ.ರವಿ ಅವರು ಚುನಾವಣಾಧಿಕಾರಿ ವಿಶಾಲಾಕ್ಷಿಯವರಿಗೆ ರೇವಣ್ಣನವರ ಮತವನ್ನು ಅಸಿಂಧುಗೊಳಿಸುವಂತೆ ದೂರು ನೀಡಿದ್ದಾರೆ.
ಆದರೆ ಈ ಆರೋಪವನ್ನು ನಿರಾಕರಿಸಿರುವ ರೇವಣ್ಣ ನಾನೇಕೆ ಬೇರೆಯವರಿಗೆ ತೋರಿಸಿ ಮತ ಚಲಾಯಿಸಲಿ. ಇವೆಲ್ಲ ಕಟ್ಟುಕಥೆ ಎಂದು ತಿರುಗೇಟು ನೀಡಿದ್ದಾರೆ.