ಮರಿ ಟೈಗರ್ ವಿನೋದ್ ಪ್ರಭಾಕರ್ ‘ಲಂಕಾಸುರ’ ಚಿತ್ರದಲ್ಲಿ ಬ್ಯುಸಿ ಇದ್ದಾರೆ. ಇನ್ನೊಂದೆಡೆ ಅವರ ‘ಮಾದೇವ ‘ ಚಿತ್ರ ಸಹ ಸೆಟ್ಟೇರಿದ್ದು ಇದಕ್ಕೀಗ ನಾಯಕಿಯಾಗಿ ಸೋನಲ್ ಮೊಂಥೆರೋ ಆಯ್ಕೆಯಾಗಿದ್ದಾರೆ. ಇದಕ್ಕೆ ಮುನ್ನ ದರ್ಶನ್ ಅಭಿನಯದ ‘ರಾಬರ್ಟ್’ ನಲ್ಲಿ ಈ ಜೋಡಿ ಪ್ರೇಕ್ಷಕರ ಮನಗೆದ್ದಿತ್ತು. ನವೀನ್ ರೆಡ್ಡಿ ಅವರ ಮಾದೇವ ಚಿತ್ರದ ಮೂಲಕ ಇಬ್ಬರೂ ಮತ್ತೊಮ್ಮೆ ಒಟ್ಟಿಗೆ ನಟಿಸುತ್ತಿದ್ದು, ಕಮರ್ಷಿಯಲ್ ಎಂಟರ್ಟೈನರ್ ಚಿತ್ರದ ಚಿತ್ರೀಕರಣ ಸೋಮವಾರದಿಂದ ಪ್ರಾರಂಭವಾಗಿದೆ. ಇನ್ನು ಸೋನಾಲ್ ಇದಾಗಲೇ ಝೈರ್ ಖಾನ್ ಅಭಿನಯದ ಬಹುಭಾಷಾ ಚಿತ್ರ ‘ಬನಾರಸ್’ ಬಿಡುಗಡೆಗಾಗಿ ಕಾಯುತ್ತಿದ್ದಾರೆ. ಈ ನಡುವೆ ಯೋಗರಾಜ್ ಭಟ್ ಅವರ ಗರಡಿ, ಸರೋಜಿನಿ ನಾಯ್ಡು ಅವರ ಜೀವನ ಚರಿತ್ರೆ ಸಿನಿಮಾದಲ್ಲೂ ನಟಿಸುತ್ತಿದ್ದಾರೆ. ‘ಮಾದೇವ ‘ ಸಿನಿಮಾವನ್ನು ಗಾಯತ್ರಿ ಆರ್ ಹಳಲೆ ನಿರ್ಮಾಣ ಮಾಡುತ್ತಿದ್ದು, ಶೃತಿ, ಅಚ್ಯುತ್ ಕುಮಾರ್ ಪ್ರಮುಖ ಪಾತ್ರದಲ್ಲಿದ್ದಾರೆ. ಬಾಲಕೃಷ್ಣ ಥೋಟ ಅವರ ಸಿನಿಮೆಟೋಗ್ರಾಫಿ ಇದ್ದು, ಪ್ರದ್ಯೋತ್ಥನ್ ಸಂಗೀತ ನೀಡಿದ್ದಾರೆ.