ಶಿವಮೊಗ್ಗ,ಆ.16- ಸ್ವಾತಂತ್ರ್ಯ ಹೋರಾಟಗಾರ ವೀರ್ ಸಾವರ್ಕರ್ ಹಾಗು ಟಿಪ್ಪು ಸುಲ್ತಾನ್ ಫೋಟೋ ವಿವಾದ ಭುಗಿಲೆದ್ದು, ಎರಡು ಸಮುದಾಯದ ನಡುವೆ ಕಿಚ್ಚು ಹಚ್ಚಿಸಿ, ಹಿಂಸಾಚಾರ ನಡೆದು, ಇಬ್ಬರು ಹಿಂದೂ ಯುವಕರಿಗೆ ಚಾಕು ಇರಿದ ಕೃತ್ಯದ ಸಂಬಂಧ ಓರ್ವನಿಗೆ ಗುಂಡು ಹೊಡೆದಿದ್ದು ಆತ ಸೇರಿ ನಾಲ್ವರನ್ನು ಬಂಧಿಸಲಾಗಿದೆ.
ಪೊಲೀಸರ ಗುಂಡೇಟು ಕಾಲಿಗೆ ತಗುಲಿರುವ ಬುದ್ಧ ನಗರದ ಮಹಮ್ಮದ್ ಜಬೀವುಲ್ಲಾ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾನೆ.
ಜೆಸಿ ನಗರದ ನದೀಮ್ ಹಾಗು ಬುದ್ಧ ನಗರದ ಅಬ್ದುಲ್ ರೆಹಮಾನ್ ಸೇರಿ ಪ್ರಕರಣದಲ್ಲಿ ನಾಲ್ವರನ್ನು ಬಂಧಿಸಿ ಉಳಿದವರಿಗಾಗಿ ಶೋಧ ಕಾರ್ಯ ನಡೆಸಲಾಗಿದ್ದು ನಿಷೇದಾಜ್ಞೆ ಮುಂದುವರೆಸಲಾಗಿದೆ ಎಂದು ಹೆಚ್ಚುವರಿ ಪೊಲೀಸ್ ಆಯುಕ್ತ ಅಲೋಕ್ ಕುಮಾರ್ ತಿಳಿಸಿದ್ದಾರೆ.
ಆರೋಪಿ ಮೊಹಮ್ಮದ್ ಜಬೀವುಲ್ಲಾ ಬಂಧಿಸಲು ಬೆನ್ನತ್ತಿ ಹೋದ ಪೊಲೀಸರ ಮೇಲೆ ಹಲ್ಲೆ ಮಾಡಿ ಓಡಿಹೋಗಲು ಯತ್ನಿಸುತ್ತಿದ್ದಾಗ ಆತ್ಮ ರಕ್ಷಣೆಗಾಗಿ ಆತನ ಕಾಲಿಗೆ ಗುಂಡು ಹಾರಿಸಲಾಗಿದೆ. ಆತನಿಗೆ ಈಗಾಗಲೇ ಚಿಕಿತ್ಸೆ ನೀಡಲಾಗಿದ್ದು, ಜೈಲಿನ ವಾರ್ಡ್ಗೆ ಶಿಫ್ಟ್ ಮಾಡಲಾಗಿದೆ ಎಂದರು.
ಹಲ್ಲೆಗೊಳಗಾದ ಪ್ರೇಮ್ಸಿಂಗ್, ಹಾಗು ಗುಂಡೇಟು ತಿಂದ ಮಹಮ್ಮದ್ ಜಭೀವುಲ್ಲಾ ನಿಂದ ಮಾಹಿತಿ ಪಡೆದಿದ್ದೇನೆ. ಪ್ರೇಮ್ ಸಿಂಗ್ ಅಣ್ಣ ಅತನ ಜೊತೆ ಇದ್ದು ನೋಡಿಕೊಳ್ಳುತ್ತಿದ್ದಾರೆ. ರಾಜಸ್ಥಾನದಲ್ಲಿರುವ ಅವರ ತಂದೆ ತಾಯಿಗೆ ಮಾಹಿತಿ ನೀಡಲಾಗಿದೆ ಎಂದರು.
ಹಿನ್ನಲೆಯ ಬಗ್ಗೆ ತನಿಖೆ:
ಚಾಕು ಇರಿತಕ್ಕೊಳಗಾಗಿರುವ ಇಬ್ಬರ ಆರೋಗ್ಯವೂ ಸ್ಥಿರವಾಗಿದ್ದು, ಚಿಕಿತ್ಸೆ ಮುಂದುವರೆಯಲಿದೆ.
ಗುಂಡೇಟು ತಿಂದಿರುವ ಆರೋಪಿ ಮೊಹಮ್ಮದ್ ಜಬಿಯಿಂದಲೂ ಮಾಹಿತಿ ಪಡೆದಿದ್ದೇನೆ ಎಂದು ತಿಳಿಸಿದರು.
ನಗರದ ಎಎ ಸರ್ಕಲ್ ನಲ್ಲಿ ಫ್ಲೆಕ್ಸ್ ತೆರವು ವೇಳೆ ನಡೆದ ಗಲಭೆಯಲ್ಲಿ ಜಬೀವುಲ್ಲಾ ಪಾಲ್ಗೊಂಡಿರುವುದು ತನಿಖೆಯಲ್ಲಿ ಪತ್ತೆಯಾಗಿದ್ದು ಈ ಸಂಬಂಧ ಹೆಚ್ಚಿನ ಮಾಹಿತಿಯನ್ನು ಕಲೆಹಾಕಲಾಗುತ್ತಿದೆ ಎಂದರು.
ಆರೋಪಿಗಳ ಹಿನ್ನೆಲೆ, ಅವರು ಯಾವ ಸಂಘಟನೆಯಲ್ಲಿ ಗುರುತಿಸಿಕೊಂಡಿದ್ದಾರೆ ಎಂಬುದು ತನಿಖೆಯ ನಂತರವಷ್ಟೇ ತಿಳಿದುಬರಲಿದೆ. ಅವರ ವಿರುದ್ಧ ಅವರ ವಿರುದ್ಧ ದಾಖಲಿಸುವುದರ ಜೊತೆಗೆ ಆಸ್ತಿ ಮುಟ್ಟುಗೋಲು ಹಾಕುವ ವಿಚಾರವಾಗಿ ಜಿಲ್ಲಾಧಿಕಾರಿಗಳ ಜೊತೆ ಚರ್ಚಿಸಿ ಕ್ರಮ ಕೈಗೊಳ್ಳಲು ಪೊಲೀಸರು ಮುಂದಾಗಿದ್ದಾರೆ.
3 ದಿನ ನಿಷೇದಾಜ್ಞೆ:
ನಗರದಲ್ಲಿ ಮುಂಜಾಗ್ರತಾ ಕ್ರಮವಾಗಿ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಮೂರು ದಿನಗಳ ಕಾಲ ನಿಷೇದಾಜ್ಞೆ ಜಾರಿ ಮಾಡಲಾಗಿದೆ.
ಮೂರು ದಿನಗಳವರೆಗೆ 40 ವರ್ಷ ಕಡಿಮೆ ವಯಸ್ಸಿನ ಗಂಡಸರನ್ನು ಹಿಂಬದಿಯಲ್ಲಿ ಬೈಕ್ನಲ್ಲಿ ಕೂರಿಸಿಕೊಂಡು ಸಂಚರಿಸುವಂತಿಲ್ಲ ಎಂದು ಎಸ್ಪಿ ಲಕ್ಷ್ಮೀಪ್ರಸಾದ್ ತಿಳಿಸಿದ್ದಾರೆ.
ನಗರದ ಎಲ್ಲೆಡೆ ವಾಹನಗಳ ತಪಾಸಣೆ ನಡೆಸುತ್ತೇವೆ. ಭದ್ರತೆಗಾಗಿ 15 ಪ್ಲಟೂನ್ ಬಂದಿದ್ದು, ಇನ್ನೂ 6 ಪ್ಲಟೂನ್ ಬರಲಿವೆ. ಹೆಚ್ಚುವರಿಯಾಗಿ ಓರ್ವ ಎಸ್ಪಿ, ಮೂವರು ಹೆಚ್ಚುವರಿ ಎಸ್ಪಿ ಸಿಐಡಿಯ ಮೂವರು ಡಿವೈಎಸ್ಪಿ, 10 ಇನ್ಸ್ಪೆಕ್ಟರ್ ಅವರನ್ನು ನಿಯೋಜನೆ ಮಾಡಲಾಗಿದೆ ಎಂದರು.
ಪೋಟೋ ವಿವಾದ:
ಸ್ವಾತಂತ್ರ್ಯದ ಅಮೃತ ಮಹೋತ್ಸವದ ನಿಮಿತ್ತ ನಿನ್ನೆ ವೀರ್ ಸಾವರ್ಕರ್ ಅವರ ಫೋಟೋ ಅನ್ನು ಹಿಂದೂ ಸಂಘಟನೆಯ ಕೆಲವು ಯುವಕರು ಅಳವಡಿಸಿದ್ದಕ್ಕೆ ವಿರೋಧ ವ್ಯಕ್ತಪಡಿಸಿ ಆ ಫೋಟೋ ಕಿತ್ತೆಸೆದು ಅಲ್ಲಿ ಟಿಪ್ಪು ಫೋಟೋ ಇಡಲು ಮುಂದಾಗಿದ್ದೇ ಈ ಘಟನೆಗೆ ಕಾರಣವಾಗಿತ್ತು.
ಈ ಫೋಟೋ ವಿವಾದ ಹಿಂದೂ ಮತ್ತು ಮುಸ್ಲಿಂ ಸಮುದಾಯದ ನಡುವೆ ಕಿಚ್ಚು ಹಚ್ಚಿಸಿ ಹಿಂಸಾಚಾರಕ್ಕೆ ತಿರುಗಿ ನಿಷೇದಾಜ್ಞೆ
ಜಾರಿ ಮಾಡಲಾಗಿತ್ತು. ಇದರ ಹೊರತಾಗಿಯೂ ಅಂಗಡಿಯಲ್ಲಿ ಕೆಲಸ ಮಾಡಿಕೊಂಡು ಮನೆಗೆ ಹೊರಟಿದ್ದ ಪ್ರೇಮ್ ಸಿಂಗ್ ಮತ್ತು ಪ್ರವೀಣ್ ಕುಮಾರ್ ಎನ್ನುವವರಿಗೆ ಚಾಕುವಿನಿಂದ ಇರಿದು ಇನ್ನಷ್ಟು ಹಿಂಸಾಚಾರಕ್ಕೆ ಪ್ರಚೋದನೆ ನೀಡಿರುವ ಘಟನೆ ನಡೆದಿತ್ತು.
Previous Articleಕಾಂಗ್ರೆಸ್ ನವರು ಇತಿಹಾಸ ಸರಿಯಾಗಿ ಓದಿಲ್ಲ: ಮಾಜಿ ಸಿಎಂ
Next Article ಅಮೀರ್ ಖಾನ್, ಸಲ್ಮಾನ್ ಖಾನ್ ಪಾಕಿಸ್ತಾನದ ಏಜೆಂಟರಾ…?