ಬೆಂಗಳೂರು, ಜೂ.3- ರಾಜ್ಯ ವಿಧಾನಸಭೆಯಿಂದ ರಾಜ್ಯಸಭೆಯ ನಾಲ್ಕು ಸ್ಥಾನಗಳಿಗೆ ನಡೆಯುತ್ತಿರುವ ಚುನಾವಣೆ ಕುತೂಹಲದ ಘಟ್ಟ ತಲುಪಿದೆ. ನಾಮಪತ್ರ ವಾಪಸ್ ಪಡೆಯಲು ಕೊನೆಯ ದಿನವಾದ ಇಂದು ಯಾರೊಬ್ಬರೂ ನಾಮಪತ್ರ ವಾಪಸ್ ಪಡೆಯಲಿಲ್ಲ.
ಜೆಡಿಎಸ್ ಅಭ್ಯರ್ಥಿ ಕುಪೇಂದ್ರರೆಡ್ಡಿ ಅವರನ್ನು ಬೆಂಬಲಿಸಿ ಕಾಂಗ್ರೆಸ್ ತನ್ನ ಎರಡನೇ ಅಭ್ಯರ್ಥಿಯ ನಾಮಪತ್ರ ವಾಪಸ್ ಪಡೆಯಲಿದೆ ಎಂಬ ಮಾತುಕತೆಗಳ ನಡುವೆಯೇ ಪಟ್ಟು ಸಡಿಲಿಸಲು ನಿರಾಕರಿಸಿದ ರಾಜ್ಯ ನಾಯಕರು ಎರಡನೇ ಅಭ್ಯರ್ಥಿ ಮನ್ಸೂರ್ ಅಲಿ ಖಾನ್ ಅವರನ್ನು ಕಣದಲ್ಲಿ ಉಳಿಸುವಲ್ಲಿ ಯಶಸ್ವಿಯಾದರು.
ನಿನ್ನೆಯಿಂದ ನಡೆದ ಕೆಲವು ಬೆಳವಣಿಗೆಗಳಲ್ಲಿ ಹಲವು ರೀತಿಯ ವದಂತಿಗಳು ಹರಿದಾಡಲಾರಂಭಿಸಿದ್ದವು.
ಒಂದು ಹಂತದಲ್ಲಿ ದೆಹಲಿಯಲ್ಲಿ ಕಾಂಗ್ರೆಸ್ ಹೈಕಮಾಂಡ್ ಜೆಡಿಎಸ್ ನಾಯಕರ ಮಾತುಕತೆ ಯಶಸ್ವಿಯಾಗಿದೆ.ಹಿರಿಯ ನಾಯಕ ಮಲ್ಲಿಕಾರ್ಜುನಖರ್ಗೆ ಅವರು ಜೆಡಿಎಸ್ ಜತೆ ಸಖ್ಯಕ್ಕೆ ಒಲವು ತೋರಿಸಿದ್ದಾರೆ. ಹೀಗಾಗಿ ಕಾಂಗ್ರೆಸ್‍ನ ಹೆಚ್ಚುವರಿ ಅಭ್ಯರ್ಥಿ ಮನ್ಸೂರ್ ಖಾನ್ ನಾಮಪತ್ರವನ್ನು ಹಿಂಪಡೆಯಲಿದ್ದಾರೆ ಎಂಬ ಸುದ್ದಿ ಹರಡಿತ್ತು.. ಆದರೆ, ಈ ಎಲ್ಲವೂ ತಿರುವು, ಮರುವಾಗಿದ್ದು, ಕಾಂಗ್ರೆಸ್‍ನ ಇಬ್ಬರೂ ಅಭ್ಯರ್ಥಿಗಳು ಉಳಿದಿದ್ದಾರೆ. ಹೀಗಾಗಿ ರಾಜ್ಯಸಭೆ ಸದಸ್ಯರ ಆಯ್ಕೆಗೆ ಚುನಾವಣೆ ನಡೆಯುವುದು ಅನಿವಾರ್ಯವಾಗಿದೆ.
ಜೂ.10ರಂದು ನಡೆಯುವ ಚುನಾವಣೆ ಮತ್ತಷ್ಟು ಕುತೂಹಲ ಕೆರಳಿಸಿದ್ದು, ರಾಜಕೀಯ ಚುಟವಟಿಕೆಗಳು ಬಿರುಸು ಪಡೆದುಕೊಂಡಿವೆ. ಪ್ರಸ್ತುತ ಶಾಸಕರ ಸಂಖ್ಯಾಬಲ ಆಧರಿಸಿ ಬಿಜೆಪಿ ಎರಡು ಸ್ಥಾನ ಗೆಲ್ಲಲು ಅವಕಾಶವಿದೆ. ಆದರೆ, ಮೂರನೇ ಅಭ್ಯರ್ಥಿಯನ್ನು ಬಿಜೆಪಿ ಕಣಕ್ಕಿಳಿಸಿದೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ನಟ ಜಗ್ಗೇಶ್ ಮತ್ತು ವಿಧಾನಪರಿಷತ್ ಮಾಜಿ ಸದಸ್ಯ ಲೆಹರ್ ಸಿಂಗ್ ಚುನಾವಣಾ ಕಣದಲ್ಲಿದ್ದಾರೆ.
ಕಾಂಗ್ರೆಸ್ ಕೇಂದ್ರದ ಮಾಜಿ ಸಚಿವ ಜೈರಾಮ್ ರಮೇಶ್ ಮತ್ತು ಮನ್ಸೂರ್ ಖಾನ್ ಅವರನ್ನು ಕಣಕ್ಕಿಳಿಸಿದೆ.