ಬೆಂಗಳೂರು – ಲೋಕಸಭಾ ಚುನಾವಣೆ ಮೇಲೆ ಕಣ್ಣಿಟ್ಟಿರುವ ಕಾಂಗ್ರೆಸ್ ಪಕ್ಷ ಇತರೇ ಪಕ್ಷಗಳ ಶಾಸಕರನ್ನು ತನ್ನತ್ತ ಸೆಳೆದುಕೊಳ್ಳಲು ಪ್ರಯತ್ನ ನಡೆಸಿರುವ ಬೆನ್ನಲ್ಲೇ ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ ಎಲ್ ಸಂತೋಷ್ ಹೊಸ ಬಾಂಬ್ ಸಿಡಿಸಿದ್ದಾರೆ.
ರಾಜ್ಯದ ಕಾಂಗ್ರೆಸ್ ಸರ್ಕಾರದ ಬಗ್ಗೆ ಅತೃಪ್ತಗೊಂಡ ಶಾಸಕರು ಈ ಸರ್ಕಾರದ ಪತನಕ್ಕೆ ಸಜ್ಜುಗೊಂಡಿದ್ದಾರೆ
ನನ್ನ ಜೊತೆ ಕಾಂಗ್ರೆಸ್ ನ 40 ರಿಂದ 45 ಜನ ಶಾಸಕರು ಸಂಪರ್ಕದಲ್ಲಿದ್ದಾರೆ. ದೆಹಲಿಯವರು ಒಪ್ಪಿಗೆ ಕೊಟ್ಟರೆ ನಾಳೆ ಒಂದು ದಿನದ ಕೆಲಸ ಅಷ್ಟೆ.
ಈ ಸರ್ಕಾರ ಪತನಗೊಳಿಸಬಹುದಾಗಿದೆ ಎಂದು ಹೇಳಿದ್ದಾರೆ.
ರಾಜ್ಯ ಬಿಜೆಪಿ ಕಚೇರಿಯಲ್ಲಿ ನಡೆದ ಲೋಕಸಭಾ ಕ್ಷೇತ್ರಗಳ ಮತದಾರರ ಮಹಾ ಚೇತನ ಅಭಿಯಾನ ಸಭೆಯಲ್ಲಿ ಮಾತನಾಡಿದ ಅವರು, ಈ ಸರ್ಕಾರವನ್ನು ಪಾತನಗೊಳಿಸುವುದು ನಮಗೆ ಬೇಕಾಗಿಲ್ಲ ಅದರ ಅಗತ್ಯವೂ ಇಲ್ಲ ನಾವು ಈಗ ಸರ್ಕಾರ ರಚನೆ ಮಾಡಬೇಕಾಗಿಲ್ಲ ಹೀಗಾಗಿ ಶಾಸಕರ ಪಕ್ಷಾಂತರಕ್ಕೆ ಅವಕಾಶ ನೀಡುತ್ತಿಲ್ಲ ಎಂದು ಸ್ಪಷ್ಟಪಡಿಸಿದರು. ಭಾರತೀಯ ಜನತಾ ಪಕ್ಷದಿಂದ ಯಾರೂ ಕಾಂಗ್ರೆಸ್ಸಿಗೆ ಹೋಗುವುದಿಲ್ಲ. ಈ ಕುರಿತಾಗಿ ಬರುತ್ತಿರುವ ಮಾಧ್ಯಮಗಳ ವರದಿಯನ್ನು ನಂಬಬೇಡಿ ಇದಕ್ಕೆ ಪ್ರತಿಯಾಗಿ ಕಾಂಗ್ರೆಸ್ಸಿನ ಶಾಸಕರೇ ಬಿಜೆಪಿಗೆ ಬರಲು ತುದಿಗಾಲ ಮೇಲೆ ನಿಂತಿದ್ದಾರೆ ಎಂದು ತಿಳಿಸಿದರು ಆದರೆ ಗಮನಾರ್ಹ ಸಂಗತಿ ಎಂದರೆ ಬಿಎಲ್ ಸಂತೋಷ್ ಅವರು ನಡೆಸಿದ ಬಿಜೆಪಿ ಮುಖಂಡರ ಈ ಸಭೆಯಲ್ಲಿ ಸಂಸದರು, ಶಾಸಕರು, ಪರಾಜಿತ ಅಭ್ಯರ್ಥಿಗಳು, ಪದಾಧಿಕಾರಿಗಳು ಭಾಗವಹಿಸಿದ್ದರು. ಆದರೆ ಸದ್ಯದಲ್ಲೇ ಕಾಂಗ್ರೆಸ್ ಸೇರಲಿದ್ದಾರೆ ಎಂದು ಹೇಳಲಾಗುತ್ತಿರುವ ಶಾಸಕರಾದ ಎಸ್.ಟಿ. ಸೋಮಶೇಖರ್, ಶಿವರಾಮ ಹೆಬ್ಬಾರ್, ಮಾಜಿ ಸಚಿವರಾದ ಶಂಕರ ಪಾಟೀಲ್ ಮುನೇನಕೊಪ್ಪ, ವಿ ಸೋಮಣ್ಣ ಗೈರಾಗಿರುವುದು ಕುತೂಹಲಕ್ಕೆ ಕಾರಣವಾಗಿದೆ
ಈ ಗೈರು ಹಾಜರಿಯನ್ನು ಪರಿಗಣನೆಗೆ ತೆಗೆದುಕೊಳ್ಳದೆ ಮಾತನಾಡಿದ ಬಿ ಎಲ್ ಸಂತೋಷ್ ಅವರು ಬಾಂಬೆ ಬಾಯ್ಸ್’ ಎಂದು ಹಾಲಿ ಮತ್ತು ಮಾಜಿ ಶಾಸಕರ ಬಗ್ಗೆ ವ್ಯಾಖ್ಯಾನ ಮಾಡುತ್ತಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದರು .
ಕಾಂಗ್ರೆಸ್ ಮತ್ತು ಜೆಡಿಎಸ್ ಅನ್ನು ತೊರೆದುಅಂದು ನಮ್ಮ ಜೊತೆ ಬಂದವರನ್ನು ನಾವೇ ಹಾಗೆಲ್ಲ ಹೇಳುವುದು ಬೇಡ. ಅವರು ಕಷ್ಟ ಕಾಲಕ್ಕೆ ನಮ್ಮ ಜೊತೆ ಬಂದಿದ್ದಾರೆ. ಅವರು ಹೋಗುತ್ತಾರೆ ಎಂದು ನಾವೇ ಹೇಳುವುದು ಸರಿಯಲ್ಲ. ಹಾಗೆಂದು ಬಿಟ್ಟು ಹೋಗುವವರ ಬಗ್ಗೆ ಚಿಂತೆ ಬೇಡ. ಅಷ್ಟಕ್ಕೂ ಯಾರೂ ಕೂಡಾ ಪಕ್ಷ ಬಿಟ್ಟು ಹೋಗುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿಯಾಗಿ ನನಗೆ ಅರಿವಿದೆ. ಪ್ರತಿಪಕ್ಷ ನಾಯಕನ ನೇಮಕ ಆಗಿಲ್ಲ ಅನ್ನುವುದನ್ನೇ ದೊಡ್ಡದು ಮಾಡಿ ಚರ್ಚಿಸುವ ಅಗತ್ಯವೇನು? ಮನೆಯಲ್ಲಿ ಮದುವೆ ಆಗದ ಮಗಳು ಇದ್ದರೆ ಹೊರಹಾಕಲು ಆಗುತ್ತಾ? ಕೆಲಸ ಸಿಗದ ಮಗ ಇದ್ದರೆ ಮನೆಯಿಂದ ಹೊರಹಾಕುತ್ತೀರಾ. ತಡವಾಗಿದೆ ಎಂಬುದು ಎಷ್ಟು ಸತ್ಯವೋ ನೇಮಕ ಆಗುವುದೂ ಅಷ್ಟೇ ಸತ್ಯ ಎಂದು ತಿಳಿಸಿದರು.
ಈ ಹಿಂದೆ ಪಕ್ಷ ಪೂರ್ಣ ನೆಲಸಮವಾಗುತ್ತದೆ ಎಂದಿದ್ದರು. ಆಗ 40 ಸ್ಥಾನ ಗೆದ್ದೆವು, ಈ ಚುನಾವಣೆಯಲ್ಲಿ 66 ಸ್ಥಾನ ಗೆದ್ದಿದ್ದೇವೆ. ಈಗ ವಿಪಕ್ಷವಾಗಿ ಇನ್ನಷ್ಟು ಶಕ್ತಿಯುತವಾಗಿದ್ದೇವೆ. ರಾಜ್ಯಾಧ್ಯಕ್ಷ, ವಿಪಕ್ಷ ನಾಯಕನ ಚರ್ಚೆ ಬಿಟ್ಟು ಸಂಘಟನೆಯಲ್ಲಿ ತೊಡಗಿ ಎಂದು ಅವರು ಪಕ್ಷದ ನಾಯಕರಿಗೆ ಸೂಚನೆ ನೀಡಿದರು.