ತುಮಕೂರು : ತುಮಕೂರು ಜಿಲ್ಲೆಯಲ್ಲಿ ಕೋವಿಡ್ ಮತ್ತೇ ನಿಧಾನ ಗತಿಯಲ್ಲಿ ಏರಿಕೆಯಾಗುತ್ತಿದೆ. ಇಷ್ಟು ದಿನ ಶೂನ್ಯವಾಗಿದ್ದ ಸೋಂಕಿತರ ಸಂಖ್ಯೆ ಈಗ ದಿಢೀರ್ ಏರಿಕೆ ಕಂಡಿದೆ. ತುಮಕೂರು ನಗರದಲ್ಲಿ ಅತಿಹೆಚ್ಚು ಪ್ರಕರಣ ಪತ್ತೆಯಾಗಿದ್ದು ಮತ್ತಷ್ಟು ಆತಂಕ ಹೆಚ್ಚಿದೆ.
ಜಿಲ್ಲೆಯಲ್ಲಿ ಕಳೆದ ಎರಡ್ಮೂರು ತಿಂಗಳಿಂದ ಶೂನ್ಯಕ್ಕೆ ತಲುಪಿದ್ದ ಮಹಾಮಾರಿ ಕೊರೋನಾ ಮತ್ತೆ ವಕ್ಕರಿಸಿದೆ. ನಿಧಾನ ಗತಿಯಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು, ಜಿಲ್ಲೆಯ ಜನರನ್ನು ಚಿಂತೇಗೀಡು ಮಾಡಿದೆ. ಕಳೆದ ಒಂದು ವಾರದಿಂದ ಕ್ರಮೇಣ ಕೋವಿಡ್ ಪ್ರಕರಣ ಏರುಗತಿಯಲ್ಲಿ ಇದೆ. ಇಂದು 8 ಜನರಲ್ಲಿ ಪಾಸಿಟಿವ್ ಕಂಡು ಬಂದಿದೆ. ಕಳೆದ ಮೂರು ತಿಂಗಳಲ್ಲಿ ಅತಿಹೆಚ್ಚು ಸಂಖ್ಯೆ ಇದಾಗಿದೆ. ಅದರ ಜೊತೆಗೆ ಒಟ್ಟು 25 ಸಕ್ರಿಯ ಪ್ರಕರಣಗಳು ಇವೆ. ಅದರಲ್ಲಿ ಒಟ್ಟು18 ಪ್ರಕರಣ ತುಮಕೂರು ನಗರದಾಗಿದ್ದು ನಗರವಾಸಿಗಳಲ್ಲಿ ಆತಂಕ ಮೂಡಿಸಿದೆ ಎಂದು ಡಿಎಚ್ಓ ಮಂಜುನಾಥ್ ಡಿ.ಎನ್ ಮಾಹಿತಿ ನೀಡಿದ್ದಾರೆ.
ಕಳೆದ 20 ದಿನಗಳಿಂದ ಜಿಲ್ಲೆಯಲ್ಲಿ ನಿರಂತರವಾಗಿ ಮಳೆ ಸುರಿಯುತಿದ್ದು, ಜ್ವರ, ನೆಗಡಿ, ಕೆಮ್ಮುನಿಂದ ನರಳುತ್ತಿರುವವರ ಸಂಖ್ಯೆ ಹೆಚ್ಚಾಗಿದೆ. ಪರಿಣಾಮ ಜಿಲ್ಲಾ ಆಸ್ಪತ್ರೆ ರೋಗಿಗಳಿಂದ ತುಂಬಿ ತುಳುಕುತ್ತಿದೆ. ಈ ರೋಗಿಗಳಲ್ಲೇ ಹೆಚ್ಚಾಗಿ ಕೋವಿಡ್ ಪಾಸಿಟಿವ್ ಪ್ರಕರಣಗಳು ಹೆಚ್ಚಾಗಿ ಕಂಡುಬರುತ್ತಿದೆ. ಸಮಾಧಾನಕರ ಸಂಗತಿ ಎಂದರೆ ಸೋಂಕಿತರಲ್ಲಿ ಯಾರಿಗೂ ಗಂಭೀರ ಸ್ವಭಾವ ಕಂಡು ಬಂದಿಲ್ಲ. ಎಲ್ಲರೂ ಕೂಡ ಹೋಂ ಐಸುಲೇಷನಲ್ಲಿ ಚಿಕಿತ್ಸೆ ಪಡೆಯುತಿದ್ದಾರೆ. ಆದಾಗ್ಯೂ ಜಿಲ್ಲಾ ಆಸ್ಪತ್ರೆಯಲ್ಲಿ ಪ್ರತ್ಯೇಕವಾಗಿ ಕೋವಿಡ್ 20 ಹಾಸಿಗೆಗಳ ಕೋವಿಡ್ ಐಸಿಯು ಮೀಸಲಿಡಲಾಗಿದೆ. 6 ಸಾವಿರ ಲೀಟರನ್ ಲಿಕ್ವಿಡ್ ಆಕ್ಸಿಜನ್ ಟ್ಯಾಂಕ್ ಸೇರಿದಂತೆ ಆಕ್ಸಿಜನ್ ಕೊರತೆ ಬಾರಾದಂತೆ ಸಿದ್ದತೆ ಮಾಡಿಕೊಳ್ಳಲಾಗಿದೆ.
ಈ ನಡುವೆ ಸೋಂಕು ತಡೆಗಟ್ಟಲು ಲಸಿಕಾಕರಣ ಮುಂದುವರೆದಿದ್ದು , ಎರಡು ಡೋಸ್ ಹಾಕಿಸಿಕೊಂಡು 60 ದಿನ ಕಳೆದಿರುವ 18 ರಿಂದ 59೫೯ ವಯೋಮಾನದ ಎಲ್ಲರಿಗೂ ಲಸಿಕಾ ಕೇಂದ್ರಗಳಲ್ಲಿ ಉಚಿತ ಲಸಿಕೆ ನೀಡಲಾಗುತ್ತಿದೆ. ಮುಂದಿನ 75 ದಿನಗಳ ಕಾಲ ಬೂಸ್ಟರ್ ಡೋಸ್ ವಿಶೇಷ ಅಭಿಯಾನ ನಡೆಯಲಿದೆ. ಇಷ್ಟು ದಿನ ಸೈಲೆಂಟಾಗಿದ್ದ ಮಹಾಮಾರಿ ಮತ್ತೇ ಸದ್ದು ಮಾಡುತಿದ್ದು ಜಿಲ್ಲೆಯ ಜನರ ನಿದ್ದೆಗೆಡಿಸುತ್ತಿದೆ.