ಬೆಂಗಳೂರು – ರಾಜ್ಯ ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ (Mallikarjuna Kharge) ಅಖಿಲ ಭಾರತ ಕಾಂಗ್ರೆಸ್ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿರುವ ಬೆನ್ನಲ್ಲೇ ಅವರಿಗೆ ಮತ್ತೊಂದು ದೊಡ್ಡ ಹೊಣೆಗಾರಿಕೆ ಸಿಗುವ ಸಾಧ್ಯತೆಗಳಿವೆ.
ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್‍ಡಿಎ ವಿರುದ್ಧ ಸಮರ ಸಾರಲು ಪ್ರತಿಪಕ್ಷಗಳು ಕಟ್ಟಿಕೊಂಡಿರುವ ಇಂಡಿಯಾ ಕೂಟದ ಅಧ್ಯಕ್ಷರಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ನೇಮಕಗೊಳ್ಳುವ ಸಾಧ್ಯತೆಗಳಿವೆ.
ಈ ಹುದ್ದೆಗೆ ಕಾಂಗ್ರೆಸ್ ಹಿರಿಯ ನಾಯಕಿ ಸೋನಿಯಾ ಗಾಂಧಿ ಅವರನ್ನು ನೇಮಕ ಮಾಡಲು ಹಲವರು ಒಲವು ಹೊಂದಿದ್ದರು.ಆದರೆ, ಅವರಿಗೆ ತೀವ್ರ ಸ್ವರೂಪದ ಅನಾರೋಗ್ಯ ಕಾಡುತ್ತಿರುವ ಹಿನ್ನೆಲೆಯಲ್ಲಿ ಅವರ ಬದಲಿಗೆ ಖರ್ಗೆ ಅವರ ಆಯ್ಕೆ ಸೂಕ್ತ ಎಂದು ಎನ್.ಸಿ.ಪಿ.ಮುಖಂಡ ಶರದ್ ಪವಾರ್, ಜೆಡಿಯುನ ನಿತಿಶ್ ಕುಮಾರ್, ಹಾಗೂ ಅರ್.ಜೆ.ಡಿಯ ಲಾಲೂ ಯಾದವ್ ಅವರು ಖರ್ಗೆ ಅವರ ಹೆಸರನ್ನು ಪ್ರಸ್ತಾಪಿಸಿದ್ದಾರೆ ಎನ್ನಲಾಗಿದೆ.
ಖರ್ಗೆ ಅವರು ದಲಿತ ಸಮುದಾಯದ ಪ್ರಭಾವಿ ನಾಯಕರಾಗಿದ್ದು,ಇವರನ್ನು ಇಂಡಿಯಾ ಮೈತ್ರಿ ಕೂಟದ ಉನ್ನತ ನಾಯಕರಾಗಿ ನೇಮಕ ಮಾಡಿದರೆ,ಬಿಜೆಪಿಯಂತಹ ಪಕ್ಷಗಳು ಇವರನ್ನು ಎದುರಿಸಲು ಕಷ್ಟವಾಗಲಿದೆ ಎಂಬ ಅಭಿಪ್ರಾಯ ಹೊಂದಲಾಗಿದೆ.
ಹಾಗೆಯೇ ಇಂಡಿಯಾ ಮೈತ್ರಿ ಕೂಟದ ಸಂಚಾಲಕ ಸ್ಥಾನಕ್ಕೆ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಹಾಗೂ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನಡುವೆ ಪೈಪೋಟಿ ಏರ್ಪಟ್ಟಿದೆ ಎಂದು ಮೂಲಗಳು ಉಲ್ಲೇಖಿಸಿವೆ.
ಹೀಗಾಗಿ ಈ ಪೈಪೋಟಿ ತಪ್ಪಿಸುವ ದೃಷ್ಟಿಯಿಂದ ನಾಲ್ಕು ಸಂಚಾಲಕರ ಹುದ್ದೆಗಳನ್ನು ಸೃಷ್ಟಿಸುವ ಬಗ್ಗೆಯೂ ಪ್ರಸ್ತಾಪಿಸಲಾಗಿದೆ, ಇಂಡಿಯಾ ಮೈತ್ರಿ ಕೂಟಕ್ಕೆಬಈಗ ಹೊಸ ಥೀಮ್ ಸಾಂಗ್ ಅನ್ನು ತಯಾರಿಸಲಾಗುತ್ತಿದೆ ಅದು ಬಹು ಭಾಷೆಗಳಲ್ಲಿ ಇರಲಿದೆ. ಸಂವಿಧಾನದ ಪೀಠಿಕೆಯಲ್ಲಿ ಬರೆದಿರುವ ನಾವು ಭಾರತೀಯರು ಅನ್ನು ವಾಕ್ಯ ಬಳಸಲಾಗುವುದು ಎಂದು ಮೂಲಗಳು ತಿಳಿಸಿವೆ. ಬಣದ ಲಾಂಛನದಲ್ಲಿ ಭಾರತದ ನಕ್ಷೆ ಇಡುವ ಬಗ್ಗೆ ಒಮ್ಮತ ಮೂಡಿದೆ ಎಂದು ತಿಳಿದುಬಂದಿದೆ.