ನವದೆಹಲಿ – ಅಖಿಲ ಭಾರತ ಕಾಂಗ್ರೆಸ್ ಅಧ್ಯಕ್ಷ ಚುನಾವಣೆ ಇದೀಗ ಕುತೂಹಲಕರ ಘಟ್ಟ ತಲುಪಿದೆ ಹಲವು ತಿರುವು ಪಡೆದುಕೊಂಡ ಪ್ರಕ್ರಿಯೆ ಇದೀಗ ಅಂತಿಮ ಘಟ್ಟ ತಲುಪಿದ್ದು ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಏಐಸಿಸಿ ಅಧ್ಯಕ್ಷರಾಗುವ ಸಾಧ್ಯತೆಯಿದೆ.
ರಾಜಸ್ಥಾನದಲ್ಲಿ ನಡೆದ ಬೆಳವಣಿಗೆಗಳ ನಂತರ ಕಾಂಗ್ರೆಸ್ ಚಿಂತಕರ ಚಾವಡಿ ಹಲವು ಸುತ್ತಿನ ಸಮಾಲೋಚನೆ ನಡೆಸಿ, ಪಕ್ಷ ನಿಷ್ಠೆಯ ನಾಯಕ
ಗಾಂಧಿ ಕುಟುಂಬ ಆಪ್ತ, ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಕಣಕ್ಕಿಳಿಸಲು ತೀರ್ಮಾನಿಸಿತು.
ಇಂದು ಮಧ್ಯಾಹ್ನ 3 ಗಂಟೆ ಒಳಗೆ ಮಲ್ಲಿಕಾರ್ಜುನ ಖರ್ಗೆ ಕಾಂಗ್ರೆಸ್ ಅಧ್ಯಕ್ಷ ಚುನಾವಣೆಗೆ ನಾಮಪತ್ರ ಸಲ್ಲಿಸಲಿದ್ದಾರೆ ಎಂದು ಕಾಂಗ್ರೆಸ್ ಮೂಲಗಳು ಹೇಳುತ್ತಿದೆ. ಈ ಮೂಲಕ ಇಡೀ ಚುನಾವಣೆ ಇದೀಗ ಹೊಸ ದಿಕ್ಕಿನತ್ತ ಸಾಗಿದೆ. ಈಗಾಗಲೆ ಕಣದಲ್ಲಿರುವ ಶಶಿ ತರೂರ್ ಹಾಗೂ ದಿಗ್ವಿಜಯ್ ಸಿಂಗ್‌ಗಿಂತ ಇದೀಗ ಮಲ್ಲಿಕಾರ್ಜುನ ಪರವಾಗಿ ಹೆಚ್ಚು ಮತಗಳು ಬೀಳಲಿವೆ. ಇಷ್ಟೇ ಅಲ್ಲ ಮುಂದಿನ ಕಾಂಗ್ರೆಸ್ ಅಧ್ಯಕ್ಷರಾಗುವ ಎಲ್ಲಾ ಸಾಧ್ಯತೆಗಳು ದಟ್ಟವಾಗುತ್ತಿದೆ.
ದಲಿತ ಸಮುದಾಯಕ್ಕೆ ಸೇರಿದ ಪಕ್ವ ರಾಜಕಾರಣಿಯಾಗಿರುವ ಖರ್ಗೆ ಅವರನ್ನು ಲೋಕಸಭೆಯಲ್ಲಿ ಎದುರಿಸಲು ಪರದಾಡಿದ ಪ್ರಧಾನಿ ಮೋದಿ, ಅಮಿತ್ ಶಾ ಜೋಡಿ ಕಳೆದ ಲೋಕಸಭಾ ಚುನಾವಣೆ ಯಲ್ಲಿ ವ್ಯವಸ್ಥಿತ ತಂತ್ರ ರೂಪಿಸಿ ಖರ್ಗೆ ಅವರನ್ನು ಸೋಲಿಸಿದ್ದು ಈಗ ಗುಟ್ಟಾಗಿ ಉಳಿದಿಲ್ಲ.
ನಂತರದಲ್ಲಿ ಅವರು ರಾಜ್ಯಸಭೆಗೆ ಆಯ್ಕೆಯಾಗಿ ಪ್ರತಿಪಕ್ಷ ನಾಯಕರಾಗಿದ್ದಾರೆ.ಸದನದಲ್ಲಿ ಇವರನ್ನು ಎದುರಿಸಲು ಸರ್ಕಾರ ಹರ ಸಾಹಸ ನಡೆಸುತ್ತಿದೆ.
ಇದನ್ನು ಟ್ರಂಪ್ ಕಾರ್ಡ್ ಆಗಿ ಬಳಸಲು ನಿರ್ಧರಿಸಿದ ಕಾಂಗ್ರೆಸ್ ಚಿಂತಕರ ಚಾವಡಿ ಇವರನ್ನು ಕಣಕ್ಕಿಳಿಸಲು ನಿರ್ಧರಿಸಿದೆ.ದಲಿತ ಸಮುದಾಯದ ಪ್ರಭಾವಿ ನಾಯಕ ಕಣಕ್ಕಿಳಿಯುವುದರೊಂದಿಗೆ ಇಡೀ ಪ್ರಕ್ರಿಯೆ ಕುತೂಹಲಕರ ಘಟ್ಟ ತಲುಪಿದೆ.
ಮಲ್ಲಿಕಾರ್ಜುನ ಖರ್ಗೆ ತಮ್ಮ ಸುದೀರ್ಘ ಕಾಂಗ್ರೆಸ್ ಪಕ್ಷದಲ್ಲಿನ ಪಯಣಧಲ್ಲಿ ಒಂದೇ ಒಂದು ಬಾರಿ ಪಕ್ಷದ ವಿರುದ್ಧ ಮಾತನಾಡಿಲ್ಲ. ಯಾವುದೇ ಕ್ಲಿಷ್ಟ ಸಂದರ್ಭದಲ್ಲೂ ಪಕ್ಷದ ಪರವಾಗಿ ಮಾತನಾಡಿದ್ದಾರೆ. ಗಾಂಧಿ ಕುಟುಂಬದ ಆರೋಪಗಳಿಗೆ ಸದನದಲ್ಲಿ ಹಾಗೂ ಹೊರಗೆ ಸಮರ್ಥವಾಗಿ ತಿರುಗೇಟು ನೀಡಿದ ನಾಯಕ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.