ಬೆಂಗಳೂರು,ಫೆ.6-
ಕರ್ನಾಟಕ ಪವರ್ ಟ್ರಾನ್ಸ್‌ಮಿಷನ್ ಕಾರ್ಪೊರೇಷನ್ ಲಿಮಿಟೆಡ್‌ನಲ್ಲಿ (KPTCL) ಕಳೆದ ವರ್ಷ ಜುಲೈ ಮತ್ತು ಆಗಸ್ಟ್‌ನಲ್ಲಿ ನಡೆದ ವಿವಿಧ ಹುದ್ದೆಗಳ ಪರೀಕ್ಷೆಯಲ್ಲಿ 40 ಅಭ್ಯರ್ಥಿಗಳು ಅಕ್ರಮ ಎಸಗಿರುವುದನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಪಟ್ಟಿ ಮಾಡಿದೆ. ಅಕ್ರಮ ಪ್ರಕರಣದಲ್ಲಿ ರಾಜ್ಯದಾದ್ಯಂತ ಬಂಧನಕ್ಕೊಳಗಾದವರ ಸಂಖ್ಯೆ 50 ದಾಟಿದ ಸಮಯದಲ್ಲಿ ಶಂಕಿತ ಅಭ್ಯರ್ಥಿಗಳ ತಾತ್ಕಾಲಿಕ ಪಟ್ಟಿಯನ್ನು ಕೆಇಎ ಬಿಡುಗಡೆ ಮಾಡಿದೆ.
ಹಾಗೆಯೇ ಅವರ ಅಂಕಗಳ ವಿವರಗಳನ್ನು ಪ್ರಕಟಿಸಿದೆ, ಪ್ರಸ್ತುತ ಈ ಪ್ರಕರಣ ಪೊಲೀಸ್ ತನಿಖೆಯಲ್ಲಿದೆ. ಕೆಪಿಟಿಸಿಎಲ್ ನೇಮಕಾತಿಗಾಗಿ ಕಳೆದ ವರ್ಷ ಜುಲೈ 23 , 24 ಮತ್ತು ಆಗಸ್ಟ್ 7 ರಂದು ನಡೆದ 100 ಅಂಕಗಳ ಪರೀಕ್ಷೆಯಲ್ಲಿ 40 ಅಭ್ಯರ್ಥಿಗಳು 8.5 ರಿಂದ 47.25 ಅಂಕಗಳನ್ನು ಗಳಿಸಿದ್ದಾರೆ. ಈ ಅಂಕ ಗಳಿಕೆಯ ಲೆಕ್ಕಾಚಾರದಲ್ಲಿ ಅಕ್ರಮ ನಡೆದಿದೆ ಎಂಬ ದೂರುಗಳ ಆಧಾರದಲ್ಲಿ ತನಿಖೆ ನಡೆಸಲಾಯಿತು.
ಈ ವೇಳೆ ಐಶ್ವರ್ಯ ಆರ್ ಬಾಗೇವಾಡೆ, ವೈಷ್ಣವಿ ಸನದಿ, ಸುಧಾರಾಣಿ ಹೂವಪ್ಪ ಮತ್ತು ಬಸವರಾಜ ಹವಾಡಿ ಎಂಬ ನಾಲ್ಕು ಅಭ್ಯರ್ಥಿಗಳನ್ನು ಈ ವರ್ಷದ ಆರಂಭದಲ್ಲಿ ಬೆಳಗಾವಿ ಪೊಲೀಸರು ವಶಕ್ಕೆ ಪಡೆದಿದ್ದರು. ಇವರುಗಳು ಪರೀಕ್ಷೆಯ ಸಮಯದಲ್ಲಿ ಎಲೆಕ್ಟ್ರಾನಿಕ್ ಸಾಧನಗಳು, ಮೊಬೈಲ್ ಫೋನ್ ಮತ್ತು ಮೈಕ್ರೋಚಿಪ್‌ಗಳನ್ನು ಬಳಸಿದ್ದು ಸಾಬೀತಾಗಿತ್ತು. ಬಳಿಕ ಪೊಲೀಸರು ಇವರನ್ನು ಬಂಧಿಸಿದ್ದರು. ಪ್ರಕರಣ ತನಿಖೆ ನಡೆಸಿದ ಪೊಲೀಸರು ಈ ಅಭ್ಯರ್ಥಿಗಳಿಗೆ ಸಹಾಯ ಮಾಡಿದ ಅತಿಥಿ ಉಪನ್ಯಾಸಕರು ಮತ್ತು ಅಕ್ರಮಕ್ಕೆ ಬಳಸಲಾದ ಸಾಮಗ್ರಿಗಳನ್ನು ಪೂರೈಸುವಲ್ಲಿ ಸಹಾಯ ಮಾಡಿದ ಇತರ ವ್ಯಕ್ತಿಗಳನ್ನು ವಶಕ್ಕೆ ಪಡೆದರು. ಇದೀಗ ಅಕ್ರಮ ಆರೋಪ ಎದುರಿಸುತ್ತಿರುವ ಅಭ್ಯರ್ಥಿಗಳನ್ನು ಕೆಇಎ ಪಟ್ಟಿ ಮಾಡಿದೆ.ಈ ಪಟ್ಟಿಯಲ್ಲಿರುವ ಅಭ್ಯರ್ಥಿಗಳು ಇನ್ನೂ ಪೊಲೀಸರ ವಿಚಾರಣೆಯಲ್ಲಿದ್ದಾರೆ ಎಂದು ಹೇಳಿದೆ.