ಬೆಂಗಳೂರು, ಏ.14: ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳಿಂದ ಮಹಿಳೆಯರು ಸ್ವಲ್ಪಮಟ್ಟಿಗೆ ದಾರಿ ತಪ್ಪಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ (Kumaraswamy) ಹೇಳಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ರಾಜ್ಯ ಮಹಿಳಾ ಆಯೋಗ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡಿದೆ.
ತುಮಕೂರು ಲೋಕಸಭಾ ಕ್ಷೇತ್ರ ವ್ಯಾಪ್ತಿಯ ತುರುವೇಕೆರೆಯಲ್ಲಿ ಬಿಜೆಪಿ ಅಭ್ಯರ್ಥಿಗಳ ಪರ ಚುನಾವಣಾ ಪ್ರಚಾರದಲ್ಲಿ ಪಾಲ್ಗೊಂಡಿದ್ದ ಕುಮಾರಸ್ವಾಮಿ ಅವರು ಗ್ಯಾರಂಟಿಗಳನ್ನು ಟೀಕಿಸುವ ಬರದಲ್ಲಿ ಮಹಿಳೆಯರ ಕುರಿತು ಆಡಿರುವ ಮಾತು ಇದೀಗ ಸಾಕಷ್ಟು ವಿವಾದವನ್ನು ಸೃಷ್ಠಿಸಿದೆ.
ಕುಮಾರಸ್ವಾಮಿ ಅವರ ಹೇಳಿಕೆಯ ಬಗ್ಗೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಚರ್ಚೆ ನಡೆಯುತ್ತಿರುವ ಬೆನ್ನಲ್ಲೇ ಅದನ್ನು ಗಂಭೀರವಾಗಿ ಪರಿಗಣಿಸಿರುವ ಮಹಿಳಾ ಆಯೋಗ ಕುಮಾರಸ್ವಾಮಿ ವಿರುದ್ಧ ಪ್ರಕರಣ ದಾಖಲಿಸಿ ಕೊಂಡಿದೆ
ಕುಮಾರಸ್ವಾಮಿಯವರ ಭಾಷಣದ ಬಗ್ಗೆ ಬಂದಿರುವ ಪತ್ರಿಕಾ ವರದಿಗಳು ಮತ್ತು ದೃಶ್ಯಾವಳಿ
ಗಳನ್ನೊಳಗೊಂಡ ದಾಖಲೆಗಳೊಂದಿಗೆ ಕುಮಾರಸ್ವಾಮಿ ಅವರಿಗೆ ನೋಟಿಸ್ ಜಾರಿಗೊಳಿಸಲು ಮಹಿಳಾ ಆಯೋಗ ಸಿದ್ಧತೆ ನಡೆಸಿದೆ.
ಕಾಂಗ್ರೆಸ್ ಆಕ್ರೋಶ:
ಕುಮಾರಸ್ವಾಮಿ ಅವರ ಹೇಳಿಕೆಯ ಬಗ್ಗೆ ಕಿಡಿಕಾರಿರುವ ಕಾಂಗ್ರೆಸ್ ಮಹಿಳೆಯರ ಸಬಲೀಕರಣ ಸ್ವಾಭಿಮಾನದ ಬದುಕನ್ನು ಸಹಿಸಲು ಸಾಧ್ಯವಿಲ್ಲದ ಮನುವಾದಿ ಕುಮಾರಸ್ವಾಮಿ ರಾಜ್ಯದ ಮಹಿಳೆಯರಿಗೆ ಅಪಮಾನ ಮಾಡಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷರ ರಾಜಕೀಯ ಕಾರ್ಯದರ್ಶಿ ದೀಪಕ್ ತಿಮ್ಮಯ ಕಿಡಿ ಕಾರಿದ್ದಾರೆ.
ಮಾಜಿ ಸಂಸದ ಉಗ್ರಪ್ಪ ಅವರೊಂದಿಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಬಿಜೆಪಿ ಜೊತೆ ಸಖ್ಯ ಮಾಡುವ ಮೂಲಕ ಕುಮಾರಸ್ವಾಮಿಯವರು ತಮ್ಮ ಸ್ವಾಭಿಮಾನ ಗೌರವ ಹಾಗೂ ಬುದ್ಧಿವಂತಿಕೆಯನ್ನು ಅವರೊಂದಿಗೆ ವಿಲೀನ ಮಾಡಿದ್ದಾರೆ ಎಂದು ಟೀಕಿಸಿದರು.
ಶಕ್ತಿ, ಗೃಹಲಕ್ಷ್ಮಿ ಮತ್ತು ಗೃಹಜೋತಿ ಯೋಜನೆಗಳು ರಾಜ್ಯದ ಬಡವರ ಮನೆಯ ಬೆಳಕಾಗಿವೆ. ಇಂತಹ ಬೆಳಕು ತರುವ ಯೋಜನೆಗಳು ಕುಮಾರಸ್ವಾಮಿಯವರಿಗೆ ದಾರಿ ತಪ್ಪಿದಂತೆ ಕಾಣುತ್ತಿವೆ ಎಂದು ಟೀಕಿಸಿದರು.
ಗೃಹಲಕ್ಷ್ಮಿ ಯೋಜನೆಯ ಹಣದಿಂದ ತಮ್ಮ ಮಕ್ಕಳನ್ನು ಓದಿಸುವ ಕುಟುಂಬ ಸದಸ್ಯರ ಆಸ್ಪತ್ರೆ ಔಷಧಿಗಳ ಖರ್ಚು ವೆಚ್ಚ ನೋಡಿಕೊಳ್ಳುವ ಮಹಿಳೆಯರು ದಾರಿ ತಪ್ಪಿದಂತೆ ಕಾಣುತ್ತಿರುವರೆ ಎಂದು ಪ್ರಶ್ನಿಸಿದ ಅವರು ಇಂತಹ ಹೇಳಿಕೆ ನೀಡಿರುವ ಕುಮಾರಸ್ವಾಮಿ ಕ್ಷಮೆಗೂ ಕೂಡ ಅರ್ಹರಲ್ಲ ಎಂದು ವಾಗ್ದಾಳಿ ನಡೆಸಿದರು.