ಬೆಂಗಳೂರು,ಅ.19 -ನಗರದ ವಿವಿಧ ಪ್ರದೇಶಗಳಲ್ಲಿ ಕಳೆದ ಒಂದು ವರ್ಷದಲ್ಲಿ ಹಲವು ಅಗ್ನಿ ದುರಂತಗಳು ಸಂಭವಿಸುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಅಗ್ನಿಶಾಮಕದಳದ ಪೊಲೀಸ್ ಮಹಾನಿರ್ದೇಶಕ ಕಮಲ್ ಪಂತ್ ಅವರು ಪಬ್, ಹೋಟೆಲ್, ರೆಸ್ಟೋರೆಂಟ್, ಬೃಹತ್ ಮಳಿಗೆಗಳಲ್ಲಿ ಆಗ್ನಿಶಾಮಕ ಸುರಕ್ಷಾ ಕ್ರಮಗಳನ್ನು (Fire Safety) ಪರಿಶೀಲನೆ ನಡೆಸಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಕಳೆದ ಒಂದು ತಿಂಗಳಲ್ಲಿ ವಿಜಯನಗರ, ಚಾಮರಾಜಪೇಟೆ, ಲಗ್ಗೆರೆ ಮತ್ತು ನಿನ್ನೆ ಕೋರಮಂಗಲದಲ್ಲಿ ಅಗ್ನಿ ಅವಘಡ ಸಂಭವಿಸಿತ್ತು. ಈ ದುರಂತದಲ್ಲಿ ಅಪಾರ ಪ್ರಮಾಣದ ಆಸ್ತ-ಪಾಸ್ತಿ ಹಾನಿಯಾಗಿದೆ. ಪದೇ ಪದೇ ಅಗ್ನಿ ಅವಘಡಗಳು ಸಂಭವಿಸುತ್ತಿರುವ ಹಿನ್ನೆಲೆಯಲ್ಲಿ ನಗರದ ಪಬ್, ಹೋಟೆಲ್, ರೆಸ್ಟೋರೆಂಟ್, ಬೃಹತ್ ಮಳಿಗೆಗಳನ್ನು ಪರಿಶೀಲನೆ ನಡೆಸುವಂತೆ ಇಲಾಖೆ ಅಧಿಕಾರಿಗಳಿಗೆ ಕಮಲ್ ಪಂತ್ ಅವರು ಮೌಖಿಕ ಆದೇಶ ನೀಡಿದ್ದಾರೆ.
ಇತ್ತಿಚೀನ ಅಗ್ನಿ ಅವಘಡಗಳಲ್ಲಿ ಸೂಕ್ತ ಮುಂಜಾಗ್ರತ ಕ್ರಮ ಅನುಸರಿಸುತ್ತಿಲ್ಲ. ತ್ವರಿತಗತಿಯಲ್ಲಿ ಬೆಂಕಿ ನಂದಿಸುವ ಸಲಕರಣೆ ವ್ಯವಸ್ಥಿತಗೊಳಿಸದಿರುವುದು ಕಂಡು ಬಂದಿದೆ. ಹೀಗಾಗಿ ಮಳಿಗೆಗಳು ಸೇರಿದಂತೆ ನಗರದ ಎಲ್ಲಾ ಬಹುಮಹಡಿ ಕಟ್ಟಡಗಳು, ಅಪಾರ್ಟ್ಮೆಂಟ್ಗಳ ಪರಿಶೀಲನೆಗೆ ಸೂಚನೆ ನೀಡಿದ್ದಾರೆ. ನಿಯಮ ಪಾಲಿಸದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದಾರೆ. ಹೀಗಾಗಿ ಅಗ್ನಿಶಾಮಕ ಇಲಾಖೆ ಅಧಿಕಾರಿ ಮತ್ತು ಸಿಬ್ಬಂದಿಗಳು ನಿಯಮಿತವಾಗಿ ಪರಿಶೀಲನೆ ನಡೆಸಲಿದ್ದಾರೆ.