ಬೆಂಗಳೂರು, ಮಾ- 30 ಲೋಕಸಭೆ ಚುನಾವಣೆಯ (Lok Sabha 2024) ಮಾದರಿ ನೀತಿ ಸಂಹಿತೆ ಜಾರಿಗೆ ಬಂದ ಬಳಿಕ ಈವರೆಗೆ ರಾಜ್ಯದಲ್ಲಿ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ 20.85 ಕೋಟಿ ನಗದು 27 ಕೋಟಿ ರೂ ಮೌಲ್ಯದ ಮದ್ಯವನ್ನು ಜಪ್ತಿ ಮಾಡಲಾಗಿದೆ.
ಮಾದರಿ ನೀತಿ ಸಂಹಿತೆಯು ಮಾ.16 ರಿಂದ ಜಾರಿಗೆ ಬಂದಿದ್ದು,ರಾಜ್ಯದಲ್ಲಿ ಇಲ್ಲಿಯವರೆಗೆ ಒಟ್ಟು 62.42 ಕೋಟಿ ರೂ. ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.
ಕರ್ನಾಟಕ ಮುಖ್ಯ ಚುನಾವಣಾಧಿಕಾರಿಗಳ ಕಚೇರಿ ಹೊರಡಿಸಿರುವ ಪ್ರಕಟಣೆಯ ಪ್ರಕಾರ, ಮಾದರಿ ನೀತಿ ಸಂಹಿತೆ ಜಾರಿಯಾದಾಗಿನಿಂದ ಫ್ಲೈಯಿಂಗ್ ಸ್ಕ್ವಾಡ್, ಸ್ಟ್ಯಾಟಿಕ್ ಸರ್ವೆಲೆನ್ಸ್ ತಂಡಗಳು ಮತ್ತು ಪೊಲೀಸ್ ಅಧಿಕಾರಿಗಳು 20.85 ಕೋಟಿ ನಗದು, 70.86 ಲಕ್ಷ ರೂಪಾಯಿ ಮೌಲ್ಯದ ವಸ್ತುಗಳು (ಮತದಾರರಿಗೆ ಉಚಿತವಾಗಿ ಹಂಚಲು ಕೊಂಡೊಯ್ಯುತ್ತಿದ್ದುದು), 27 ಕೋಟಿ ರೂಪಾಯಿಗೂ ಅಧಿಕ ಮೌಲ್ಯದ 8.63 ಲಕ್ಷ ಲೀಟರ್ ಮದ್ಯವನ್ನು ವಶಪಡಿಸಿಕೊಂಡಿದ್ದಾರೆ.
1.47 ಕೋಟಿ ರೂ.ಗೂ ಅಧಿಕ ಮೌಲ್ಯದ 211.23 ಕೆಜಿ ಮಾದಕ ವಸ್ತುಗಳು, 9 ಕೋಟಿ ರೂ.ಗೂ ಅಧಿಕ ಮೌಲ್ಯದ 15 ಕೆಜಿಗಿಂತ ಹೆಚ್ಚಿನ ಚಿನ್ನ, 27 ಲಕ್ಷ ರೂ.ಗೂ ಅಧಿಕ ಮೌಲ್ಯದ 59.04 ಕೆಜಿ ಬೆಳ್ಳಿ ಹಾಗೂ 9 ಲಕ್ಷ ರೂ. ಮೌಲ್ಯದ 21.17 ಕ್ಯಾರೆಟ್ ವಜ್ರವನ್ನು ವಶಪಡಿಸಿಕೊಳ್ಳಲಾಗಿದೆ.
ನಗದು, ಮದ್ಯ, ಡ್ರಗ್ಸ್, ಬೆಲೆಬಾಳುವ ಲೋಹ ಮತ್ತು ಉಚಿತವಾಗಿ ಹಂಚಲು ಕೊಂಡೊಯ್ಯುತ್ತಿದ್ದ ವಸ್ತುಗಳನ್ನು ವಶಪಡಿಸಿಕೊಂಡ ಬಗ್ಗೆ ಅಧಿಕಾರಿಗಳು 969 ಎಫ್‌ಐಆರ್‌ಗಳನ್ನು ದಾಖಲಿಸಿದ್ದಾರೆ.
ತುಮಕೂರಿನಲ್ಲಿ 14 ಲಕ್ಷ ಹಣ, ಚಿನ್ನ ಜಪ್ತಿ
ತುಮಕೂರಿನಲ್ಲಿ ಶುಕ್ರವಾರ ಕಾರ್ಯಾಚರಣೆ ನಡೆಸಿರುವ ಚುನಾವಣಾ ಅಧಿಕಾರಿಗಳು ಬಟವಾಡಿ ಚೆಕ್ಪೋಸ್ಟ್ನಲ್ಲಿ ಆಂಧ್ರ ಮೂಲದ ನಾಗಭೂಷಣ್ ಎಂಬುವರು ಬಸ್ನಲ್ಲಿ 14.63 ಲಕ್ಷ ಹಣ, 128 ಗ್ರಾಂ ಚಿನ್ನಾಭರಣ ಸಾಗಿಸುತ್ತಿದ್ದುದನ್ನು ಪತ್ತೆ ಮಾಡಿ ವಶಪಡಿಸಿಕೊಂಡಿದ್ದಾರೆ.
ಎಲ್ಲೆಲ್ಲಿ ಏನೇನು ಜಪ್ತಿ:
ತಮಿಳುನಾಡು ಭಾಗದ ಜೂಜುವಾಡಿ ಚೆಕ್ಪೋಸ್ಟ್ನಲ್ಲಿ ಬೆಂಗಳೂರಿನಿಂದ ಹೊಸೂರು ಕಡೆ ತೆರಳುತ್ತಿದ್ದ ಕಾರಿನಲ್ಲಿ ದಾಖಲೆ ಇಲ್ಲದ 10 ಲಕ್ಷ ರೂ ನಗದನ್ನು ನಿನ್ನೆ ಜಪ್ತಿ ಮಾಡಲಾಗಿದೆ.
ಬೆಳಗಾವಿ ಜಿಲ್ಲೆ ಖಾನಾಪುರ ತಾಲೂಕಿನ ಕಣಕುಂಬಿ ಚೆಕ್ ಪೋಸ್ಟ್ನಲ್ಲಿ 7 ಲಕ್ಷ 98 ಸಾವಿರ ರೂಗಳನ್ನು ಜಪ್ತಿಮಾಡಲಾಗಿದೆ. ವ್ಯಕ್ತಿಯೊಬ್ಬ ಗೋವಾದಿಂದ ಬೆಳಗಾವಿಗೆ ಬಸ್ನಲ್ಲಿ ಹಣ ಸಾಗಿಸ್ತಿದ್ದ ವೇಳೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಬಳ್ಳಾರಿ ಜಿಲ್ಲೆ ಕಂಪ್ಲಿಯ ಕೋಟೆ ಚೆಕ್ಪೋಸ್ಟ್ನಲ್ಲಿ ದಾಖಲೆ ಇಲ್ಲದೆ ಬೈಕ್ನಲ್ಲಿ ಸಾಗಿಸುತ್ತಿದ್ದ 8.23 ಲಕ್ಷ ರೂ. ನಗದು ಜಪ್ತಿ ಮಾಡಿಕೊಳ್ಳಲಾಗಿದೆ.
3.289 ಕೆಜಿ ಬೆಳ್ಳಿ ವಶ:
ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ನಾಲವಾರದಲ್ಲಿ 6 ಲಕ್ಷ 37 ಸಾವಿರ ಮೌಲ್ಯದ ಚಿನ್ನ ಜಪ್ತಿ ಮಾಡಲಾಗಿದೆ. ಸರ್ಕಾರಿ ಬಸ್ನಲ್ಲಿ 114 ಗ್ರಾಂ ಚಿನ್ನ, 3 ಕೆಜಿ 289 ಗ್ರಾಂ ಬೆಳ್ಳಿ ಆಭರಣಗಳನ್ನ ವಶಕ್ಕೆ ಪಡೆಯಲಾಗಿದೆ. ಮತ್ತೊಂದೆಡೆ, ದೊಡ್ಡಬಳ್ಳಾಪುರ ತಾಲೂಕಿನ ಹುಲಿಕುಂಟೆ ಚೆಕ್ಪೋಸ್ಟ್ನಲ್ಲಿ 2 ಲಕ್ಷ, ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲೂಕಿನ ಶಿರಾಳಕೊಪ್ಪ-ಚಿತ್ರದಹಳ್ಳಿ ರಸ್ತೆಯಲ್ಲಿ 1 ಲಕ್ಷ 50 ಸಾವಿರ ಹಣ, ಅತ್ತ ಧಾರವಾಡದ ಕೃಷಿ ವಿವಿ ಬಳಿಯ ಚೆಕ್ಪೋಸ್ಟ್ನಲ್ಲಿ ದಾಖಲೆ ಇಲ್ಲದೆ ಸಾಗಿಸುತ್ತಿದ್ದ 3 ಲಕ್ಷ 70 ಸಾವಿರ ರೂ ಜಪ್ತಿ ಮಾಡಲಾಗಿದೆ.
ರಾಜ್ಯದಲ್ಲಿ ಏಪ್ರಿಲ್ 26 ಮತ್ತು ಮೇ 7 ರಂದು ಎರಡು ಹಂತಗಳಲ್ಲಿ 28 ಕ್ಷೇತ್ರಗಳಿಗೆ ಲೋಕಸಭೆ ಚುನಾವಣೆ ನಡೆಯಲಿದೆ.