ಮಾಲ್ಡೋವಾ(ಯುರೋಪ್): ಸಾಮಾನ್ಯವಾಗಿ ದೇಶದ ಪ್ರಧಾನಿ, ಅಧ್ಯಕ್ಷರಾದವರು ಹೇಗಿರ್ತಾರೆ? ಆಡಂಬರದ ವೈಭವೋಪೇತ ಜೀವನಕ್ಕೇ ಹೆಸರಾಗಿರ್ತಾರೆ. ವಿದೇಶ ಪ್ರವಾಸ ಕೈಗೊಳ್ಳುವಾಗ ನೂರಾರು ಕೋಟಿಯ ವಿಶೇಷ ವಿಮಾನದಲ್ಲೋ, ಖಾಸಗಿ ವಿಮಾನದಲ್ಲೋ, ಯುದ್ಧ ವಿಮಾನದಲ್ಲೋ ಅಥವ ವಿಮಾನದ ಶ್ರೇಷ್ಠ ದರ್ಜೆಯ ವಿಭಾಗದಲ್ಲೋ ಪ್ರಯಾಣಿಸುತ್ತಾರೆ. ಅವರ ಕಾರಿನ ಹಿಂದೆ, ಮುಂದೆ, ಅಕ್ಕ ಪಕ್ಕ ಕಾರುಗಳದೇ ಕಾರುಬಾರು. ಇವರ ಒಂದು ದಿನದ ಖರ್ಚೇ ಹತ್ತಾರು ಕೋಟಿ ದಾಟಿರುತ್ತದೆ.
ಆದರೆ, ಮಾಲ್ಡೋವಾ ಅಧ್ಯಕ್ಷೆ ಮಯಾ ಸಾಂಡು ಇದಕ್ಕೆಲ್ಲ ಅಪವಾದ. ಐಷಾರಾಮಿ ಜೀವನದಿಂದ ಬಲು ದೂರ. ತಮ್ಮ ಸರಳತೆ ಹಾಗು ಮಿತವ್ಯಯದ ಗುಣಕ್ಕಾಗಿಯೇ ಅವರು ಹೆಚ್ವು ಪ್ರಸಿದ್ಧರಾಗಿದ್ದಾರೆ.
ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ ಬಳಿಕ ಬಹಳ ಸಂಯಮದ, ಸರಳ ಆಡಳಿತಗಾರ್ತಿ ಎನಿಸಿಕೊಂಡಿದ್ದಾರೆ. ಇದೇ ಕಾರಣಕ್ಕಾಗಿಯೇ ಅಲ್ಲಿನ ಜನ ಇವರನ್ನು ಕೊಂಡಾಡುತ್ತಿದ್ದಾರೆ. ಒಳ್ಳೆಯವಳ ಹಾಗೂ ಸಮರ್ಥಳ ಕೈಯಲ್ಲಿ ನಾವಿದ್ದೇವೆ ಎಂದು ಹೆಮ್ಮೆಪಡುತ್ತಿದ್ದಾರೆ.
ಶನಿವಾರ(ಮೇ 28) ಅವರು ಮ್ಯಾಕ್ರೋನ್ ಅವರನ್ನು ಭೇಟಿಯಾಗಲು ಬ್ರಸೆಲ್ಸ್‌ಗೆ ತೆರಳಿದಾಗ ಪ್ರಯಾಣಕ್ಕೆ ಸಾಮಾನ್ಯ ಗುಣಮಟ್ಟದ ಮಿತವ್ಯಯದ ವಿಮಾನದಲ್ಲಿ ಸಾಮಾನ್ಯ ದರ್ಜೆಯಲ್ಲೇ ಇತರ ಪ್ರಯಾಣಿಕರೊಂದಿಗೆ ಪ್ರಯಾಣಿಸಿದ್ದಾರೆ. ಅಷ್ಟೇ ಅಲ್ಲ, ವಿಮಾನದಲ್ಲಿ ಸುಮಾರು ಮುನ್ನೂರು ರೂಪಾಯಿ ನೀಡಿ ಸ್ಯಾಂಡ್‌ವಿಚ್ ಸೇವಿಸಿದ್ದಾರೆ.
ಈ ದೇಶದಲ್ಲಿ ಸದ್ಯ ಯಾವುದೇ ಚುನಾವಣೆಯಿಲ್ಲ. ಹೀಗಾಗಿ ಇದು ಚುನಾವಣಾ ಗಿಮಿಕ್ ಕೂಡ ಅಲ್ಲ. ಮೈಯಾ ಸಂಡು ಸದಾ ಇರುವುದೇ ಹೀಗೆ. ಜನರ ದುಡ್ಡನ್ನು ಬಳಸುವಾಗ ಅತಿ ಹೆಚ್ವು ಜಾಗರೂಕರಾಗಿರುತ್ತಾರೆ ಎಂದು ಮಾಲ್ಡೋವಾ ದೇಶದ ಜನ ಮಾತನಾಡಿಕೊಳ್ಳುತ್ತಾರೆಂದು ಮಾಧ್ಯಮಗಳು ವರದಿ ಮಾಡಿವೆ.
ತಮ್ಮ ಕರ್ತವ್ಯ ನಿರ್ವಹಣೆಯಲ್ಲಿ ಸದಾ ಬ್ಯುಸಿಯಾಗಿರುವ ಮೈಯಾ ಸಂಡು, ಹಾರ್ವರ್ಡ್ ವಿಶ್ವವಿದ್ಯಾಲಯದ ಪದವೀಧರೆ. ಆದರೂ ಸರಳ- ಸಜ್ಜನಿಕೆ, ಮಿತವ್ಯಯದಿಂದಲೇ ಅವರು ಮನೆಮಾತಾಗಿದ್ದಾರೆ. ಮೈಯಾ ಸಂಡು ಅವರನ್ನು ನೋಡಿಯಾದರೂ ನಮ್ಮ ನಾಯಕರು ಪಾಠ ಕಲಿಯಬಹುದೇ?