ರಾಜ್ಯ ವಿಧಾನಸಭೆಯಿಂದ ರಾಜ್ಯ ಸಭೆಯ ನಾಲ್ಕು ಸ್ಥಾನಗಳಿಗೆ ನಡೆಯಲಿರುವ ಚುನಾವಣೆಯಲ್ಲಿ ಕಾಂಗ್ರೆಸ್ ನ ಎರಡನೇ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಮನ್ಸೂರ್ ಅಲಿಖಾನ್ ತಮ್ಮ ಉಮೇದುವಾರಿಕೆ ಹಿಂಪಡೆಯುವ ಸಾಧ್ಯತೆಯಿದೆ.
ಕಾಂಗ್ರೆಸ್ ಹೈಕಮಾಂಡ್ ಸೂಚನೆ ಹಿನ್ನೆಲೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನಾಮಪತ್ರ ವಾಪಸ್ ಪಡೆಯುವಂತೆ ಮನ್ಸೂರ್ ಅಲಿಖಾನ್ ಅವರಿಗೆ ಸೂಚಿಸಿದ್ದಾರೆ. ಇಂದು ರಾತ್ರಿ ಈ ಸಂಬಂಧ ಮತ್ತೊಂದು ಸುತ್ತಿನ ಸಭೆ ನಡೆಯಲಿದ್ದು ನಾಳೆ ಅಧಿಕೃತವಾಗಿ ತೀರ್ಮಾನ ಪ್ರಕಟಿಸಲಿದ್ದಾರೆ.
ವಿಧಾನಸಭೆಯ ಪಕ್ಷವಾರು ಸಂಖ್ಯಾಬಲದ ಆಧಾರದಲ್ಲಿ ನಾಲ್ಕನೆ ಅಭ್ಯರ್ಥಿ ಆಯ್ಕೆಗೆ ಕಾಂಗ್ರೆಸ್ ಅಥವ ಬಿಜೆಪಿಗೆ ಜೆಡಿಎಸ್ ಬೆಂಬಲ ಅತ್ಯಗತ್ಯ. ಹೀಗಾಗಿ ಎರಡೂ ಪಕ್ಷಗಳು ಜೆಡಿಎಸ್ ಬೆಂಬಲಕ್ಕೆ ಪ್ರಯತ್ನ ನಡೆದಿದ್ದವು. ಇದರ ನಡುವೆ ಕಾಂಗ್ರೆಸ್ ಬೆಂಬಲದೊಂದಿಗೆ ಜೆಡಿಎಸ್ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ಉದ್ಯಮಿ ಕುಪೇಂದ್ರರೆಡ್ಡಿ ಪ್ರಯತ್ನ ನಡೆಸಿದ್ದರು. ಅಲ್ಲದೆ ಕಾಂಗ್ರೆಸ್ ನಾಯಕರ ಜೊತೆ ಮಾತುಕತೆ ನಡೆಸಿದ್ದರು. ಈ ಬೆಳವಣಿಗೆಗಳ ನಡುವೆ ಜೆಡಿಎಸ್ ಪಾಳಯದಲ್ಲಿ ಬಿಜೆಪಿಯ ಅಭ್ಯರ್ಥಿ ಬೆಂಬಲಿಸುವ ಮಾತುಕತೆಗಳು ನಡೆದಿದ್ದವು. ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿದ ಬಿಜೆಪಿ ಮುಖಂಡ ಲೆಹರ್ ಸಿಂಗ್ ತಾವು ನಾಲ್ಕನೇ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದು ತಮ್ಮನ್ನು ಬೆಂಬಲಿಸುವಂತೆ ಮನವಿ ಮಾಡಿದ್ದರು. ಮತ್ತೊಂದೆಡೆ ಕುಪೇಂದ್ರರೆಡ್ಡಿ ಅವರನ್ನು ಭೇಟಿ ಮಾಡಲು ನಿರಾಕರಿಸಿದ ಕುಮಾರಸ್ವಾಮಿ ಆರೋಗ್ಯ ಕಾರಣಕ್ಕಾಗಿ ಸಿಂಗ್ ಪುರಕ್ಕೆ ತೆರಳಿದ್ದು ಅಚ್ಚರಿಗೆ ಕಾರಣವಾಗಿತ್ತು. ಇದರಿಂದಾಗಿ ಜೆಡಿಎಸ್ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಬದಲಿಗೆ ಬಿಜೆಪಿಯನ್ನು ಬೆಂಬಲಿಸಲಿದೆ ಎಂಬ ಸುದ್ದಿಗಳು ದಟ್ಟವಾಗಿದ್ದವು.
ಈ ವೇಳೆ ಕಣಕ್ಕಿಳಿದ ಮಾಜಿ ಸಿಎಂ ಸಿದ್ದರಾಮಯ್ಯ ಮಾಡಿದ ತಂತ್ರಗಾರಿಕೆ ಎಲ್ಲಾ ಲೆಕ್ಕಾಚಾರಗಳನ್ನು ತಲೆಕೆಳಗು ಮಾಡಿತು.
ದಿಡೀರ್ ಎಂಬಂತೆ ಕಾಂಗ್ರೆಸ್ ಎರಡನೇ ಅಭ್ಯರ್ಥಿಯನ್ನು ಕಣಕ್ಕಿಳಿಸಿತು. ಅದೂ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ ಮನ್ಸೂರ್ ಅಲಿ ಖಾನ್ ಅವರನ್ನು ಕಣಕ್ಕಿಳಿಸಿ ಜೆಡಿಎಸ್ ಗೆ ಸವಾಲು ಹಾಕಿದರು. ನಿಮ್ಮ ಅಯ್ಕೆ ಕೋಮುವಾದಿಯೇ, ಅಲ್ಪಸಂಖ್ಯಾತರ ಪರ ನಿಮ್ಮ ನಿಲುವೇನು? ಎಂದು ಪ್ರಶ್ನಿಸಿದರು.
ಸಿದ್ದರಾಮಯ್ಯ ಉರುಳಿಸಿದ ಈ ಅಸ್ತ್ರ ಕುಮಾರಸ್ವಾಮಿ ಅವರನ್ನು ಕಂಗೆಡುವಂತೆ ಮಾಡಿತು. ಬಿಜೆಪಿ ಬೆಂಬಲಿಸುವ ತಮ್ಮ ನಿಲುವು ಮುಂದಿನ ದಿನಗಳಲ್ಲಿ ದುಬಾರಿಯಾಗಬಹುದು ಎಂಬ ಮಾಜಿ ಪ್ರಧಾನಿ ದೇವೇಗೌಡರ ಕಿವಿಮಾತಿಗೆ ಒಲ್ಲದ ಮನಸ್ಸಿನಿಂದ ಓಗೊಟ್ಟು ಕುಪೇಂದ್ರರೆಡ್ಡಿ ಅವರನ್ನು ಒಲ್ಲದ ಮನಸ್ಸಿನಿಂದಲೇ ಕಣಕ್ಕಿಳಿಸಲು ಅನುಮತಿಸಿದರು.
ಪರಿಣಾಮವಾಗಿ ಅಂತಿಮ ಕ್ಷಣದಲ್ಲಿ ಕುಪೇಂದ್ರರೆಡ್ಡಿ ತಮ್ಮ ನಾಮಪತ್ರ ಸಲ್ಲಿಸಿದರು. ಇದೀಗ ಕುಪೇಂದ್ರರೆಡ್ಡಿ ಅವರನ್ನು ಬೆಂಬಲಿಸುವಂತೆ ದೇವೇಗೌಡ ಕಾಂಗ್ರೆಸ್ ನಾಯಕರಿಗೆ ಮನವಿ ಮಾಡಿದ್ದಾರೆ. ರಾಜ್ಯ ಕಾಂಗ್ರೆಸ್ ನಾಯಕರಾದ ಮಲ್ಲಿಕಾರ್ಜುನ ಖರ್ಗೆ, ಡಿ.ಕೆ.ಶಿವಕುಮಾರ್, ಹರಿಪ್ರಸಾದ್ ಆದಿಯಾಗಿ ಹಲವರು ದೇವೇಗೌಡ ಅವರ ಮನವಿಗೆ ಸ್ಪಂದಿಸಿದ್ದಾರೆ. ಆದರೆ, ಸಿದ್ದರಾಮಯ್ಯ ಮಾತ್ರ ಇನ್ನೂ ಈ ಬಗ್ಗೆ ತಮ್ಮ ನಿಲುವು ತಿಳಿಸಿಲ್ಲ.
ಅಂತಿಮ ಕ್ಷಣದವರೆಗೆ ಜೆಡಿಎಸ್ ಯಾವ ನಿಲುವು ತಳೆಯಲಿದೆಯೋ ಗೊತ್ತಿಲ್ಲ ಎನ್ನುತ್ತಿರುವ ಅವರು ಈ ಬಗ್ಗೆ ಖಚಿತತೆ ದೊರಕುವವರೆಗೆ ನಮ್ಮ ನಿಲುವಿನಿಂದ ಹಿಂದೆ ಸರಿಯಬಾರದು ಎಂದು ಬಿಗಿಪಟ್ಟು ಹಿಡಿದಿದ್ದಾರೆ. ಹೀಗಾಗಿ ಕೊನೆಯ ಕ್ಷಣದವರೆಗೆ ಕಾಂಗ್ರೆಸ್ ಅಭ್ಯರ್ಥಿ ಕಣದಲ್ಲಿರಲಿದ್ದಾರೆ. ಈ ಬಗ್ಗೆ ಸ್ಪಷ್ಟತೆ ದೊರೆತಲ್ಲಿ ಮನ್ಸೂರ್ ಅಲಿ ಖಾನ್ ನಾಮಪತ್ರ ವಾಪಸ್ ಪಡೆಯಲಿದ್ದಾರೆ..