ಬೆಂಗಳೂರು, ಡಿ.18: ದೇಶದ ಹಲವೆಡೆ ರೂಪಾಂತರಿತ ಕೋವಿಡ್ ವೈರಸ್ (COVID-19) ಕಾಣಿಸಿಕೊಂಡಿದೆ.ನೆರೆಯ ಕೇರಳದಲ್ಲಿ ಇದರ ಪರಿಣಾಮ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಮತ್ತೊಮ್ಮೆ ಮಾಸ್ಕ್ ಧರಿಸುವುದನ್ನು ಕಡ್ಡಾಯಗೊಳಿಸಲು ಆರೋಗ್ಯ ಇಲಾಖೆ ಚಿಂತನೆ ನಡೆಸಿದೆ.
ಈ ಕುರಿತಂತೆ ಸುದ್ದಿಗಾರರಿಗೆ ಮಾಹಿತಿ ನೀಡಿರುವ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ದಿನೇಶ್ ಗುಂಡೂರಾವ್ 60 ವರ್ಷ ತುಂಬಿದವರು, ಹೃದಯ ಸಂಬಂಧಿ ಸಮಸ್ಯೆ, ಕೋವಿಡ್ ಲಕ್ಷಣ ಹೊಂದಿರುವವರು ಕಡ್ಡಾಯ ಮಾಸ್ಕ್ ಧರಿಸಬೇಕು ಎಂದು ಆರೋಗ್ಯ ಇಲಾಖೆಯಿಂದ ಮಾರ್ಗಸೂಚಿ ಹೊರಡಿಸಲಾಗುವುದು ಎಂದು ತಿಳಿಸಿದರು.
ಅನಗತ್ಯ ಆತಂಕ ಬೇಡ,ಸೋಂಕು ಹರಡುವುದನ್ನು ನಿಯಂತ್ರಿಸುವ ಕೆಲಸಕ್ಕೆ ಆದ್ಯತೆ ನೀಡಲಾಗುವುದು. ಪರಿಸ್ಥಿತಿ ಎದುರಿಸಲು ಸನ್ನದ್ಧವಾಗಿರುವಂತೆ ಎಲ್ಲಾ ಜಿಲ್ಲಾಡಳಿತಗಳಿಗೆ ಸೂಚನೆ ನೀಡಲಾಗಿದೆ. ಆಸ್ಪತ್ರೆಗಳನ್ನು ಸಜ್ಜುಗೊಳಿಸಲಾಗುತ್ತಿದೆ.ವೈರಸ್ ಹರಡುವಿಕೆ ತಡೆಗಟ್ಟಲು ಕೋವಿಡ್ ಪರೀಕ್ಷೆ ಹೆಚ್ಚಿಸಲಾಗುವುದು, ಉಸಿರಾಟದ ತೊಂದರೆ ಹಾಗೂ ಕೋವಿಡ್ ಲಕ್ಷಣ ಹೊಂದಿರುವವರಿಗೆ ಪರೀಕ್ಷೆ ಕಡ್ಡಾಯಗೊಳಿಸಲಾಗುವುದು ಎಂದರು.
ಅಗತ್ಯವಿರುವ ಹಾಸಿಗೆ, ಪಿಪಿಇ ಕಿಟ್ ಮತ್ತು ಆಮ್ಲಜನಕವನ್ನು ಸಿದ್ಧವಾಗಿಟ್ಟುಕೊಳ್ಳಲು ಎಲ್ಲಾ ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ತಿಳಿಸಲಾಗಿದೆ. ನಾಳೆ ತಾಂತ್ರಿಕ ಸಲಹಾ ಸಮಿತಿ ಸಭೆ ನಡೆಯಲಿದೆ. ಕ್ರಿಸ್‌ಮಸ್, ಹೊಸ ವರ್ಷಾಚರಣೆ ಸೇರಿದಂತೆ ವರ್ಷಾಂತ್ಯದಲ್ಲಿ ಜನಸಾಗರ ಹೆಚ್ಚಿನ ಸಂಖ್ಯೆಯಲ್ಲಿ ಸೇರುವುದರಿಂದ ಕೊರೊನಾ ಕಟ್ಟಿಹಾಕಲು ತಾಂತ್ರಿಕ ಸಲಹಾ ಸಮಿತಿ ಸಭೆಯ ನಂತರ ರಾಜ್ಯದಲ್ಲಿ ಪ್ರತ್ಯೇಕ ಮಾರ್ಗ ಸೂಚಿ ಹೊರಡಿಸಲಾಗುವುದು ಎಂದು ತಿಳಿಸಿದರು.
ಸದ್ಯದ ಪರಿಸ್ಥಿತಿಯಲ್ಲಿವಎಲ್ಲರಿಗೂ ಮಾಸ್ಕ್ ಕಡ್ಡಾಯ ಹಾಗೂ ಜನರ ಓಡಾಟದ ಮೇಲೆ ನಿರ್ಬಂಧ ಹೇರುವಂತಹ ಸ್ಥಿತಿ ಇಲ್ಲ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.