ಬೆಂಗಳೂರು, ಜು.8:
ಬೆಳಗಾವಿ ಬೆಂಗಳೂರು ಧಾರವಾಡ ಸೇರಿದಂತೆ
ರಾಜ್ಯದ ಹಲವೆಡೆ ಡೆಂಗ್ಯೂ ಪ್ರಕರಣಗಳು ಹೆಚ್ಚಾಗುತ್ತಿರುವೆ, ಆದರೆ ವೈದ್ಯಕೀಯ ತುರ್ತು ಪರಿಸ್ಥಿತಿ ಘೋಷಣೆ ಮಾಡುವ ಸ್ಥಿತಿ ನಿರ್ಮಾಣವಾಗಿಲ್ಲ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಡೆಂಗ್ಯೂ ನಿಯಂತ್ರಣ ವಿಚಾರದಲ್ಲಿ ಆರೋಗ್ಯ ಇಲಾಖೆ ಪ್ರತಿನಿತ್ಯವೂ ಬೆಳವಣಿಗೆಗಳ ಮೇಲೆ ನಿಗಾ ವಹಿಸಿದೆ. ಆಸ್ಪತ್ರೆಗಳಲ್ಲಿ ಅಗತ್ಯ ಚಿಕಿತ್ಸೆ ನೀಡಲಾಗುತ್ತಿದೆ. ಯಾವುದೇ ಬೆಡ್ ಅಥಾವಾ ಔಷಧಿಯ ಕೊರತೆಯಿಲ್ಲ ಎಂದು ಸ್ಪಷ್ಟಪಡಿಸಿದರು
ಡೆಂಗ್ಯೂ ಬಗ್ಗೆ ತಾಂತ್ರಿಕ ಸಲಹಾ ಸಮಿತಿ ಸಭೆ ನಡೆಸಿದ್ದು, ವೈದ್ಯಕೀಯ ತುರ್ತುಪರಿಸ್ಥಿತಿ ಘೋಷಿಸುವ ಅಗತ್ಯವಿಲ್ಲ ಎಂದು ಸಲಹಾ ಸಮಿತಿಯವರು ತಿಳಿಸಿದ್ದಾರೆ ಎಂದರು.
ಇನ್ನೂ ಎರಡು ತಿಂಗಳುಗಳ ಕಾಲ ರಾಜ್ಯದಲ್ಲಿ ಡೆಂಗ್ಯೂ ಹಾವಳಿ ಇರುತ್ತದೆ.ಹೀಗಾಗಿ ಜನರು ಹೆಚ್ಚು ಜಾಗೃತರಾಗಿರಬೇಕು. ಮನೆಯ ಸುತ್ತಮುತ್ತಲು ನೀರು ಶೇಖರಣೆಯಾಗದಂತೆ ನೋಡಿಕೊಳ್ಳಬೇಕು. ವಾತಾವರಣ ಸ್ವಚ್ಛವಾಗಿಟ್ಟುಕೊಳ್ಳಬೇಕು ಎಂದು ಕರೆ ನೀಡಿದರು.
ಆರೋಗ್ಯ ಇಲಾಖೆ ಕೂಡ ಜನರಲ್ಲಿ ಡೆಂಗಿ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದೆ. ಪ್ರತಿ ಶುಕ್ರವಾರ ಅಭಿಯಾನದ ರೀತಿಯಲ್ಲಿ ಈಡಿಸ್ ಸೊಳ್ಳೆಯ ಉತ್ಪತ್ತಿ ತಾಣಗಳನ್ನ ನಾಶ ಪಡಿಸುವ ಕಾರ್ಯ ನಡೆಸುತ್ತಿದೆ. ಹೆಚ್ಚು ಡೆಂಗ್ಯೂ ಪ್ರಕರಣಗಳು ಕಂಡು ಬರುವ ಸ್ಥಳಗಳಲ್ಲಿ ಫೀವರ್ ಕ್ಲಿನಿಕ್ ತೆರೆದು, ಟೆಸ್ಟಿಂಗ್ ಹೆಚ್ಚಿಸಲು ಜಿಲ್ಲಾಧಿಕಾರಿಗಳಿಗೆ ಹಾಗೂ ಸಿಇಒ ಗಳಿಗೆ ಸೂಚಿಸಲಾಗಿದೆ ಎಂದು ತಿಳಿಸಿದರು
ರೋಗಕ್ಕೆ ಅಗತ್ಯ ಚಿಕಿತ್ಸೆ ನೀಡುವ ಔಷಧಿಗಳ ಲಭ್ಯತೆ ಎಲ್ಲೆಡೆ ಸಾಕಷ್ಟು ಇದೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಅಗತ್ಯ ಚಿಕಿತ್ಸೆಗೆ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಆದರೆ ಜನರು ಹೆಚ್ಚು ಜಾಗೃತರಾಗಿ ಡೆಂಗ್ಯೂ ಹರಡದಂತೆ ಎಚ್ಚರಿಕೆ ವಹಿಸುವುದೇ ಮುಖ್ಯ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಡೆಂಗ್ಯೂ ವಿಚಾರದಲ್ಲಿ ವಿಪಕ್ಷ ನಾಯಕರು ಆತಂಕ ಹುಟ್ಟಿಸುವಂತ ಹೇಳಿಕೆಗಳನ್ನ ನೀಡುತ್ತಿದ್ದಾರೆ. ಇದು ಸರಿಯಲ್ಲ. ಇಂಥಹ ಸಂದರ್ಭದಲ್ಲಿ ವಿಪಕ್ಷಗಳು ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು. ಆದರೆ ಡೆಂಗ್ಯೂ ಹರಡುವ ಸೊಳ್ಳೆಗಳಿಗಿಂತ ವಿಪಕ್ಷ ನಾಯಕರ ಸುಳ್ಳುಗಳು ಹೆಚ್ಚು ಹರಡುತ್ತಿದೆ ಎಂದು ಕಿಡಿ ಕಾಡಿದರು.
ಸಂಸದ ಡಾ. ಮಂಜುನಾಥ್ ಅವರು ಉತ್ತಮ ಸಲಹೆಗಳನ್ನ ನೀಡಿದ್ದಾರೆ. ನಾನು ಅವರ ಜೊತೆ ಮಾತನಾಡಿದ್ದೇನೆ. ಆ ರೀತಿಯ ಸಕಾರಾತ್ಮಕ ಚಿಂತನೆಗಳನ್ನ ವಿಪಕ್ಷಗಳು ಪ್ರದರ್ಶಿಸಲಿ ಎಂದರು.
Previous Articleದರ್ಶನ್ ಕೇಸಲ್ಲಿ ಶಾಸಕರ ಕಾರು ಚಾಲಕನಿಗೂ ಆಪತ್ತು
Next Article ಕುಡಿಯುವ ನೀರು ಕಲುಷಿತಗೊಳ್ಳಬಾರದು.