ಬೆಂಗಳೂರು, ಫೆ.29 – ಸಾರ್ವಜನಿಕ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮದ ಹಿನ್ನೆಲೆಯಲ್ಲಿ ಆಲ್ಕೋಹಾಲ್ ಉತ್ಪನ್ನಗಳಿಗೆ ಇನ್ನೂ ಹೆಚ್ಚಿನ ತೆರಿಗೆ ವಿಧಿಸುವಂತೆ ವಿವಿಧ ಕ್ಷೇತ್ರಗಳ ತಜ್ಞರ ಸಭೆಯು ಶಿಫಾರಸು ಮಾಡಿದೆ.
ತಜ್ಞರ ಸಭೆಯಲ್ಲಿ ರಾಜ್ಯ ಹೈಕೋರ್ಟಿನ ನಿವೃತ್ತ ನ್ಯಾಯಮೂರ್ತಿ ಪಿ.ಕೃಷ್ಣ ಭಟ್, ಮುಖ್ಯಮಂತ್ರಿಗಳ ಕಾರ್ಯದರ್ಶಿ ಡಾ.ಕೆ.ವಿ.ತ್ರಿಲೋಕ್ ಚಂದ್ರ, ಆರೋಗ್ಯ ಇಲಾಖೆ ಆಯುಕ್ತ ಡಿ.ರಣದೀಪ್,ರಾಜ್ಯ ಸರ್ಕಾರದ ಎನ್ ಸಿಡಿ ಕಾರ್ಯಪಡೆಯ ಸದಸ್ಯ ಡಾ.ವಿಶಾಲ್ ರಾವ್ ಇನ್ನಿತರ ಗಣ್ಯರು ಪಾಲ್ಗೊಂಡು ಆಲ್ಕೋಹಾಲ್ ಉತ್ಪನ್ನಗಳಿಗೆ ಹೆಚ್ಚಿನ ತೆರಿಗೆ ವಿಧಿಸಲು ಶಿಫಾರಸು ಮಾಡಿದ್ದಾರೆ.
ಮದ್ಯದ ಸೇವನೆ ಬಳಕೆ ಪ್ರಮಾಣವನ್ನು ಕಡಿಮೆ ಮಾಡುವ ಕುರಿತು ನೀತಿ, ಶಿಫಾರಸುಗಳನ್ನು ರೂಪಿಸುವುದು ಮತ್ತು ಈ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗುವ ಸಹಭಾಗಿತ್ವವನ್ನು ಹೊಂದುವುದರ ಬಗ್ಗೆ ಸಭೆಯಲ್ಲಿ ವಿಸ್ತೃತವಾಗಿ ಚರ್ಚಿಸಲಾಯಿತು.
ನ್ಯಾಯಮೂರ್ತಿ ಪಿ.ಕೃಷ್ಣ ಭಟ್ ಅವರು ಆಲ್ಕೋಹಾಲ್ ಪ್ರಮಾಣವನ್ನು ಸ್ಪಷ್ಟವಾಗಿ ಸೂಚಿಸುವ ವ್ಯವಸ್ಥೆ ಜಾರಿಗೆ ಬರಬೇಕು ಎಂದು ಸಲಹೆ ನೀಡಿದರು. ಇದಕ್ಕೆ ಮುಖ್ಯಮಂತ್ರಿಗಳ ಕಾರ್ಯದರ್ಶಿ ಡಾ.ಕೆ.ವಿ.ತ್ರಿಲೋಕ್ ಚಂದ್ರ ಅವರು ತಮ್ಮ ಸಹಮತ ವ್ಯಕ್ತಪಡಿಸಿ, ಸಿಗರೇಟ್ ಪ್ಯಾಕೇಟ್ ಗಳಲ್ಲಿ ಇರುವ ರೀತಿಯಲ್ಲಿ ಈ ಲೇಬಲಿಂಗ್ ವ್ಯವಸ್ಥೆ ಉತ್ತಮ ಎಂದರು.
ಇಂತಹ ನೀತಿ ನಿರೂಪಣೆಗಳನ್ನು ಸಂರಚಿಸುವ ವಿಚಾರದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಇಲಾಖೆ ಆಯುಕ್ತ ಡಿ.ರಣದೀಪ್ ಅವರು ತಿಳಿಸಿದರು.
ಐಪಿಆರ್ ನಿರ್ದೇಶಕ ಅಮಿತ್ ಕಾರ್ಣಿಕ್ ಅವರು ಮಾತನಾಡಿ, ಮದ್ಯ ಸೇವನೆ ಪ್ರಮಾಣವನ್ನು ಕಡಿಮೆ ಮಾಡುವ ದಿಸೆಯಲ್ಲಿ ಮದ್ಯಪಾನ ಸಂಯಮ ಮಂಡಳಿ ಕಾರ್ಯಪ್ರವೃತ್ತವಾಗಬೇಕಾದ ಅಗತ್ಯವಿದೆ’ಎಂದು ತಿಳಿಸಿದರು.
ಕನ್ಸೂಮರ್ ವಾಯ್ಸ್ ಸಂಸ್ಥೆಯು ಇನ್ ಸ್ಟಿಟ್ಯೂಟ್ ಫಾರ್ ಪಾಲಿಸಿ ರೀಸರ್ಚ್ ಸಹಭಾಗಿತ್ವದಲ್ಲಿ ನಡೆದ ಸಭೆಯಲ್ಲಿ ರಾಜ್ಯ ಸರ್ಕಾರಕ್ಕೆ ಮಹತ್ವದ ಸಲಹೆ ಸೂಚನೆಗಳನ್ನು ನೀಡಲು ವಿವಿಧ ಕ್ಷೇತ್ರಗಳ ತಜ್ಞರ ಸಭೆಯನ್ನು ಅಯೋಜಿಸಿತ್ತು.