ಮೈಸೂರು,ಅ.29-
ನಗರಾಭಿವೃದ್ಧಿ ಪ್ರಾಧಿಕಾರದ ನಿವೇಶನ ಹಂಚಿಕೆ ಕರ್ಮಕಾಂಡ ಆರೋಪದ ಕುರಿತು ತನಿಖೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯ ತನ್ನ ಕುಣಿಕೆಯನ್ನು ಮತ್ತಷ್ಟು ಬಿಗಿಗೊಳಿಸುತ್ತಿದೆ.
ಬೆಂಗಳೂರು ಮತ್ತು ಮೈಸೂರಿನಲ್ಲಿ ಹಲವಾರು ನಿವಾಸ ಮತ್ತು ಕಚೇರಿಗಳ ಮೇಲೆ ದಾಳಿ ನಡೆಸಿರುವ ಇಡಿ ಅಧಿಕಾರಿಗಳು ಇದೀಗ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಸರ್ಕಾರದ ಪ್ರಮುಖರ ವಿಚಾರಣೆಗೆ ಸಿದ್ದತೆ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಬಿಲ್ಡರ್‌ಗಳ ಮನೆ ಕಚೇರಿಗಳ ಮೇಲಿನ ದಾಳಿಯನ್ನು ಮುಂದುವರೆಸಿರುವ ಅಧಿಕಾರಿಗಳು ಮೈಸೂರು
ನಗರದ ಇನಕಲ್ ನಲ್ಲಿರುವ ರಾಕೇಶ್ ಪಾಪಣ್ಣ ಹಾಗೂ ಅವರ ತಂದೆ ಪಾಪಣ್ಣ ಅವರನ್ನ ತನಿಖೆಗೆ ಒಳಪಡಿಸಿ, ಇಂದೂ ಕೂಡಾ ಕೆಲವು ದಾಖಲೆಗಳನ್ನ ಪರಿಶೀಲನೆ ನಡೆಸಿದ್ದಾರೆ.
ಮುಡಾದ 50:50 ಅನುಪಾತದಲ್ಲಿ 98 ಸಾವಿರ ಚದರ ಅಡಿ ಜಾಗವನ್ನ ಒಂದೇ ಬಾರಿ ಮಂಜೂರು ಮಾಡಿಸಿಕೊಂಡಿದ್ದಾರೆ ಎಂದು ರಾಕೇಶ್ ಪಾಪಣ್ಣ ವಿರುದ್ಧ ಶಾಸಕ ಶ್ರೀವತ್ಸ ಆರೋಪ ಮಾಡಿ, ದಾಖಲಾತಿ ಬಿಡುಗಡೆ ಮಾಡಿದ್ದರು. ಇದರ ಜತೆಗೆ ದೂರುದಾರ ಸ್ನೇಹಮಯಿ ಕೃಷ್ಣ ಈ ಸಂಬಂಧ ದಾಖಲಾತಿಗಳನ್ನ ಜಾರಿ ನಿರ್ದೇಶನಾಲಯಕ್ಕೆ ನೀಡಿ, ತನಿಖೆ ನಡೆಸುವಂತೆ ಮನವಿ ಮಾಡಿದ್ದರು.
ಮತ್ತೊಬ್ಬ ಬಿಲ್ಡರ್ ಗೆ ದಾಳಿ :
ಮುಡಾ ಹಗರಣದ ತನಿಖೆಯಲ್ಲಿ ಹಣಕಾಸಿನ ವಹಿವಾಟಿನ ಬಗ್ಗೆ ಮಾಹಿತಿ ಪಡೆದು, ಇಲ್ಲಿ ನಡೆದಿರುವ ಅವ್ಯವಹಾರಗಳ ತನಿಖೆಗೆ ಇಳಿದಿರುವ ಇಡಿ, ನಿನ್ನೆ ರಾತ್ರಿ 11 ಗಂಟೆಗೆ ಮೈಸೂರಿನ ನ್ಯೂ ಕಾಂತ್ ರಾಜ್ ಅರಸ್ ರಸ್ತೆಯಲ್ಲಿರುವ ಜಯರಾಮು ಎಂಬುವವರಿಗೆ ಸೇರಿದ ಕಚೇರಿ ಹಾಗೂ ಅವರ ಶ್ರೀರಾಂಪುರದಲ್ಲಿರುವ ಮನೆಯ ಮೇಲೆ ದಾಳಿ ಮುಂದುವರೆಸಿದೆ.
ಇಂದು ಬೆಳಗಿನ ಜಾವ 3 ಗಂಟೆವರೆಗೆ ದಾಖಲೆಗಳನ್ನ ಪರಿಶೀಲನೆ ನಡೆಸಿ ಮತ್ತೆ ಇಂದು ಬೆಳಗ್ಗೆ ಅವರ ಕಚೇರಿಯಲ್ಲಿ ಶೋಧ ಮುಂದುವರೆಸಿದ್ದಾರೆ.
ಕಚೇರಿ ಮೇಲೆ ದಾಳಿ ಸಾಧ್ಯತೆ :
ನಗರದ ಹಲವು ಬಿಲ್ಡರ್ಗಳು, ಮಧ್ಯವರ್ತಿಗಳು, ರಾಜಕಾರಣಿಗಳ ಆಪ್ತರ ಬಗ್ಗೆ ಇಡಿಗೆ ಮುಡಾ ದಾಳಿಯ ಸಂದರ್ಭದಲ್ಲಿ ಪ್ರಮುಖ ದಾಖಲೆಗಳು ದೊರೆತಿವೆ ಎನ್ನಲಾಗಿದ್ದು, ಇದರ ಆಧಾರದ ಮೇಲೆ ಇಡಿ ಅಧಿಕಾರಿಗಳು ಮೈಸೂರಿನಲ್ಲಿ ತನಿಖೆ ಮುಂದುವರೆಸಿದ್ದು, ಇನ್ನೂ ಹಲವು ಬಿಲ್ಡರ್ ಕಚೇರಿಗಳು ಹಾಗೂ ಮನೆಗಳ ಮೇಲೆ ದಾಳಿ ನಡೆಸುವ ಸಾಧ್ಯತೆಗಳಿವೆ ಎಂದು ತಿಳಿದುಬಂದಿದೆ.
Previous Articleಬಿಜೆಪಿಯವರಿಗೆ ಈಗ ಹಿಂದೂ ಪ್ರೀತಿ.
Next Article ದರ್ಶನ್ ಗೆ ಕೊನೆಗೂ ಸಿಗ್ತು ಷರತ್ತುಬದ್ಧ ಮಧ್ಯಂತರ ಜಾಮೀನು