ಬೃಹತ್ ಮೊತ್ತದ ಕಾಮಗಾರಿಗಳು ಯಾವುದೇ ಅಭ್ಯಂತರವಿಲ್ಲದೆ ಸ್ಥಳೀಯಾಡಳಿತಗಳಲ್ಲಿ ಅನುಷ್ಠಾನಗೊಳ್ಳುತ್ತದೆ. ಆದರೆ ಕನಿಷ್ಟ ಮೊತ್ತದ ಕಾಮಗಾರಿಗಳು ಸೂಕ್ತ ಸಮಯದಲ್ಲಿ ನಡೆಯದೆ ಸಾರ್ವಜನಿಕರು ತೊಂದರೆ ಅನುಭವಿಸುತ್ತಲೇ ಇರುತ್ತಾರೆ.
ಇದಕ್ಕೆ ಪೂರಕವಾಗಿ ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಮುದರಂಗಡಿ ಗ್ರಾಪಂ ವ್ಯಾಪ್ತಿಯ ಸಾಂತೂರು ಸಾಗುಮನೆ ಬಳಿ ಯಾವತ್ತೋ ನಿರ್ಮಿಸಬೇಕಾಗಿದ್ದ ಕಾಲು ಸಂಕ ಕಾಮಗಾರಿಯ ವಿಳಂಬವೇ ಸಾಕ್ಷಿ.
ಸಾಂತೂರು ಸಾಗುಮನೆಯ ಕೊಳಕೆ ಮಾರು ಬಳಿ ಮಳೆ ನೀರು ಹರಿದು ಹೋಗುವ ತೋಡಿಗೆ ಕಾಲು ಸಂಕ ನಿರ್ಮಿಸದ ಕಾರಣ ಈ ಭಾಗದ ಶಾಲಾ ಮಕ್ಕಳು ಮತ್ತು ಸ್ಥಳೀಯ ಕೃಷಿಕರು ಕಷ್ಟಕರ ರೀತಿಯಲ್ಲಿ ಎದ್ದು ಬಿದ್ದು ತೋಡು ದಾಟುತ್ತಿದ್ದಾರೆ.
ಕೃಷಿ ಚಟುವಟಿಕೆಯೇ ಪ್ರಧಾನವಾಗಿರುವ ಈ ಭಾಗದ ಜನರಿಗೆ ರಸ್ತೆ ಸಂಪರ್ಕವಿದೆ. ಆದರೆ ಸುತ್ತುಬಳಸಿ ತೆರಳಬೇಕಾದ ಕಾರಣ ಅವರು ಹತ್ತಿರದ ದಾರಿಯಾದ ಈ ತೋಡು ಬಳಸಿಯೇ ಸಂಚರಿಸುತ್ತಿದ್ದಾರೆ. ಮೇ ತಿಂಗಳಿಂದ ಜನವರಿವರೆಗೆ ಈ ತೋಡಿನಲ್ಲಿ ನೀರು ತುಂಬಿರುವುದರಿಂದ ಅವರ ಕಷ್ಟ ಹೇಳತೀರದು.
ನೆರೆ ಬಂದರೆ ಮಕ್ಕಳಿಗೆ ಇಲ್ಲಿ ನಡೆದಾಡಲೂ ಕಷ್ಟಕರವಾಗಿದೆ. ಇಂತಹ ಸಂದರ್ಭಗಳಲ್ಲಿ ಹೆತ್ತವರೇ ಇಲ್ಲಿಗೆ ಬಂದು ಮಕ್ಕಳನ್ನು ದಾಟಿಸಬೇಕಾಗಿದೆ. ಕೃಷಿಕರೇ ತುಂಬಿರುವ ಈ ಭಾಗದ ಜನರು ಹಾಲು ಕೊಂಡೊಯ್ಯಲೂ ಇದೇ ಮಾರ್ಗವನ್ನು ಬಳಸುತ್ತಾರೆ. ಈ ತೋಡನ್ನು ಕನಿಷ್ಟ 25ಮನೆಗಳವರು ಬಳಸುತ್ತಿದ್ದಾರೆ.
ಸ್ಥಳೀಯಾಡಳಿತ ಇಲ್ಲಿ ಕಾಲು ಸಂಕ ನಿರ್ಮಿಸಲು ಹಲವು ಬಾರಿ ಕ್ರಿಯಾ ಯೋಜನೆ ರೂಪಿಸಿತ್ತು. ಕಡಿಮೆ ಮೊತ್ತದ ಕಾಮಗಾರಿಯಾಗಿದ್ದ ಕಾರಣ ಉದಾಸೀನ ಎದ್ದು ಕಾಣುತ್ತದೆ. ಈ ಬಾರಿಯೂ ಇಲ್ಲೆ ಕಾಲು ಸಂಕ ನಿರ್ಮಾಣಕ್ಕೆ ಅನುದಾನ ಜೋಡಿಸಲಾಗಿದೆ. ಆದರೆ ಕಾಮಗಾರಿ ನಡೆದಿಲ್ಲ. ಮತ್ತೆ ಮಳೆಗಾಲ ಮುಗಿಯುವವರೆಗೆ ಕಾಯಬೇಕಿದೆ.
ಬೆಳ್ಮಣ್ಣು ಸಂತ ಜೋಸೆಫ್ ಪ್ರೌಢ ಶಾಲೆಯ ವಿದ್ಯಾರ್ಥಿನಿ ೯ನೇ ತರಗತಿvಯ ಚಿಂತನಾ ಮಾತನಾಢಿ, ದೂರದ ಬೆಳ್ಮಣ್ಣು ಶಾಲೆಗೆ ಹೋಗಬೇಕಾಗಿರುವುದರಿಂದ ರಸ್ತೆ ಮೂಲಕ ಸುತ್ತು ಬಳಸಿ ಹೋಗಲು ಹೆಚ್ಚು ಸಮಯ ವ್ಯರ್ಥವಾಗುತ್ತದೆ. ಹಾಗಾಗಿ ಹತ್ತಿರದ ತೋಡಿನ ಮೂಲಕ ನಿತ್ಯ ಸಂಚರಿಸುತ್ತಿದ್ದು, ಹೆದರಿಕೊಂಡೇ ನಿತ್ಯ ಸಂಚರಿಸುತ್ತಿದ್ದೇವೆ. ಈಗಾಗಲೇ ಹಲವರು ಇಲ್ಲಿ ಬಿದ್ದ ಘಟನೆಯೂ ನಡೆದಿದೆ ಎಂದು ಹೇಳಿದ್ದಾಳೆ.
ಸ್ಥಳೀಯರಾದ ಸುಬ್ರಾಯ ನಾಯಕ್ ಮಾತನಾಡಿ, ಕೃಷಿಕರೇ ಹೆಚ್ಚು ವಾಸಿಸುವ ಇಲ್ಲಿನ ಜನರು ಹೆಚ್ಚಾಗಿ ಇದೇ ದಾರಿಯನ್ನು ಬಳಸುತ್ತಿದ್ದಾರೆ. ಹಲವು ಬಾರಿ ನೀರಿಗೆ ಬಿದ್ದ ಘಟನೆ ನಡೆದಿದೆ. ಸ್ಥಳೀಯಾಡಳಿತಕ್ಕೆ ಹಲವು ಬಾರಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ ಎಂದರು.