ಬೆಂಗಳೂರು,ಜೂ.16- ಆಸ್ತಿ ವಿವಾದ ಹಿನ್ನೆಲೆ ಜೆಡಿಎಸ್ ಕಾರ್ಯಕರ್ತನನ್ನು ಕೊಲೆ ಮಾಡಿ ಅಪಘಾತದಂತೆ ಬಿಂಬಿಸಿದ್ದ ಆರೋಪಿಯನ್ನು ಚಿಕ್ಕಬಳ್ಳಾಪುರ ಜಿಲ್ಲಾ ಪೊಲೀಸರು ಬಂಧಿಸಿದ್ದಾರೆ.
ಶಿಡ್ಲಘಟ್ಟದ ಕನ್ನಮಂಗಲ ಗ್ರಾಮದ ವೆಂಕಟೇಶ್ ಬಂಧಿತ ಆರೋಪಿಯಾಗಿದ್ದಾನೆ. ಕನ್ನಮಂಗಲದ ಜೆಡಿಎಸ್ ಕಾರ್ಯಕರ್ತ ಚಿಕ್ಕಆಂಜಿನಪ್ಪ ಅವರು ಕಳೆದ ಜೂ. 2ರಂದು ರಾತ್ರಿ 10ರ ವೇಳೆ ಶಿಡ್ಲಘಟ್ಟದಿಂದ ಕನ್ನಮಂಗಲಕ್ಕೆ ಹೋಗುತ್ತಿದ್ದಾಗ ಮಾರ್ಗ ಮಧ್ಯದ ನಾರಾಯಣದಾಸರಹಳ್ಳಿ ಗೇಟ್ ಸಮೀಪ ಅನುಮಾನಾಸ್ಪದವಾಗಿ ತಲೆಗೆ ಗಂಭೀರ ಗಾಯವಾಗಿ ರಕ್ತ ಸ್ರಾವವಾಗಿ ರಸ್ತೆಯಲ್ಲೇ ಮೃತಪಟ್ಟಿದ್ದರು.
ಈ ಬಗ್ಗೆ ಚಿಕ್ಕಆಂಜಿನಪ್ಪ ಅವರ ಸಹೋದರ ಅಶ್ವತ್ಥಪ್ಪ ಅನುಮಾನಾಸ್ಪದ ವ್ಯಕ್ತಿಗಳ ಮೇಲೆ ಕೊಲೆ ಆರೋಪದ ದೂರು ದಾಖಲಿಸಿದ್ದರು. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ವಿಶೇಷ ತಂಡವನ್ನು ರಚಿಸಿ, ಚಿಕ್ಕ ಆಂಜಿನಪ್ಪ ಅವರ ಮೊಬೈಲ್ ನಂಬರ್ ಕರೆಗಳ ಜಾಡು ಹಿಡಿದು ತನಿಖೆ ಕೈಗೊಂಡಿದ್ದರು. ಕೊಲೆಯಾದ ದಿನ ಮೃತ ಆಂಜಿನಪ್ಪ ಅವರ ನಂಬರ್ಗೆ ಅನುಮಾನಾಸ್ಪದವಾಗಿ ಕನ್ನಮಂಗಲ ಬಂಧಿತ ವೆಂಕಟೇಶ್ ಹಲವು ಬಾರಿ ಕರೆ ಮಾಡಿದ್ದು ಅನುಮಾನದ ಮೇಲೆ ಆತನನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದಾಗ ಕೃತ್ಯ ಬಾಯ್ಬಿಟ್ಟಿದ್ದು ಆರೋಪಿಯನ್ನು ಬಂಧಿಸಲಾಗಿದೆ ಎಂದು ಎಸ್ ಪಿ ಮಿಥುನ್ ಕುಮಾರ್ ತಿಳಿಸಿದ್ದಾರೆ.
ವಿಚಾರಣೆಯಲ್ಲಿ, ತನ್ನ ಅಣ್ಣ ನಾಗೇಶ್ ಅವರ ಜೊತೆ ಚಿಕ್ಕಆಂಜಿನಪ್ಪ ಸೇರಿಕೊಂಡು ತಮ್ಮ ಎಲ್ಲ ಜಮೀನನ್ನು ಅಣ್ಣ ನಾಗೇಶ್ ಅವರ ಹೆಸರಿಗೆ ಮಾಡಿಸುತ್ತಾನೆ ಎಂದು ತಿಳಿದುಕೊಂಡು, ಇವನು ಬದುಕಿದ್ದರೆ ನನಗೆ ಜಮೀನು ಇಲ್ಲದಂತೆ ಮಾಡುತ್ತಾನೆ ಎಂದು ಯೋಚಿಸಿದ್ದಾನೆ.
ಹೇಗಾದರೂ ಮಾಡಿ ಕೊಲೆ ಮಾಡಬೇಕೆಂದು, ಎಲ್ಲಿದ್ದಾನೆ ಎಂಬುವುದನ್ನು ಫೋನ್ ಮುಖಾಂತರ ತಿಳಿದುಕೊಂಡು ನಾರಾಯಣ ದಾಸರಹಳ್ಳಿ ಗೇಟ್ ಬಳಿಯಿರುವ ಆಂಜನೇಯಸ್ವಾಮಿ ದೇವಾಲಯದ ಬಳಿ ಬೈಕ್ನಲ್ಲಿ ಹೋಗುತ್ತಿದ್ದ ಆಂಜಿನಪ್ಪನನ್ನು ಅಡ್ಡಗಟ್ಟಿ ನೀಲಗಿರಿ ದೊಣ್ಣೆಯಿಂದ ತಲೆಗೆ ಹೊಡೆದು, ಅಲ್ಲಿಂದ ಪರಾರಿಯಾಗಿದ್ದಾಗಿ ಆರೋಪಿ ಪೊಲೀಸರಿಗೆ ಹೇಳಿ, ತಪ್ಪೊಪ್ಪಿಕೊಂಡಿದ್ದಾನೆ ಎಂದರು.
Previous Articleಚಾರ್ಲಿ ನೋಡಿ ಫಿದಾ ಆದ ಜಾನ್ ಅಬ್ರಹಾಂ!
Next Article ಕಾಂಗ್ರೆಸ್ ಶಕ್ತಿ ಪ್ರದರ್ಶನ