ಮೈಸೂರು.ಸೆ.26 -ಶಕ್ತಿ ದೇವತೆಯ ಆರಾಧನೆಯ ಜೊತೆ ಜಗತ್ತಿಗೆ ರಾಜ್ಯದ ಸಾಂಸ್ಕೃತಿಕ, ಜಾನಪದ ಹಾಗೂ ಐತಿಹಾಸಿಕ ಪರಂಪರೆಯನ್ನು ಅನಾವರಣಗೊಳಿಸುವ ನಾಡಹಬ್ಬ ಮೈಸೂರು ದಸರಾ ಇಂದಿನಿಂದ ಆರಂಭವಾಗಿದೆ.
ದೇಶದ ಪ್ರಥಮ ಪ್ರಜೆ ರಾಷ್ಟ್ರಪತಿ ದ್ರೌಪದಿ ಮುರ್ಮು ಚಾಮುಂಡಿಬೆಟ್ಟದ ಆವರಣದಲ್ಲಿ
ಈ ಬಾರಿ ಅದ್ಧೂರಿ ನಾಡಹಬ್ಬ ದಸರಾಕ್ಕೆ ಚಾಲನೆ ನೀಡಿ ದಾಖಲೆ ಬರೆದರು.
ರಾಷ್ಟ್ರಪತಿಯಾದ ಬಳಿಕ ಅವರು ರಾಜ್ಯಕ್ಕೆ ನೀಡಿದ ಮೊದಲ ಭೇಟಿಯು ದಸರಾ ಉದ್ಘಾಟನೆ ಮೂಲಕ ವಿಶೇಷವಾಗಿ ದಾಖಲಾಯಿತು.
ಇದುವರೆಗೆ ರಾಜ್ಯಪಾಲರು, ಉಸ್ತುವಾರಿ ಸಚಿವರು, ರೈತರು, ಲೇಖಕರು, ನಟ-ನಟಿಯರು, ರಾಜಕಾರಣಿಗಳು, ವೈದ್ಯರ ಉದ್ಘಾಟನೆಯಿಂದ ಗಮನ ಸೆಳೆದಿದ್ದ ಉತ್ಸವವು ಇದೇ ಮೊದಲು ದೇಶದ ಪ್ರಥಮ ಪ್ರಜೆಯ ಆಗಮನದಿಂದ ವಿಶೇಷವಾಗಿ ಕಳೆಗಟ್ಟಿತ್ತು.
ವೃಶ್ಚಿಕ ಲಗ್ನದಲ್ಲಿ ಬೆಳ್ಳಿ ಪಲ್ಲಕ್ಕಿಯಲ್ಲಿ ಪವಡಿಸಿರುವ ನಾಡದೇವಿ ತಾಯಿ ಶ್ರೀ ಚಾಮುಂಡೇಶ್ವರಿ ದೇವಿಯ ಉತ್ಸವ ಮೂರ್ತಿಗೆ ಆರತಿ ಬೆಳಗಿ, ಪುಷ್ಪಾರ್ಚನೆಗೈದು ನಮಿಸಿ, ದೀಪ ಬೆಳಗುವ ಮೂಲಕ ವಿದ್ಯುಕ್ತ ಚಾಲನೆ ನೀಡಿದರು
ದಸರಾಗೆ ಚಾಲನೆ ನೀಡಿ ಮಾತನಾಡಿದ ಅವರು, ಕನ್ನಡದಲ್ಲಿ ನಾಡಿನ ಜನತೆಗೆ ದಸರಾ ಹಬ್ಬದ ಶುಭ ಕಾಮನೆ ಕೋರಿದರು ಅಧಿ ದೇವತೆ ಚಾಮುಂಡೇಶ್ವರಿಗೆ ಗೌರವಪೂರ್ವಕ ನಮನ ಸಲ್ಲಿಸುತ್ತೇನೆ ಎಂದರು.
ನಾನು ರಾಷ್ಟ್ರಪತಿ ಆದ ಬಳಿಕ ಕರ್ನಾಟಕಕ್ಕೆ ಇದು ನನ್ನ ಮೊದಲ ಭೇಟಿಯಾಗಿದೆ. ಶಕ್ತಿ ಪೀಠವಾದ ಚಾಮುಂಡಿ ಬೆಟ್ಟದಲ್ಲಿ ಚಾಮುಂಡೇಶ್ವರಿ ದೇವಿಗೆ ಪೂಜೆ ಸಲ್ಲಿಸುವ ಭಾಗ್ಯ ಸಿಕ್ಕಿರುವುದು ನನ್ನ ಪುಣ್ಯ ಎಂದು ಹೇಳಿದರು.
ಮಹಿಷನನ್ನು ಮಣಿಸಿದ ಚಾಮುಂಡೇಶ್ವರಿ ದೇವಿ ನೆಲೆಸಿರುವ ಈ ಬೆಟ್ಟ ಪ್ರಮುಖ ಶಕ್ತಿ ಪೀಠವಾಗಿದೆ. ದೇಶ, ವಿದೇಶಗಳಿಂದ ಭಕ್ತರು ದೇವಿಯ ದರ್ಶನಕ್ಕೆ ಆಗಮಿಸಿತ್ತಾರೆ. ಆದಿ ಶಂಕರಾಚಾರ್ಯರು ಕರ್ನಾಟಕದಲ್ಲಿ ಶೃಂಗೇರಿ ಮಠ ಸ್ಥಾಪಿಸಿ ಹಿಂದೂಧರ್ಮ ಪ್ರಚಾರ ಮಾಡಿದರು ಎಂದರು.
ಬಸವಣ್ಣನವರು ಅನುಭವ ಮಂಟಪ ಸ್ಥಾಪಿಸಿ ಜಾತಿ ಧರ್ಮದ ತಾರತಮ್ಯ ಮಾಡದೆ ಎಲ್ಲರಿಗೂ ಶರಣ ಸಂಸ್ಕೃತಿಯನ್ನು ಧಾರೆ ಎರೆದರು. ವಚನ ಸಾಹಿತ್ಯ ಕಾಲದಲ್ಲಿ ಅಕ್ಕಮಹಾದೇವಿ, ಅಲ್ಲಮಪ್ರಭು ಸೇರಿದಂತೆ ಮಹಾನ್ ಶರಣರು ಬದುಕಿದ್ದರು.ಅನುಭವಮಂಟಪದಲ್ಲಿ ಧರ್ಮ ಹಾಗೂ ಸಾಮಾಜಿಕ ಚರ್ಚೆಗಳು ನಡೆಯುತ್ತಿತ್ತು ಎಂದು ಸ್ಮರಿಸಿಕೊಂಡರು. ಪ್ರಾಥಮಿಕ ಶಿಕ್ಷಣದಲ್ಲಿ ಕರ್ನಾಟಕ ಶೇ.100ರಷ್ಟು ಸಾಧನೆ ಮಾಡಿದೆ. ಪ್ರಧಾನಮಂತ್ರಿ ಗ್ರಾಮೀಣ ರೋಜ್ಗಾರ್ ಯೋಜನೆಯಲ್ಲೂ ರಾಜ್ಯ ಮುಂದಿದೆ ಎಂದು ಬಣ್ಣಿಸಿದರು.
ಈ ವೇಳೆರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟï, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರದ ಸಚಿವರಾದ ಪ್ರಹ್ಲಾದ್ ಜೋಶಿ, ಶೋಭಾ ಕರಂದ್ಲಾಜೆ, ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ.ಸುನಿಲ್ ಕುಮಾರ್ , ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್, ಶಾಸಕರಾದ ಜಿ.ಟಿ.ದೇವೇಗೌಡ, ಎಲ್.ನಾಗೇಂದ್ರ, ಎಸ್.ಎ.ರಾಮದಾಸ್, ತನ್ವೀರ್ ಸೇಠ್ ಉಪಸ್ಥಿತರಿದ್ದರು.
Previous Articleಶಿಂಜೋ ಅಬೆ ಅಂತ್ಯಸಂಸ್ಕಾರದ ಸುತ್ತ ವಿವಾದ ಯಾಕೆ ಗೊತ್ತಾ?
Next Article ಅಪ್ರಾಪ್ತನಿಗೆ ಇರಿತ, ಬೆಳಗಾವಿ ಉದ್ವಿಗ್ನ