YouTube ಪದವನ್ನು ಬಹುಶಃ ಕೇಳದವರೇ ಇರಲಿಕ್ಕಿಲ್ಲ. ಮಾಹಿತಿ ಬೇಕಾದರೆ, ಏನೋ ಹೊಸತನ್ನು ಕಲಿಯುವ ಮನಸ್ಸಾದರೆ, ನಮ್ಮಲ್ಲಿರುವ ಜ್ಞಾನವನ್ನು, ಪ್ರತಿಭೆಯನ್ನು ಜಗತ್ತಿಗೆ ತೋರಿಸಬೇಕು ಎಂದಾದರೆ, ನಮ್ಮ ಮನಸ್ಸಿಗೆ ಮೊದಲು ತೋಚುವುದೇ YouTube. ಇದು ಉಚಿತವಾಗಿ ವೀಡಿಯೊಗಳನ್ನು ನೋಡಲು ಅಥವಾ ಹಂಚಿಕೊಳ್ಳಲು ಇರುವ ಆನ್ಲೈನ್ ವೇದಿಕೆ. ಇಂದಿನ ದಿನಗಳಲ್ಲಿ, ಬಹುತೇಕ ಜನರು ತಮ್ಮದೇ ಸ್ವಂತ YouTube ಚಾನೆಲ್ ಹೊಂದಿರುತ್ತಾರೆ. ಅಷ್ಟೇ ಅಲ್ಲ, ಅದರಿಂದ ದುಡಿಯುತ್ತಿದ್ದಾರೆ ಕೂಡ. ಹೌದು, ಈಗ YouTube ಕೇವಲ ಮನರಂಜನೆಯ ಮಾಧ್ಯಮವಾಗಿರದೆ, ದುಡಿಯುವ ಮೂಲವೂ ಆಗಿದೆ.
YouTube ಬಗ್ಗೆ ಒಂದಿಷ್ಟು ವಿಷಯಗಳು –
- YouTube ಅನ್ನು ಮೂವರು ಯುವಕರು ಸೇರಿ 14 ಫೆಬ್ರವರಿ 2005 ರಲ್ಲಿ ಸ್ಥಾಪಿಸಿದರು.
- ಆರಂಭಿಸಿದಾಗ ಇದು ಒಂದು ಡೇಟಿಂಗ್ ಸೈಟ್ (Dating website) ಆಗಿತ್ತು!
- ಹುಡುಗ, ಹುಡುಗಿಯರು ತಮ್ಮ ಬಗ್ಗೆ ಕಿರುಪರಿಚಯದ ಒಂದು ವೀಡಿಯೊ ಮಾಡಿ ಹಂಚಿಕೊಳ್ಳಬೇಕು ಎನ್ನುವುದು ಉದ್ದೇಶವಾಗಿತ್ತು. ಆದರೆ ಆಗಿನ ಸಮಯದಲ್ಲಿ ಈ ಯೋಜನೆ ಅಷ್ಟಾಗಿ ಫಲಿಸಲಿಲ್ಲ.
- ಏನಾದರೂ ಮಾಡಿ ಇದರ ಪ್ರಖ್ಯಾತಿಯನ್ನು ಹೆಚ್ಚಿಸಬೇಕೆಂದು, ಹುಡುಗಿಯರಿಗೆ ದುಡ್ಡು ಕೊಟ್ಟು ವೀಡಿಯೊ ಮಾಡಿಸುವ ಪ್ರಯತ್ನವೂ ಆಗಿತ್ತಂತೆ. ಆದರೆ, ಯಾವ ಯೋಜನೆಗಳೂ ಫಲಿಸದಿದ್ದ ಕಾರಣ, ಉದ್ದೇಶದಲ್ಲಿ ಬದಲಾವಣೆ ಹುಡುಕಲಾರಂಭಿಸಿದರು.
- ಆಗಿನ ಸಮಯದಲ್ಲಿ ವೀಡಿಯೊ ಹಂಚಿಕೊಳ್ಳಲು ಯಾವ ಮಾಧ್ಯಮವೂ ಇರಲಿಲ್ಲ. ಇದನ್ನೇ ಬಂಡವಾಳ ಮಾಡಿಕೊಂಡ ಯುವಕರು, ತಮ್ಮ ಉದ್ದೇಶವನ್ನು ಬದಲಿಸಿ, ಡೇಟಿಂಗ್ ಬದಲಾಗಿ, ವೀಡಿಯೊ ಹಂಚಿಕೊಳ್ಳುವ ತಾಣವಾಗಿ ಬದಲಾಯಿಸಿದರು.
- YouTube ನಲ್ಲಿ ಯಾವ ಬಗೆಯ ವೀಡಿಯೊಗಳನ್ನು ಹಂಚಿಕೊಳ್ಳಬಹುದು ಎನ್ನುವ ಮಾಹಿತಿ ನೀಡಲು, ಖುದ್ದು ಸ್ಥಾಪಕರಲ್ಲಿ ಒಬ್ಬರು ಒಂದು ವೀಡಿಯೊ ಮಾಡಿ ಹಾಕಿದರು. ಕೇವಲ 18 ಸೆಕೆಂಡುಗಳ ವೀಡಿಯೊ ಈಗಲೂ YouTube ನಲ್ಲಿ ಲಭ್ಯವಿದೆ!
- ಇಲ್ಲಿಂದ ಕಂಪನಿಯ ಪ್ರಖ್ಯಾತಿ ಹೆಚ್ಚುತ್ತಾ ಹೋಯಿತು. ಬಳಕೆದಾರರ ಸಂಖ್ಯೆ ಕೂಡ ಹೆಚ್ಚುತ್ತಾ ಹೋಯಿತು. ಇದರ ಪ್ರಖ್ಯಾತಿಯನ್ನು ಕಂಡ Google, 2006 ರಲ್ಲಿ YouTube ಅನ್ನು 1.65 ಬಿಲಿಯನ್ ಡಾಲರ್ ಕೊಟ್ಟು ಖರೀದಿಸಿತು.
YouTube ಅನ್ನು YouTube ಎಂದೇ ಯಾಕೆ ಕರೆದರು ಗೊತ್ತಾ?
ಹೆಸರಲ್ಲಿರುವ You ಎಂದರೆ ನೀವು ಎಂದರ್ಥ. ಅಂದರೆ, ವೀಡಿಯೊ ಮಾಡುವವರು ಎಂದರ್ಥ. ‘Tube’ ಎಂಬುದು ದೂರದರ್ಶನದ ಹಳೆಯ ಮೂಲ ಪದ. ಹಾಗಾಗಿ, YouTube ಎಂದರೆ ನಿಮ್ಮದೇ ದೂರದರ್ಶನ ಎಂದರ್ಥ!
ಇಷ್ಟೆಲ್ಲಾ ಇತಿಹಾಸವಿರುವ YouTube ಬಗ್ಗೆ ಈಗ ಮಾತನಾಡಲು ಕಾರಣವಿದೆ. ಈ ಪ್ರಖ್ಯಾತ ಕಂಪನಿಯಲ್ಲೀಗ ಮಹತ್ವದ ಬೆಳವಣಿಗೆಯೊಂದು ನಡೆದಿದೆ. ಕಳೆದ 9 ವರ್ಷಗಳಿಂದ YouTube ನ CEO ಆಗಿ ಕಾರ್ಯನಿರ್ವಹಿಸಿದ Susan Wojcicki ಇದೀಗ ತಮ್ಮ ಸ್ಥಾನದಿಂದ ಕೆಳಗಿಳಿದಿದ್ದಾರೆ. ಅವರ ಅವಧಿಯಲ್ಲಿ YouTube ಸಾಕಷ್ಟು ಹೊಸ ಫೀಚರ್ ಗಳನ್ನು, ತನ್ಮೂಲಕ ಪ್ರಖ್ಯಾತಿಯನ್ನು ಪಡೆದಿದೆ. ಅವರ ಜಾಗವನ್ನು ತುಂಬುತ್ತಾ, ಕಂಪನಿಯ ಜವಾಬ್ದಾರಿಯನ್ನು ಹೆಗಲಿಗೇರಿಸಿಕೊಳ್ಳಲು ಸಿದ್ಧರಾಗಿರುವವರು ಭಾರತ ಮೂಲದ (Indian American) ನೀಲ್ ಮೋಹನ್ (Neal Mohan). ಅಂತಾರಾಷ್ಟ್ರೀಯ ಮಟ್ಟದಲ್ಲಿ ಉನ್ನತ ಹುದ್ದೆಯನ್ನು ಅಲಂಕರಿಸಿದ ಭಾರತೀಯ ಮೂಲದ ವ್ಯಕ್ತಿಗಳ ಸಾಲಿನಲ್ಲಿ ಇದೀಗ ನೀಲ್ ಮೋಹನ್ ಕೂಡ ಸೇರಿದ್ದು ಹೆಮ್ಮೆಯ ವಿಷಯ.
ನೀಲ್ ಮೋಹನ್ ಅವರು 2015 ರಿಂದ YouTube ನ chief product officer ಆಗಿ ಕಾರ್ಯನಿರ್ವಹಿಸುತ್ತಿದ್ದರು. “ನಾನು ಸುಮಾರು 15 ವರ್ಷಗಳ ಕಾಲ ನೀಲ್ ಅವರೊಂದಿಗೆ ಕೆಲಸ ಮಾಡಿದ್ದೇನೆ. ಅವರ ಸಾಮರ್ಥ್ಯದ ಮೇಲೆ ನನಗೆ ಸಂಪೂರ್ಣ ನಂಬಿಕೆಯಿದೆ” ಎಂದು Susan Wojcicki ಟ್ವೀಟ್ ಮಾಡಿದ್ದಾರೆ.
ಭಾರತ ಮೂಲದ ಹೊಸ CEO ಕೈಯ್ಯಲ್ಲಿರುವ YouTube ಯಾವ ಹೊಸತನವನ್ನು ಪಡೆಯಲಿದೆ ಎಂದು ಕಾದು ನೋಡಬೇಕಿದೆ!

