ಬೆಂಗಳೂರು, ಡಿ.19: ನೆರೆಯ ಕೇರಳದಲ್ಲಿ ಕೋವಿಡ್ (COVID-19) ಸಾಂಕ್ರಾಮಿಕ ತೀವ್ರ ರೀತಿಯಲ್ಲಿ ಹರಡುವ ಮೂಲಕ ಆತಂಕ ಸೃಷ್ಟಿಸಿರುವ ಬೆನ್ನಲ್ಲೇ ರಾಜ್ಯದಲ್ಲಿ ಕೋವಿಡ್‌ನಿಂದ ಒರ್ವ ವ್ಯಕ್ತಿ ಮೃತ ಪಟ್ಟಿರುವುದಾಗಿ ವರದಿಯಾಗಿದೆ.
ಈ ಹಿನ್ನೆಲೆಯಲ್ಲಿ ಹಿರಿಯ ನಾಗರಿಕರು ಮತ್ತು ತೀವ್ರ ಸ್ವರೂಪದ ಅನಾರೋಗ್ಯದಿಂದ ಬಳಸುತ್ತಿರುವವರು ಕಡ್ಡಾಯವಾಗಿ ಮಾಸ್ಕ್ ಧರಿಸುವಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಸೂಚನೆ ನೀಡಿದ್ದಾರೆ.
ಕೇರಳ ರಾಜ್ಯದಲ್ಲಿ ಕೋವಿಡ್ 19ರ ಪ್ರಕರಣಗಳು ವರದಿಯಾಗುತ್ತಿರುವ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯದಲ್ಲಿ ತೆಗೆದುಕೊಳ್ಳಬೇಕಾದ ಅಗತ್ಯ ಮುಂಜಾಗ್ರತಾ ಕ್ರಮಗಳ ಕುರಿತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಾಂತ್ರಿಕ ಸಮಿತಿ ಸಭೆ ನಡೆಯಿತು. ಸಭೆಯಲ್ಲಿ ಸೋಂಕು ಹರಡದಂತೆ ಅಗತ್ಯ ಕ್ರಮ ಕೈಗೊಳ್ಳಲು ಸಚಿವರು ಸೂಚನೆ ನೀಡಿದರು ಇದಾದ ನಂತರ ಇಲಾಖೆ ಕೇಂದ್ರ ಸರ್ಕಾರದ ಮಾರ್ಗ ಸೂಚಿ ಆಧರಿಸಿ ಸಾರ್ವಜನಿಕರಿಗೆ ಹೊಸ ಮಾರ್ಗಸೂಚಿ ಪ್ರಕಟಿಸಿದ್ದು ಅವುಗಳ ಸುತ್ತೋಲೆ ಹೊರಡಿಸಿದೆ.
ಸುತ್ತೋಲೆ ವಿವರ:
ಅನಗತ್ಯ ಗಾಬರಿಯಿಂದ ಈಗಲೇ ಕೇರಳ ಹಾಗೂ ತಮಿಳುನಾಡು ರಾಜ್ಯಕ್ಕೆ ಹೊಂದಿಕೊಂಡಿರುವ ಗಡಿ ಭಾಗದ ಜಿಲ್ಲೆಗಳಲ್ಲಿ ತಪಾಸಣೆಯನ್ನು ಹೆಚ್ಚಿಸುವ ಅಥವಾ ನಿರ್ಬಂಧಗಳನ್ನು ಹೇರುವ ಅವಶ್ಯಕತೆಯಿಲ್ಲ.
ಕೇರಳ ಮತ್ತು ತಮಿಳುನಾಡು ರಾಜ್ಯಕ್ಕೆ ಹೊಂದಿಕೊಂಡಿರುವ ಗಡಿ ಭಾಗದ ಜಿಲ್ಲೆಗಳಲ್ಲಿ ಎಚ್ಚರಿಕೆಯಿಂದಿರಲು ಅಗತ್ಯ ಸಂಖ್ಯೆಯಲ್ಲಿ ಪರೀಕ್ಷೆಗಳನ್ನು ನಡೆಸುವುದು ಹಾಗೂ ವರದಿ ಸಲ್ಲಿಸುವುದು ಅವಶ್ಯಕ.
ಸರ್ಕಾರ, ಖಾಸಗಿ ಹಾಗೂ ವೈದ್ಯಕೀಯ ಕಾಲೇಜು ಆಸ್ಪತ್ರೆಗಳಲ್ಲಿ ಎಲ್ಲಾ SARI ಪ್ರಕರಣಗಳು ಹಾಗೂ 20 ILI ಪ್ರಕರಣಗಳ ಪೈಕಿ ಒಂದು ILI ಪ್ರಕರಣವನ್ನು ಕೋವಿಡ್–19 ಪರೀಕ್ಷೆಗೆ ಒಳಪಡಿಸಬೇಕು.
ಅಲ್ಲದೆ, ಈ ಕೆಳಕಂಡ ಪ್ರಕರಣಗಳ ಮಾದರಿಗಳನ್ನು ಡಬ್ಲ್ಯುಜಿಎಸ್ (Whole Genome Sequencing) ಪರೀಕ್ಷೆಗೆ ರವಾನಿಸಬೇಕು ಎಂದು ಇಲಾಖೆ ಸೂಚಿಸಿದೆ.
ಅಂತರರಾಷ್ಟ್ರೀಯ ಪ್ರಯಾಣದ ಹಿನ್ನೆಲೆಯಿದ್ದು, ಕೋವಿಡ್–19 ಸೋಂಕಿನ ಲಕ್ಷಣಗಳನ್ನು ಹೊಂದಿರುವವರು
ಗುಂಪು – ಗುಂಪಾಗಿ ವರದಿಯಾಗುವ ಪ್ರಕರಣಗಳು ಹಾಗೂ ಮರಣಗಳು ವರದಿಯಾಗುವ ಫೋಕಲ್ ಔಟ್ ಬ್ರೇಕ್‌ಗಳ ಸಂದರ್ಭದಲ್ಲಿ ಅಗತ್ಯ ಸಂಖ್ಯೆಯ ಮಾದರಿಗಳನ್ನು ಡಬ್ಲ್ಯುಜಿಎಸ್ ಪರೀಕ್ಷೆಗೆ ಕಳುಹಿಸಬೇಕು.
ತೀವ್ರ ಸ್ವರೂಪದ ರೋಗ ಲಕ್ಷಣಗಳನ್ನು ಹೊಂದಿದವರು, ಆಸ್ಪತ್ರೆಗೆ ದಾಖಲಾದ ಪ್ರಕರಣಗಳು, SARI ಪ್ರಕರಣಗಳು ಹಾಗೂ ಸುದೀರ್ಘ ಅವಧಿಯವರೆಗೆ ಆಸ್ಪತ್ರೆಯಲ್ಲಿ ದಾಖಲಾದ ಪ್ರಕರಣಗಳು ಕೋವಿಡ್–19ರ ಮರು ಸೋಂಕಿಗೆ ಒಳಗಾದವರು
ಕೋವಿಡ್–19 ಲಸಿಕೆಯ ಎರಡು ಡೋಸ್ ವ್ಯಾಕ್ಸಿನ್ ಪಡೆದ ನಂತರವೂ ಕೋವಿಡ್–19 ಸೋಂಕು ಧೃಢಪಟ್ಟವರು ಕೋವಿಡ್ 19ರ ಮರಣ ಪ್ರಕರಣಗಳು ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಈ ಮೇಲಿನ ಎಲ್ಲಾ ಅಂಶಗಳ ಪಾಲನೆಯನ್ನು ಖಚಿತಪಡಿಸಿಕೊಳ್ಳುವಂತೆ ಜಿಲ್ಲಾಡಳಿತಗಳಿಗೆ ಸೂಚಿಸಲಾಗಿದೆ.