ಬೆಂಗಳೂರು,ಡಿ.17-ಕೊರೊನಾ ಬಳಿಕ ನಗರದಲ್ಲಿ ಹೊಸ ವರ್ಷದ ಸಂಭ್ರಮಾಚರಣೆ ನಡೆಯುತ್ತಿದ್ದು,ಎಲ್ಲಾ ಹೊಟೇಲ್ಗಳಲ್ಲಿ ಸಿಸಿಕ್ಯಾಮರಾ ಅಳವಡಿಸಿ,ಮಹಿಳೆಯರ ಸುರಕ್ಷತೆಗೆ ಆದ್ಯತೆ ನೀಡಿ ಕ್ರಿಮಿನಲ್ ಹಿನ್ನೆಲೆಯುಳ್ಳವರು ಬಂದಾಗ ಗಮನ ಹರಿಸುವಂತೆ ಹೊಟೇಲ್ ಮಾಲೀಕರಿಗೆ ನಗರ ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ಅವರು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ಹೊಸ ವರ್ಷದ ಸಂಭ್ರಮಾಚರಣೆ ಹಿನ್ನೆಲೆಯಲ್ಲಿ ಹೊಟೇಲ್, ಪಬ್ ಮತ್ತು ಕ್ಲಬ್ ಮಾಲೀಕರೊಂದಿಗೆ ಸಭೆ ನಡೆಸಿದ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಅವರು ಡಿ.31ರಂದು ಹೊಸ ವರ್ಷಾಚರಣೆಗೆ ಎಲ್ಲ ಸಿದ್ಧತೆ ಮಾಡಿಕೊಂಡಿದ್ದೇವೆ. ಸುರಕ್ಷತಾ ಕ್ರಮಗಳ ಬಗ್ಗೆ ಹೋಟೆಲ್ನವರಿಗೆ ಮಾರ್ಗದರ್ಶನ ಮಾಡಿದ್ದೇವೆ. ಹೋಟೆಲ್ನವರು ನಮಗೆ ಕೆಲವು ಸಲಹೆ ಸೂಚನೆ ನೀಡಿದ್ದಾರೆ ಎಂದು ತಿಳಿಸಿದರು.
ವಾಹನ ಸಂಚಾರ ನಿರ್ವಹಣೆ ಬಗ್ಗೆಯೂ ಯೋಜನೆಯನ್ನು ಹಾಕಿಕೊಂಡಿದ್ದೇವೆ. ಜನದಟ್ಟಣೆ ನಿರ್ವಹಣೆ,ವಿದ್ಯುತ್ ಸಮಸ್ಯೆ ಬಗ್ಗೆ ಗಮನ ಹರಿಸಲು ಸೂಚಿಸಿದ್ದೇವೆ.ಹೆಚ್ಚಿನ ಗ್ರಾಹಕರು ಸೇರುವುದರಿಂದ ತಾತ್ಕಾಲಿಕವಾಗಿ ಕೆಲಸಗಾರರನ್ನು ನೇಮಕ ಮಾಡಿಕೊಳ್ಳುತ್ತಿದ್ದು ಅವರ ಬಗ್ಗೆಯು ಸಹ ವಿಚಾರಿಸಲು ಹೇಳಿದ್ದೇವೆ. ಕ್ರಿಮಿನಲ್ ಹಿನ್ನಲೆಯಲ್ಲಿದ್ದರೆ ಅಂತವರ ಬಗ್ಗೆ ಗಮನ ಹರಿಸಲು ಸೂಚಿಸಿದ್ದೇವೆ ಎಂದು ತಿಳಿಸಿದರು.
ದೂರು ಕೊಟ್ಟರೇ ಕ್ರಮ:
ಗೃಹ ಸಚಿವ ಆರಗ ಜ್ಞಾನೇಂದ್ರ ಅವರ ಜೊತೆ ಸಭೆ ನಡೆಸಿರುವ ವಿಚಾರವಾಗಿ ಮಾತನಾಡಿದ ಅವರು 6-8 ತಿಂಗಳಲ್ಲಿ ಏನೆನೆಲ್ಲಾ ಕೆಲಸ ಆಗಿದೆ ಅದೆಲ್ಲದರ ಬಗ್ಗೆ ಮಾಹಿತಿ ಕೊಟ್ಟಿದ್ದೇವೆ. ಸೇಫ್ ಸಿಟಿ ಬಗ್ಗೆ ಸಹ ಚರ್ಚೆಯಾಗಿದೆ. ಕೆಲಸದ ಕಾರ್ಯಗಳ ಪ್ರಗತಿ ಬಗ್ಗೆ ಮಾಹಿತಿ ಕೊಟ್ಟಿದ್ದೇವೆ. ಕೆಲ ದಿನಗಳಿಂದ ಪೊಲೀಸರ ವಿರುದ್ಧ ಬಂದಂತಹ ದೂರುಗಳ ಬಗ್ಗೆ ವಿವರಣೆ ಕೇಳಿದರು ಕೊಟ್ಟಿದ್ದೇವೆ. ಯಾರೇ ದೂರು ಕೊಟ್ಟರು ಸಹ ಕ್ರಮ ಜರುಗಿಸುತ್ತೇವೆ. ಯಾರೇ ಸಾರ್ವಜನಿಕರು ದೂರು ನೀಡಿದರು ಸಹ ಆಯಾ ಭಾಗದ ಡಿಸಿಪಿಗಳು ವೈಯಕ್ತಿವಾಗಿ ನೋಡಿ ಕ್ರಮ ಕೈಗೊಳ್ಳಬೇಕು ಎಂದು ಸೂಚನೆ ಕೊಟ್ಟಿದ್ದೇವೆ. ಯಾರೇ ದೂರು ಕೊಟ್ಟರೂ ಅದನ್ನು ಗಂಭೀರವಾಗಿ ಪರಿಗಣಿಸುತ್ತೇವೆ. ದೂರುದಾರರ ದೂರು, ಸರಿಯಾಗಿದ್ದರೆ ಅಂತವರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದರು.
ಸಮಯ ನಿಗದಿ:
ಹೊಸ ವರ್ಷಾಚರಣೆಗೆ ಪಬ್, ಕ್ಲಬ್ನವರು ಸಿದ್ಧತೆ ನಡೆಸಿದ್ದೇವೆ. ಬ್ರಿಗೇಡ್ ಸ್ಟೋರ್ಸ್ ಮತ್ತು ಎಸ್ಟಾಬ್ಲಿಷ್ಮೆಂಟ್ ಅಸೋಸಿಯೇಷನ್ ಕ್ಲಬ್ಗೆ ಮಾತ್ರ ಸಮಯ ನಿಗದಿ ಇರಲಿದೆ, ರಸ್ತೆಯಲ್ಲಿ ನಿರ್ಬಂಧವಿಲ್ಲ ಎಂದು ಅಸೋಸಿಯೇಷನ್ ಕಾರ್ಯದರ್ಶಿ ಸುಹೇಲ್ ಯೂಸುಫ್ ಹೇಳಿದ್ದಾರೆ.
ಜನರ ಸುರಕ್ಷತೆ ದೃಷ್ಟಿಯಿಂದ ರಾತ್ರಿ ಪೂರ್ತಿ ಲೈಟಿಂಗ್ಸ್ ಇರಲಿದೆ. ಪೊಲೀಸರು ಕೆಲವು ಸಲಹೆ ಸೂಚನೆ ನೀಡಿದ್ದಾರೆ, ನಾವು ನೀಡಿದ್ದೇವೆ. ಜನರ ಓಡಾಟಕ್ಕೆ ಒನ್ವೇ ಮಾಡಿಕೊಡುವಂತೆ ಪೊಲೀಸರಿಗೆ ಮನವಿ ಮಾಡಿದ್ದೇವೆ. ಹೊಸ ವರ್ಷಾಚರಣೆಗೆ ಸರ್ಕಾರ ಇನ್ನೂ ಸಮಯ ನಿಗದಿ ಮಾಡಿಲ್ಲ ಎಂದು ಹೇಳಿದರು