ಬೆಂಗಳೂರು,ಡಿ.21: ನೆರೆಯ ಕೇರಳದಲ್ಲಿ ರೂಪಾಂತರಗೊಂಡ ಕೋವಿಡ್ ವೈರಸ್ (COVID 19) ವ್ಯಾಪಕ ಪ್ರಮಾಣದಲ್ಲಿ ಹರಡುತ್ತಿರುವ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿ ಹೊಸ ವರ್ಷಾಚರಣೆಗೆ ನಿರ್ಬಂಧ ಸೇರಿದಂತೆ ಹಲವು ಕಠಿಣ ಕ್ರಮಗಳನ್ನು ಜಾರಿಗೊಳಿಸಲಾಗುವುದು ಎಂದು ಆತಂಕಗೊಂಡಿದ್ದವರು ನಿರಾತಂಕವಾಗಿರುವ ಸುದ್ದಿ ಹೊರಬಿದ್ದಿದೆ.
ಕೋವಿಡ್‌ನ ಕುಲಾಂತರಿ JN.1 ವೈರಾಣು ಹರಡುವಿಕೆ ತಡೆಯಲು ಮುನ್ನೆಚ್ಚರಿಕೆಯೇ ಮದ್ದು.ಇದನ್ನು ಎಲ್ಲರೂ ಪಾಲಿಸಬೇಕು ಹೀಗಾಗಿ ಸರ್ಕಾರ ಕ್ರಿಸ್ಮಸ್ ಹಾಗೂ ಹೊಸ ವರ್ಷಾಚರಣೆಗೆ ಯಾವುದೇ ಹೊಸ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿಲ್ಲ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಕೋವಿಡ್-19ರ ಪರಿಸ್ಥಿತಿ ಕುರಿತು ಉನ್ನತ ಮಟ್ಟದ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚಳವಾಗಿದೆ. ಜನಸಂದಣಿ ಹೆಚ್ಚು ಇರುವ ಪ್ರದೇಶಗಳಲ್ಲಿ ಮಾಸ್ಕ್ ಧರಿಸಬೇಕು. ಮಾರ್ಗಸೂಚಿ ಬಗ್ಗೆ ಸಚಿವ ಸಂಪುಟ ಉಪಸಮಿತಿಯಲ್ಲಿ ಚರ್ಚಿಸಲಾಗುವುದು’ ಎಂದು ತಿಳಿಸಿದರು
ಕೋವಿಡ್‌ಗೆ ಸಂಬಂಧಿಸಿದಂತೆ ತಾಂತ್ರಿಕ ಸಲಹಾ ಸಮಿತಿ ಕಾಲಕಾಲಕ್ಕೆ ನೀಡುವ ಸಲಹೆಯನ್ನು ಸರ್ಕಾರ ಅನುಸರಿಸಲಿದೆ. ಕೋವಿಡ್ ಪರೀಕ್ಷಾ ಪ್ರಮಾಣ ದಿನಕ್ಕೆ 5 ಸಾವಿರಕ್ಕೆ ಹೆಚ್ಚಿಸಲಾಗಿದೆ. ಇದರಲ್ಲಿ 1500 ರ‍್ಯಾಪಿಡ್ ಆಯಂಟಿಜೆನ್ ಟೆಸ್ಟ್ ಹಾಗೂ 3500 ಆರ್‌ಟಿಪಿಸಿಆರ್ ಪರೀಕ್ಷೆಗಳಿವೆ. ಜನರು ಆತಂಕ ಪಡುವ ಅಗತ್ಯವಿಲ್ಲ. ಆದರೆ ಅಗತ್ಯವಾಗಿ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳಬೇಕು. ಸರ್ಕಾರವೂ ಎಲ್ಲಾ ರೀತಿಯ ಅಗತ್ಯ ಮುನ್ನೆಚ್ಚರಿಕೆ ವಹಿಸಲಿದೆ’ ಎಂದು ಹೇಳಿದರು.
ಬೆಂಗಳೂರಿನಲ್ಲಿ ಸೋಂಕಿಗೆ ಬಲಿಯಾದವರ ಸಂಖ್ಯೆ ಮೂರಕ್ಕೆ ಏರಿದೆ. ಕರ್ನಾಟಕದಲ್ಲಿ ಪ್ರಸ್ತುತ 92 ಸಕ್ರಿಯ ಪ್ರಕರಣಗಳು ವರದಿಯಾಗಿವೆ. ಇದರಲ್ಲಿ ಬೆಂಗಳೂರಿನಲ್ಲೇ 80 ಪ್ರಕರಣಗಳಿವೆ. 72 ಜನ ಮನೆಯಲ್ಲೇ ಪ್ರತ್ಯೇಕವಾಸದಲ್ಲಿದ್ದಾರೆ. 20 ಜನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ನೆರೆಯ ಕೇರಳದಲ್ಲಿ 2041, ತಮಿಳುನಾಡಿನಲ್ಲಿ 77, ಮಹಾರಾಷ್ಟ್ರದಲ್ಲಿ 35, ಗೋವಾದಲ್ಲಿ 23 ಹಾಗೂ ಗುಜರಾತ್‌ನಲ್ಲಿ 12 ಸಕ್ರಿಯ ಪ್ರಕರಣಗಳು ವರದಿಯಾಗಿವೆ’ ಎಂದು ವಿವರಿಸಿದರು.
ಹಿಂದಿನ ಕೋವಿಡ್ ಅಲೆಗಳ ಸಂದರ್ಭದಲ್ಲಿ ನಡೆದ ತಪ್ಪುಗಳು ಈ ಬಾರಿ ಆಗಬಾರದು. ಆಕ್ಸಿಜನ್, ವೆಂಟಿಲೇಟರ್, ಬೆಡ್‌ಗಳು ಯಾವುದಕ್ಕೂ ತೊಂದರೆ ಆಗಬಾರದು. ಕಳೆದ ಬಾರಿ ತೊಂದರೆ ಆಗಿ ಹಲವಾರು ಜನ ಮೃತಪಟ್ಟರು. ಆಕ್ಸಿಜನ್ ಲಭ್ಯತೆಯನ್ನು ಖಾತರಿ ಪಡಿಸಬೇಕು. ಇದಕ್ಕೆ ಆರೋಗ್ಯ ಇಲಾಖೆ ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆಗಳು ಸನ್ನದ್ಧವಾಗಿ ಇವು ಯಾವುದೂ ಕೊರತೆಯಾಗದಂತೆ ನೋಡಿಕೊಳ್ಳಬೇಕು. ತಾಂತ್ರಿಕ ಸಲಹಾ ಸಮಿತಿಯ ಸಲಹೆಗಳನ್ನು ಪಾಲಿಸಬೇಕು ಎಂದು ಸೂಚಿಸಲಾಗಿದೆ ಎಂದು ತಿಳಿಸಿದರು. ಇದಾದ ನಂತರ ಕೆಲವು ಮಾರ್ಗಸೂಚಿ ಬಿಡುಗಡೆ ಮಾಡಲಾಯಿತು.
ಮಾರ್ಗಸೂಚಿ:
60 ವರ್ಷ ಮೇಲ್ಪಟ್ಟವರು ಮೂತ್ರಪಿಂಡ, ಹೃದಯ, ಯಕೃತ್ ಸಮಸ್ಯೆಗಳಿಂದ ಬಳಲುತ್ತಿರುವವರು, ಗರ್ಭಿಣಿ ಹಾಗೂ ಬಾಣಂತಿಯರು ಮಾಸ್ಕ್ ಧರಿಸುವುದು ಹಾಗೂ ಮುಚ್ಚಿದ, ಹೆಚ್ಚು ಗಾಳಿಯಾಡದ ಸ್ಥಳಗಳಿಗೆ ಹಾಗೂ ಜನಸಂದಣಿ ಇರುವ ಸ್ಥಳಗಳಿಗೆ ಭೇಟಿ ನೀಡದೆ ಇರುವುದು.
ಉಸಿರಾಟದ ಸಮಸ್ಯೆಯ ಲಕ್ಷಣಗಳಾದ ಜ್ವರ, ಕೆಮ್ಮು, ಶೀತ, ನೆಗಡಿ ಇತ್ಯಾದಿಗಳಿಂದ ಬಳಲುತ್ತಿರುವವರು ಕೂಡಲೇ ವೈದ್ಯಕೀಯ ಸಮಾಲೋಚನೆ ನಡೆಸುವುದು ಹಾಗೂ ಮಾಸ್ಕ್ ಧರಿಸುವುದು.
ವೈಯಕ್ತಿಕ ಸ್ವಚ್ಛತೆಯನ್ನು ಕಾಪಾಡುವುದು. ಅನಾರೋಗ್ಯ ಪೀಡಿತರಾದರೆ ಮನೆಯಲ್ಲೇ ಇರಿ ಹಾಗೂ ಇತರರೊಂದಿಗೆ ಸಂಪರ್ಕವನ್ನು ಕಡಿಮೆ ಮಾಡಿ.
ಜನಸಂದಣಿಯ ಪ್ರದೇಶದಲ್ಲಿ ಮಾಸ್ಕ್ ಧರಿಸುವುದು ಉತ್ತಮ.
ವಿದೇಶ ಪ್ರವಾಸದ ಸಂದರ್ಭದಲ್ಲಿ ಮುನ್ನೆಚ್ಚರಿಕೆಯ ಕ್ರಮಗಳನ್ನು ಕೈಗೊಳ್ಳುವುದು.
ರಾಜ್ಯವೂ ಕೇರಳ ಮತ್ತು ತಮಿಳುನಾಡು ಗಡಿ ಭಾಗದಲ್ಲಿ ಜ್ವರದ ಪ್ರಕರಣಗಳ ಮೇಲೆ ನಿಗಾ ವಹಿಸಿ, ಪರೀಕ್ಷೆ ಮತ್ತು ವರದಿ ಮಾಡುವ ವ್ಯವಸ್ಥೆ ಮಾಡಲಾಗುತ್ತಿದೆ.
ಎಲ್ಲ ಖಾಸಗಿ ಮತ್ತು ಸರ್ಕಾರಿ ಆಸ್ಪತ್ರೆಗಳಲ್ಲಿ ಉಸಿರಾಟದ ತೊಂದರೆ ಮತ್ತು ಜ್ವರದ ಲಕ್ಷಣ ಇರುವ ಪ್ರಕರಣಗಳಲ್ಲಿ ಕೋವಿಡ್ ಪರೀಕ್ಷೆ ಕಡ್ಡಾಯವಾಗಿ ಮಾಡಲು ಸೂಚಿಸಿದೆ