ಬೆಂಗಳೂರು,ಫೆ.13-
‘ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ನೈತಿಕ ಶಿಕ್ಷಣವನ್ನು ಜಾರಿಗೆ ತರಲು ಸರ್ಕಾರ ಬದ್ಧವಾಗಿದೆ. ಆದರೆ ಸಾತ್ವಿಕ ಆಹಾರದ ಬಗ್ಗೆ ಯಾವುದೇ ಪ್ರಸ್ತಾವನೆಗಳಿಲ್ಲ’ ಎಂದು ಶಾಲಾ ಶಿಕ್ಷಣ, ಸಾಕ್ಷರತಾ ಸಚಿವ ಬಿ.ಸಿ.ನಾಗೇಶ್ (B.C. Nagesh) ಸ್ಪಷ್ಟಪಡಿಸಿದರು. ‘ರಾಜ್ಯದಲ್ಲಿ 6 ರಿಂದ 15 ನೇ ವಯೋಮಾನದ 1 ರಿಂದ 8 ನೇ ತರಗತಿಯ ಮಕ್ಕಳಲ್ಲಿ ಅಪೌಷ್ಠಿಕತೆ, ರಕ್ತಹೀನತೆ ಹಾಗೂ ಬಹುಪೋಷಕಾಂಶಗಳ ನ್ಯೂನ್ಯತೆ ಸರಿಪಡಿಸಲು ಮಕ್ಕಳಿಗೆ ಮೊಟ್ಟೆ ಅಥವಾ ಮೊಟ್ಟೆ ಸೇವಿಸದ ಮಕ್ಕಳಿಗೆ ಬಾಳೆಹಣ್ಣು ಇಲ್ಲವೆ ಚಿಕ್ಕಿ ನೀಡುವುದನ್ನು ಮುಂದುವರೆಸಲಾಗುವುದು’ ಎಂದು ಹೇಳಿದರು.
ವಿಧಾನಪರಿಷತ್ನಲ್ಲಿ ಸದಸ್ಯ ಕೆ.ಎ.ತಿಪ್ಪೇಸ್ವಾಮಿ (K.A Thippeswamy) ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ‘ಒಂದರಿಂದ ಎಂಟನೇ ತರಗತಿಯವರೆಗೂ ಮೊಟ್ಟೆ ನೀಡಬೇಕು ಎಂದು 2007ರಿಂದಲೂ ಚರ್ಚೆ ನಡೆಯುತ್ತಿದೆ. ಆದರೆ ಕೊಟ್ಟಿರಲಿಲ್ಲ. ನಮ್ಮ ಸರ್ಕಾರ ಯಾವುದೇ ವಿರೋಧ ಬಂದರೂ ಲೆಕ್ಕಿಸದೆ ಮೊದಲು ಅಪೌಷ್ಠಿಕತೆ ಹೆಚ್ಚಿರುವ ಜಿಲ್ಲೆಗಳಲ್ಲಿ ಮೊಟ್ಟೆ ನೀಡುವುದನ್ನು ಪ್ರಾಯೋಗಿಕವಾಗಿ ಜಾರಿಗೆ ತಂದಿತ್ತು’ ಎಂದರು.
‘ಶಿಕ್ಷಣ ತಜ್ಞರು, ಕೆಲವು ಮಠಾಧೀಶರು, ಸಂಘ ಸಂಸ್ಥೆಗಳು ಮೊಟ್ಟೆಯ ಬದಲಾಗಿ ಸಸ್ಯಹಾರಿ, ಸಾತ್ವಿಕ ಆಹಾರ ನೀಡುವಂತೆ ಸಲಹೆ ನೀಡಿದ್ದರು. ಆದರೆ, ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ ವರದಿ ಪ್ರಕಾರ ವಿದ್ಯಾರ್ಥಿಗಳಿಗೆ ಪೂರಕ ಪೌಷ್ಠಿಕಾಂಶ ರೂಪದಲ್ಲಿ ಮೊಟ್ಟೆ ಹಾಗೂ ಮೊಟ್ಟೆ ಸೇವಿಸದ ವಿದ್ಯಾರ್ಥಿಗಳಿಗೆ ಬಾಳೆಹಣ್ಣು ಅಥವಾ ಚಿಕ್ಕಿ ನೀಡಲಾಗುವುದು’ ಎಂದು ಹೇಳಿದರು.
‘ಶಾಲಾ ಶಿಕ್ಷಣದ ಕುರಿತು ಚರ್ಚಿಸಲು ಇತ್ತೀಚೆಗೆ ಸರ್ವ ಧರ್ಮಗಳ ಚಿಂತಕರ ದುಂಡು ಮೇಜಿನ ಸಭೆ ನಡೆಸಲಾಗಿತ್ತು. ಅಲ್ಲಿ ಕೆಲವರು ಸಾತ್ವಿಕ ಆಹಾರದ ಕುರಿತು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಅಭಿಪ್ರಾಯ ವ್ಯಕ್ತ ಪಡಿಸುವುದು ಅವರ ಸ್ವಾತಂತ್ರ್ಯ, ಅಭಿಪ್ರಾಯವನ್ನು ಇದೇ ರೀತಿ ವ್ಯಕ್ತಪಡಿಸಿ ಎಂದು ಹೇಳಲು ಸರ್ಕಾರಕ್ಕೆ ಸಾಧ್ಯವಿಲ್ಲ. ಆದರೆ ಸಾತ್ವಿಕ ಆಹಾರ ನೀಡುವ ಬಗ್ಗೆ ಚಿಂತನೆ ನಡೆಸಿಲ್ಲ’ ಎಂದರು. ‘ಶಾಲಾ ಹಂತದಲ್ಲಿ ನೈತಿಕ ಶಿಕ್ಷಣ ನೀಡಬೇಕು ಎಂದು ಎಲ್ಲರೂ ಸಲಹೆ ನೀಡಿದ್ದಾರೆ. ಅದನ್ನು ಮುಂದಿನ ವರ್ಷದಿಂದ ಜಾರಿಗೆ ತರಲು ಪಯತ್ನಗಳು ನಡೆದಿವೆ. ಇಲ್ಲಿ ನೈತಿಕ ಶಿಕ್ಷಣ ಮತ್ತು ಸಾತ್ವಿಕ ಆಹಾರವನ್ನು ಒಂದೇ ದೃಷ್ಟಿಯಿಂದ ನೋಡುವುದು ಸರಿಯಲ್ಲ’ ಎಂದರು.