ಕೃಪೆ – CNN
North Korea ಎಂದರೆ ನೆನಪಾಗುವುದು ಕ್ರೌರ್ಯ, ದಾರ್ಷ್ಟ್ಯಗಳಂತಹ ಕಹಿ ಗುಣಗಳೇ. ಕಾರಣ ಅಲ್ಲಿಯ ಸರ್ವೋಚ್ಚ ನಾಯಕ ಕಿಮ್ ಜಾಂಗ್ ಉನ್ (Kim Jong-un). 1948 ರಿಂದ ಆರಂಭವಾದ ಕಿಮ್ ಮನೆತನದ ಆಳ್ವಿಕೆಯನ್ನು ಮುಂದುವರೆಸಿಕೊಂಡು ಹೋಗುತ್ತಿರುವ ನಾಯಕ. ನಿರ್ದಯ ಮತ್ತು ಕಠೋರ ನಿರ್ಧಾರಗಳ ಇವರ ಆಳ್ವಿಕೆ ದೇಶದ ಸುಧಾರಣೆಗಿಂತ ಹೆಚ್ಚಿನ ಆದ್ಯತೆಯನ್ನು ಪರಮಾಣು ಶಸ್ತ್ರಾಸ್ತ್ರಗಳ ವರ್ಧನೆಗೇ ನೀಡಿದೆ. ದೇಶದಲ್ಲಿ ಕಿತ್ತು ತಿನ್ನುವ ಬಡತನವಿದ್ದರೂ, ದೇಶದ ಸಂಪತ್ತನ್ನೆಲ್ಲ ಯುದ್ಧ ಶಸ್ತ್ರಾಸ್ತ್ರಗಳ ಮೇಲೆಯೇ ವಿನಿಯೋಗಿಸುವ ಇವರು ಸದಾ ನೆರೆಯ ರಾಷ್ಟ್ರಗಳನ್ನು ಬೆದರಿಸುತ್ತ, ಹೆದರಿಸುತ್ತಲೇ ತಮ್ಮ ಅಸ್ತಿತ್ವವನ್ನು ಕಾಯ್ದುಕೊಂಡಿದ್ದಾರೆ.
3 ತಲೆಮಾರುಗಳಿಂದ ಕಿಮ್ ಕುಟುಂಬ ತಮ್ಮದೇ ಆಳ್ವಿಕೆಯನ್ನು ನಡೆಸುತ್ತ ಬಂದಿದೆ. ಸರ್ವಾಧಿಕಾರತ್ವದ ಆಳ್ವಿಕೆಯಲ್ಲಿ ಬಳಲುತ್ತಿರುವ ರಾಷ್ಟ್ರದಲ್ಲಿ ಇತ್ತೀಚಿಗೆ ವಿಭಿನ್ನ ಬೆಳವಣಿಗೆಯೊಂದು ಕಂಡುಬಂದಿತು. ಕೊರಿಯನ್ ಪೀಪಲ್ಸ್ ಆರ್ಮಿ (Korean People’s Army – KPA) ಸ್ಥಾಪನೆಯ 75 ನೇ ವಾರ್ಷಿಕೋತ್ಸವದ ಅಂಗವಾಗಿ ಸೇನಾಶಿಬಿರದಲ್ಲಿ ಆಯೋಜಿಸಲಾಗಿದ್ದ ಅದ್ದೂರಿ ಔತಣಕೂಟಕ್ಕೆ ಕಿಮ್ ಜಾಂಗ್ ಉನ್ ತಮ್ಮ ಪತ್ನಿ ರಿ ಸೋಲ್ ಜು (Ri Sol Ju) ಮತ್ತು ಮಗಳು ಎಂದು ನಂಬಲಾಗಿರುವ 9 ವರ್ಷದ ಜು ಏ (Ju Ae) ರೊಡನೆ ಆಗಮಿಸಿದ್ದರು. ಅಲ್ಲದೆ, ಔತಣ ಕೂಟದ ಮೇಜಿನ ಮಧ್ಯದ ಆಸನದಲ್ಲಿ ಮಗಳನ್ನು ಕೂರಿಸಿದ್ದರು. ಸೇನೆ ಮತ್ತು ಕಿಮ್ ಜಾಂಗ್ ಉನ್ ರಿಗೇ ಹೆಚ್ಚಿನ ಪ್ರಾಮುಖ್ಯತೆ ಇರುವ ದೇಶದಲ್ಲಿ, ಅದರಲ್ಲೂ ಸೇನಾ ಶಿಬಿರದ ಮಹತ್ವದ ಔತಣಕೂಟದಲ್ಲಿ 9 ವರ್ಷದ ಮಗಳನ್ನು ತಮ್ಮೊಡನೆ ಕರೆತಂದುದಲ್ಲದೆ ಮುಖ್ಯಸ್ಥನ ಸ್ಥಾನದಲ್ಲಿ ಮಗಳನ್ನು ಕೂರಿಸಿದ ನಾಯನಕ ನಡೆ ಎಲ್ಲರಲ್ಲೂ ಕುತೂಹಲ ಮೂಡಿಸಿದೆ.
ಇದು ತಮ್ಮ ನಂತರದ ಸರ್ವಾಧಿಕಾರಿಯನ್ನು ಪರಿಚಯಿಸುವ ಸುಳಿವಾಗಿತ್ತೋ? ಅಥವಾ ತಮ್ಮ ನಂತರವೂ North Korea ಸೇನೆ ಮತ್ತು ಕಿಮ್ ಕುಟುಂಬದ ನಂಟು ಬದಲಾಗಲು ಸಾಧ್ಯವಿಲ್ಲ ಎಂದು ಹೇಳಹೊರಟಿದ್ದರೋ? ಅಥವಾ ತಮ್ಮ ಮನೆತನ ಮತ್ತು ಸೇನೆಯ ಮಾರ್ಪಾಡಾಗದಂಥ ನಂಟನ್ನು ವಿಶ್ವಕ್ಕೆ ತೋರಿಸುವ ಹುನ್ನಾರವಿತ್ತೋ? ಒಟ್ಟಿನಲ್ಲಿ ಅವರ ಈ ನಡೆ ಎಲ್ಲರಲ್ಲೂ ಒಂದು ಅಚ್ಚರಿಯನ್ನು ಮೂಡಿಸಿದೆ.