ಧರ್ಮಪುರಿ: ಇಲ್ಲಿನ ವೈದ್ಯರೊಬ್ಬರು ಹತ್ತು ರೂ. ನಾಣ್ಯಗಳನ್ನು ಸಂಗ್ರಹಿಸಿ, ಈ ಮೂಲಕವೇ ಕಾರು ಖರೀದಿ ಮಾಡಿದ್ದಾರೆ.
ಹತ್ತು ರೂಪಾಯಿ ನಾಣ್ಯದ ಬಗ್ಗೆ ನಡೆಯುತ್ತಿರುವ ಅಪಪ್ರಚಾರದಿಂದಾಗಿ ಹಲವರು ನಾಣ್ಯ ಸ್ವೀಕರಿಸುವುದನ್ನೇ ಬಿಟ್ಟಿದ್ದಾರೆ. ಈ ಬಗ್ಗೆ ಜನರಲ್ಲಿ ಅರಿವು ಮೂಡಿಸಲು ಧರ್ಮಪುರಿಯ ವೈದ್ಯರೊಬ್ಬರು ನಾಣ್ಯಗಳ ಮೂಲಕವೇ ಕಾರು ಖರೀದಿಸಿದ್ದಾರೆ.
27 ವರ್ಷದ ಹೋಮಿಯೋಪತಿ ವೈದ್ಯ ಡಾ. ಎ ವೆಟ್ರಿವೇಲ್ ಎಂಬುವರು 60,000 ಹತ್ತು ರೂಪಾಯಿ ನಾಣ್ಯಗಳನ್ನೇ ನೀಡಿ ಕಾರು ಖರೀದಿಸಿದ್ದಾರೆ. ಈ ಮೂಲಕ ಜನತೆಯಲ್ಲಿ ಅರಿವು ಮೂಡಿಸಲು ಮುಂದಾಗಿದ್ದಾರೆ.
ಶಾಲೆಯನ್ನೂ ನಡೆಸುತ್ತಿರುವ ಈ ವೈದ್ಯ ತಮ್ಮ ನಿರ್ಧಾರದ ಬಗ್ಗೆ ಮಾತನಾಡಿ, ಕಳೆದ ತಿಂಗಳು ನಾನು ವಿದ್ಯಾರ್ಥಿಗಳೊಂದಿಗೆ ಮಾತನಾಡುತ್ತಿದ್ದಾಗ ಅವರು 10 ರೂಪಾಯಿ ನಾಣ್ಯ ಇಟ್ಟುಕೊಂಡು ಆಡುತ್ತಿದ್ದುದನ್ನು ಗಮನಿಸಿದೆ. ಅಗ 10 ರೂಪಾಯಿ ನಾಣ್ಯವನ್ನು ಧರ್ಮಪುರಿಯಲ್ಲಿ ಯಾವ ಅಂಗಡಿಗಳಲ್ಲೂ ಸ್ವೀಕರಿಸುತ್ತಿಲ್ಲ ಎಂಬ ಮಾಹಿತಿ ಸಿಕ್ಕಿತು. ನಾನು ಈ ಬಗ್ಗೆ ಅರಿವು ಮೂಡಿಸಲು ನಿರ್ಧರಿಸಿ ಕಳೆದ 30 ದಿನಗಳಿಂದ ಮನೆ ಮನೆಗಳಿಗೆ ತೆರಳಿ ನಾಣ್ಯ ಸಂಗ್ರಹಿಸಿ ಅದನ್ನು 10 ರೂಪಾಯಿ ನೋಟುಗಳೊಂದಿಗೆ ಬದಲಾಯಿಸುತ್ತಿದ್ದೆ. ಬ್ಯಾಂಕ್‌ಗಳಿಂದಲೂ ಸಹ ನಾನು ನಾಣ್ಯಗಳನ್ನು ಸಂಗ್ರಹಿಸಿದ್ದೇನೆ.
ಜನರು ನಾಣ್ಯಗಳನ್ನು ನೋಟುಗಳೊಂದಿಗೆ ಬದಲಿಸಲು ಅತ್ಯಂತ ಸಂತಸದಿಂದ ಮುಂದಾಗಿದ್ದರು. 60,000 ನಾಣ್ಯಗಳನ್ನು ಸಂಗ್ರಹಿಸಿ ಶೋ ರೂಮ್ ಗೆ ಅದೇ ನಾಣ್ಯಗಳನ್ನು ನೀಡಿ, ಕಾರನ್ನೂ ಖರೀದಿಸಿದೆ ಎನ್ನುತ್ತಾರೆ ವೈದ್ಯ ಡಾ. ಎ ವೆಟ್ರಿವೇಲ್.