ಬೆಂಗಳೂರು: ಭಾರತೀಯ ಸ್ಟಾರ್ಟ್‌ಅಪ್‌ಗಳಲ್ಲಿ ಕ್ರಾಂತಿಕಾರಕ ಬದಲಾವಣೆ ತಂದ ಓಲಾ ಕ್ಯಾಬ್ ಭಾರೀ ನಷ್ಟ ಅನುಭವಿಸುತ್ತಿದೆ.
ಕೊರೋನಾ ಲಾಕ್‌ಡೌನ್ ಹಾಗೂ ಮತ್ತಿತರ ಕಾರಣಗಳಿಂದಾಗಿ ನಷ್ಟದ ಸುಳಿಗೆ ಸಿಲುಕಿರುವ ಓಲಾ ಅವಸಾನದ ಅಂಚಿನಲ್ಲಿದೆ. ಹಣಕಾಸಿನ ವಿಚಾರಕ್ಕೆ ಸಂಬಂಧಿಸಿದಂತೆ ಡ್ರೈವರ್‌ಗಳ ಅಸಹಕಾರ, ಗ್ರಾಹಕರ ಬೇಸರದಿಂದ ಓಲಾ ತತ್ತರಿಸಿದೆ. ಹೀಗಾಗಿ ಇಷ್ಟರಲ್ಲೇ ‘ಓಲಾ ಸೇವೆ ಬಂದ್’ ಎಂಬ ಸುದ್ದಿ ಬಂದರೂ ನೀವು ಅಚ್ಚರಿಪಡಬೇಕಿಲ್ಲ.
ಓಲಾಗೆ ಹೋಲಿಸಿದರೆ ಉಬರ್ ಸ್ವಲ್ಪಮಟ್ಟಿಗೆ ಸುಸ್ಥಿತಿಯಲ್ಲಿದೆಯಾದರೂ ಗ್ರಾಹಕರನ್ನು ಸೆಳೆಯುವಲ್ಲಿ ಎರಡೂ ಸಂಸ್ಥೆಗಳು ಸೋತಿವೆ ಎಂದು ವರದಿಗಳು ಹೇಳಿವೆ.
ಓಲಾ ಕ್ಯಾಬ್‌ನ ಇಂದಿನ ದುಸ್ಥಿತಿಗೆ ಕೊರೋನಾ ಎಷ್ಟು ಕಾರಣವೋ ಅಷ್ಟೇ ಪ್ರಮಾಣದಲ್ಲಿ ಅಸಮರ್ಪಕ ಆಡಳಿತ ನಿರ್ವಹಣೆಯೂ ಕಾರಣ ಎಂದು ವರದಿಗಳು ವಿವರಿಸಿವೆ. ಚಾಲಕರಿಗೆ ಸಮರ್ಪಕ ಲಾಭಾಂಶ ನೀಡದಿರುವುದು, ಗ್ರಾಹಕರಿಗೆ ಸರಿಯಾದ ರೀತಿಯಲ್ಲಿ ಆಫರ್ ಕೊಡದಿರುವುದು, ಬಿಲ್ಲಿಂಗ್‌ನಲ್ಲಿನ ಕಿರಿಕಿರಿ, ದುಬಾರಿ ದರ ವಿಧಿಸುವುದೂ ಸೇರಿದಂತೆ ಹಲವು ವಿಚಾರಗಳಲ್ಲಿ ಪೂರ್ವಾಪರ ಯೋಚನೆಯಿಲ್ಲದೆ ನಡೆದುಕೊಂಡಿದ್ದೇ ಕಾರಣ ಎಂದು ಹೇಳಲಾಗಿದೆ.
ಕೊರೋನಾ ಲಾಕ್‌ಡೌನ್ ಬಳಿಕ 35 ಸಾವಿರಕ್ಕೂ ಹೆಚ್ಚು ಕ್ಯಾಬ್ ಡ್ರೈವರ್‌ಗಳು ಓಲಾದಿಂದ ಹೊರನಡೆದದ್ದೇ ಓಲಾ ನಷ್ಟದತ್ತ ವಾಲಲು ಪ್ರಮುಖ ಕಾರಣ ಎನ್ನಲಾಗಿದೆ. ಹೀಗೆ ಓಲಾ ಬಿಟ್ಟವರ ಪೈಕಿ ಹಲವರು ತಮ್ಮ ಕಾರನ್ನು ಬಾಡಿಗೆಗೆ ಓಡಿಸುತ್ತಿದ್ದಾರೆ. ಹೀಗಾಗಿ ಓಲಾದ ಸಾವಿರಾರು ಕಾಯಂ ಗ್ರಾಹಕರು ಈಗ ಓಲಾದಲ್ಲಿ ಓಡಾಡುತ್ತಿಲ್ಲ ಎನ್ನಲಾಗಿದೆ.
ವೆಚ್ಚದ ದೃಷ್ಟಿಯಿಂದ ನೋಡಿದರೆ, ನಿತ್ಯ ಓಲಾದಲ್ಲಿ ಓಡಾಡುವ ಗ್ರಾಹಕ ಹೊಸ ಕಾರು ಖರೀದಿಸುವುದೇ ಉತ್ತಮ ಎನ್ನುವಷ್ಟು ಓಲಾ ಪ್ರಯಾಣ ದುಬಾರಿಯಾಗಿದೆ. ಸರ್‌ಚಾರ್ಜ್ ಶುಲ್ಕವನ್ನೂ ಓಲಾ ಗ್ರಾಹಕರಿಂದಲೇ ವಸೂಲಿ ಮಾಡುತ್ತಿದೆ. ಸ್ವಂತ ಕಾರಲ್ಲಿ ಪ್ರಯಾಣಿಸುವುದೂ ಒಂದೇ, ಓಲಾ ಕಾರಲ್ಲಿ ಪ್ರಯಾಣಿಸುವುದೂ ಒಂದೇ ಎಂಬ ಸ್ಥಿತಿ ನಿರ್ಮಾಣವಾದ್ದರಿಂದ ಹಲವು ಓಲಾ ಗ್ರಾಹಕರು ಕಾರು ಖರೀದಿಸಿ ಓಲಾ ಕ್ಯಾಬ್‌ನಿಂದ ದೂರವಾಗಿದ್ದಾರೆ.
ಅತ್ತ ಕಾರೂ ಇಲ್ಲ, ಚಾಲಕರೂ ಇಲ್ಲ, ಗ್ರಾಹಕರೂ ಇಲ್ಲ. ಇತ್ತ ಇರುವ ಗ್ರಾಹಕರಿಗೆ ಕಾರುಗಳ ಕೊರತೆಯಿಂದ ಸಮರ್ಪಕ ಸೇವೆ ನೀಡಲೂ ಆಗದ ಸ್ಥಿತಿಗೆ ಓಲಾ ತಲುಪಿದೆ. ಹೀಗಾಗಿ ಗ್ರಾಹಕರು ಸರಿಯಾದ ಸಮಯಕ್ಕೆ ನಿರ್ದಿಷ್ಟ ಸ್ಥಳ ತಲುಪಲಾರದೆ ಓಲಾವನ್ನು ಶಪಿಸುತ್ತಿದ್ದಾರೆ.
ಚಾಲಕರಿಗೂ ಓಲಾ ಸಂಸ್ಥೆ ಸರಿಯಾದ ರೀತಿಯಲ್ಲಿ ಇನ್ಸೆಂಟಿವ್ಸ್, ವಿಶೇಷ ರಿಯಾಯಿತಿ ಕೊಡದಿರುವುದರಿಂದ ಓಲಾದಲ್ಲೇ ಇದ್ದರೂ ಡ್ರೈವರ್‌ಗಳು ಆ್ಯಪ್ ಆಫ್ ಮಾಡಿಕೊಂಡು ಇತರ ಬಾಡಿಗೆ ಒಪ್ಪಿಕೊಳ್ಳುತ್ತಿರುವುದೂ ಓಲಾಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಅಷ್ಟೇ ಅಲ್ಲ, ಕಾರು ಹತ್ತಿದಾಕ್ಷಣ ಡ್ರೈವರ್ ತನ್ನ ಗೋಳು ಹೇಳಿಕೊಳ್ಳುತ್ತಿರುವುದರಿಂದಲೂ ಗ್ರಾಹಕರು ಕಿರಿಕಿರಿ ಅನುಭವಿಸುತ್ತಿದ್ದು, ಈ ಕಾರಣಕ್ಕೂ ಹಲವರು ಓಲಾ ಕ್ಯಾಬ್‌ನಿಂದ ದೂರವಾಗಿದ್ದಾರೆ.
ಸಾಲದ್ದಕ್ಕೆ, ನಿಯಮ ಉಲ್ಲಂಘನೆ, ಗ್ರಾಹಕರ ದೂರು, ಸೇವೆಯಲ್ಲಿನ ವ್ಯತ್ಯಯ ಮತ್ತಿತರ ಕಾರಣಗಳಿಗಾಗಿ ಇತ್ತೀಚೆಗೆ ಓಲಾ ಹಾಗೂ ಉಬರ್‌ಗೆ ಕೇಂದ್ರ ಗ್ರಾಹಕ ರಕ್ಷಣಾ ಪ್ರಾಧಿಕಾರ (Central Consumer Protection Authority) ನೋಟಿಸ್ ನೀಡಿದೆ.
ವ್ಯಾವಹಾರಿಕ ನಿಯಮಗಳನ್ನು ಉಲ್ಲಂಘಿಸಿದ ಹಾಗೂ ಗ್ರಾಹಕರ ಹಕ್ಕುಗಳನ್ನು ನಿರ್ಲಕ್ಷಿಸಿದ ಆರೋಪದ ಮೇಲೆ ಈ ಎರಡು ಕಂಪನಿಗಳಿಗೆ ನೋಟಿಸ್ ಜಾರಿ ಮಾಡಲಾಗಿದೆ.
ಗ್ರಾಹಕರ ದೂರುಗಳು, ಸಮಸ್ಯೆಗಳನ್ನು ಪರಿಹರಿಸಲು ವಿಶೇಷ ವ್ಯವಸ್ಥೆಯ ಕೊರತೆ, ಸೇವೆಗಳಲ್ಲಿನ ದೋಷಗಳು, ವಿಪರೀತ ರದ್ದತಿ ಶುಲ್ಕಗಳು ಮತ್ತು ಹೆಚ್ಚಿನ ಮೊತ್ತವನ್ನು ವಿಧಿಸುವ ಕುರಿತು ಓಲಾ ಉಬರ್‌ಗೆ ನೋಟಿಸ್ ನೀಡಿದ್ದಲ್ಲದೆ, ಆಕ್ರೋಶವನ್ನೂ ವ್ಯಕ್ತಪಡಿಸಿದೆ.
ಈ ವರ್ಷದ ಏಪ್ರಿಲ್ 1 ರಿಂದ ಮೇ 1ರವರೆಗೆ ಓಲಾ ವಿರುದ್ಧ ಒಟ್ಟು 2,482 ದೂರುಗಳು ಬಂದಿವೆ. ಇದು ಕ್ಯಾಬ್‌ಗಳಲ್ಲಿನ ಸೇವಾ ದೋಷಗಳ 1340 ದೂರುಗಳು, ಪಾವತಿ ಮರುಪಾವತಿ ಮಾಡದಿರುವ 521 ದೂರುಗಳು, ಅನಧಿಕೃತ ಶುಲ್ಕಗಳ 174 ದೂರುಗಳು, MRPಗಿಂತ ಹೆಚ್ಚಿನ ಶುಲ್ಕದ 139 ದೂರುಗಳು, ಗ್ಯಾರಂಟಿಗಳನ್ನು ಅನುಸರಿಸದಿರುವ 62 ದೂರುಗಳು, ಖಾತೆಗಳ ರದ್ದತಿ ಮತ್ತು ಸೇವೆಗಳನ್ನು ವಿತರಿಸದ ದೂರುಗಳು ಸೇರಿವೆ.
ಸೇವೆಗಳಲ್ಲಿ ವಿಳಂಬ ಅಥವಾ ಸೇವೆಗಳ ವಿತರಣೆಯಂತಹ ಸಮಸ್ಯೆಗಳ ಕುರಿತು 31 ದೂರುಗಳು, ಫಲಾನುಭವಿಗಳಿಗೆ ಬಾಕಿ ಪಾವತಿಸದಿರುವ ಬಗ್ಗೆ 29 ದೂರುಗಳು, ಮೋಸದ ದೋಷಗಳ ಕುರಿತು 12 ದೂರುಗಳು, ವಲಯ ವಿಚಾರಣೆಯ ಹೆಸರಿನಲ್ಲಿ 72 ದೂರುಗಳು ಮತ್ತು 72 ದೂರುಗಳು ಬಂದಿವೆ ಎಂದು ರಾಷ್ಟ್ರೀಯ ಗ್ರಾಹಕ ಸಹಾಯವಾಣಿ ತಿಳಿಸಿದೆ. ಇತರ ಅಪರಾಧಗಳ ಕುರಿತು 52 ದೂರುಗಳು ದಾಖಲಾಗಿವೆ.
ಉಬರ್ ಕ್ಯಾಬ್ಸ್ ವಿರುದ್ಧ ಒಟ್ಟು 770 ದೂರುಗಳು ಬಂದಿವೆ. ಇವುಗಳಲ್ಲಿ, 473 ಸೇವಾ ದೋಷಗಳು, 105 ಪಾವತಿ ಮರುಪಾವತಿ ಮಾಡದಿದ್ದಕ್ಕಾಗಿ, 37 MRPಗಿಂತ ಹೆಚ್ಚಿನ ಶುಲ್ಕ ವಿಧಿಸಿದ್ದಕ್ಕಾಗಿ, 18 ಗ್ಯಾರಂಟಿಗಳನ್ನು ಅನುಸರಿಸದಿದ್ದಕ್ಕಾಗಿ, 38 ಅನಧಿಕೃತ ಶುಲ್ಕಗಳು, 17 ವಿಳಂಬ ಅಥವಾ ಸೇವೆಗಳನ್ನು ತಲುಪಿಸದಿದ್ದಕ್ಕಾಗಿ ಮತ್ತು ಖಾತೆ ರದ್ದತಿಗಾಗಿ ದಾಖಲಾದ ದೂರುಗಳು ಸೇರಿವೆ.
ಕ್ಯಾಬ್ ದರಗಳಲ್ಲಿ ಏರಿಕೆ, ಚಾಲಕರು ಎಸಿ ಆನ್ ಮಾಡಲು ನಿರಾಕರಿಸುವುದು, ರದ್ದುಗೊಳಿಸುವಿಕೆ ಮತ್ತು ಚಾಲಕರು ನಗದು ಕೇಳುವುದು ಸೇರಿದಂತೆ ಅವರ ವಿರುದ್ಧದ ದೂರುಗಳು ಸೇರಿವೆ ಎಂದು ಸರ್ಕಾರ ಕ್ಯಾಬ್ ಅಗ್ರಿಗೇಟರ್‌ಗಳಿಗೆ ತಿಳಿಸಿದೆ. ಈ ಸಮಸ್ಯೆಗಳನ್ನು ತಕ್ಷಣ ಸರಿಪಡಿಸದಿದ್ದರೆ ಕಠಿಣ ಕ್ರಮ ಜರುಗಿಸುವ ಎಚ್ಚರಿಕೆಯನ್ನೂ ಕೇಂದ್ರ ಸರ್ಕಾರ ನೀಡಿದೆ.
Previous Articleಬೆಂಗಳೂರಲ್ಲಿ ಆಲದ ಮರದ ರೆಂಬೆ 7 ಜನರಿಗೆ ಗಾಯ, ತಾಯಿ-ಮಗು ಸ್ಥಿತಿ ಗಂಭೀರ
Next Article ಶಾಸಕ ಜಮೀರ್ ಅಹಮ್ಮದ್ ಮನೆ ಮೇಲೆ ಎಸಿಬಿ ದಾಳಿ