ಬೆಂಗಳೂರು,ಜೂ.24- ಆನ್ಲೈನ್ನಲ್ಲಿ ಕಡಿಮೆ ಬಡ್ಡಿದರದಲ್ಲಿ ಸಾಲ ಕೊಡುವುದಾಗಿ ವಂಚಿಸುತ್ತಿರುವ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿರುವ ದಕ್ಷಿಣ ವಿಭಾಗದ ಸಿಇಎನ್ ಪೊಲೀಸರು 120 ವಂಚಕ ಆ್ಯಪ್ಗಳನ್ನ ಕಿತ್ತೆಸೆಯುವಂತೆ ಗೂಗಲ್ ಪ್ಲೇ ಸ್ಟೋರ್ಗೆ ಪತ್ರ ಬರೆದಿದ್ದಾರೆ. ತ್ವರಿತ ಸಾಲದ ಹೆಸರಲ್ಲಿ ಗ್ರಾಹಕರ ಕಾಂಟ್ಯಾಕ್ಟ್, ಫೋಟೋಸ್ ಪಡೆಯುತ್ತಿದ್ದ ಕೆಲ ಆ್ಯಪ್ಗಳು ಮೊದಲಿಗೆ ಕಡಿಮೆ ಬಡ್ಡಿಗೆ ಸಾಲ ನೀಡುವುದಾಗಿ ಆಸೆ ಒಡ್ಡುವುದು ನಂತರ ಅದಕ್ಕೆ ಹೆಚ್ಚಿನ ದರದಲ್ಲಿ ಬಡ್ಡಿ ಪಡೆಯುವುದು, ಕಟ್ಟದೇ ಹೋದರೆ ಬೆದರಿಕೆ ಹಾಕಿ ಹೆಚ್ಚಿನ ಹಣಕ್ಕೆ ಬೇಡಿಕೆ ಇಡುತ್ತಿದ್ದವು.
ಹಣ ಪಾವತಿಸದಿದ್ದರೆ ಗ್ರಾಹಕರ ಕಾಂಟ್ಯಾಕ್ಟ್ ನಲ್ಲಿರುವ ವ್ಯಕ್ತಿಗಳಿಗೆ ಕರೆ ಮಾಡಿ ಅಸಭ್ಯವಾಗಿ ಮಾತನಾಡುವುದಲ್ಲದೇ, ಅಶ್ಲೀಲ ಫೋಟೋ, ವಿಡಿಯೋಗಳನ್ನು ರವಾನಿಸುವ ಮೂಲಕ ಕಿರುಕುಳ ನೀಡುತ್ತಿದ್ದವು.
ಲಾಕ್ ಡೌನ್ ಸಂದರ್ಭದಲ್ಲಿ ಲೋನ್ ಆ್ಯಪ್ ಗಳಿಂದ ಸಾಕಷ್ಟು ಜನ ತೊಂದರೆ ಅನುಭವಿಸಿದ್ದು ಆತ್ಮಹತ್ಯೆಗೆ ಶರಣಾದಂತಹ ಘಟನೆಗಳು ವರದಿಯಾಗಿದ್ದರಿಂದ 120 ವಂಚಕ ಆ್ಯಪ್ಗಳನ್ನ ಕಿತ್ತೆಸೆಯುವಂತೆ ಗೂಗಲ್ ಪ್ಲೇ ಸ್ಟೋರ್ಗೆ ಪತ್ರ ಬರೆಯಲಾಗಿದೆ.