ಬೆಂಗಳೂರು,ಎ.29: ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರ ವಿರುದ್ಧದ ಲೈಂಗಿಕ ದೌರ್ಜನ್ಯ ಆರೋಪ ಪ್ರಕರಣದಲ್ಲಿ ನನ್ನೊಬ್ಬನಿಗೇ ಅಲ್ಲ ಇಡೀ ಸಮಾಜಕ್ಕೆ ಮುಜುಗರ ತಂದಿದೆ.ಈ ಕುರಿತು ಎಸ್‌ಐಟಿ ತನಿಖಾ ವರದಿ ಬಂದ ನಂತರ ಮುಲಾಜಿಲ್ಲದೆ ಜೆಡಿಎಸ್ ಕ್ರಮ ಕೈಗೊಳ್ಳಲಿದೆ ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ವಿಚಾರದಲ್ಲಿ ದೇವೇಗೌಡರ ಕುಟುಂಬದ ಹೆಸರು ಎಳೆದು ತರಬೇಡಿ ನಮ್ಮ ಕುಟುಂಬವೇ ಬೇರೆ. ಎಚ್.ಡಿ.ರೇವಣ್ಣ ಅವರ ಕುಟುಂಬವೇ ಬೇರೆ. ಹಾಸನದಲ್ಲಿ ಅವರು ನಾಲ್ಕು ಜನ ಪ್ರತ್ಯೇಕವಾಗಿ ವಾಸವಿದ್ದಾರೆ. ಹೀಗಾಗಿ ಈ ವಿಚಾರದಲ್ಲಿ ದೇವೇಗೌಡರ ಕುಟುಂಬದ ಹೆಸರು ಎಳೆದು ತರಬೇಡಿ ಎಂದು ಕಾಂಗ್ರೆಸ್ ಮುಖಂಡರಿಗೆ ತಾಕೀತು ಮಾಡಿದರು.
ಈ ಪ್ರಕರಣದಿಂದ ಮಾಜಿ ಪ್ರಧಾನಿ ದೇವೇಗೌಡರ ಕುಟುಂಬಕ್ಕಷ್ಟೇ ಮುಜುಗರವಾಗುವುದಿಲ್ಲ, ಇಡೀ ಸಮಾಜಕ್ಕೆ ಮುಜುಗರವಾಗುವಂತಹುದು. ತನಿಖಾ ವರದಿ ಬಂದ ನಂತರ ತಪ್ಪಿತಸ್ಥರ ವಿರುದ್ಧ ಪಕ್ಷ ಕ್ರಮ ಕೈಗೊಳ್ಳಲಿದೆ ಎಂದರು. ಯಾರೇ ತಪ್ಪು ಮಾಡಿದ್ದರೂ ಶಿಕ್ಷೆ ಅನುಭವಿಸಲೇಬೇಕು. ಉಪ್ಪು ತಿಂದವರು ನೀರು ಕುಡಿಯಲೇಬೇಕಲ್ಲವೇ ಎಂದು ಹೇಳಿದರು.
ಪ್ರಜ್ವಲ್ ವಿಚಾರದಲ್ಲಿ ಮಹಿಳೆಯರೊಂದಿಗೆ ತಪ್ಪು ಆಗಿದ್ದರೆ ಅದು ಆಗಬಾರದಿತ್ತು. ಸಮಾಜದಲ್ಲಿ ಇಂತಹದ್ದು ಮತ್ತೆ ನಡೆಯಬಾರದು ಎಂಬುದು ನನ್ನ ಅಭಿಪ್ರಾಯ. ಹೀಗಾಗಿ ಕಾಂಗ್ರೆಸ್ ನಾಯಕರಿಗೆ ಹೇಳುತ್ತಿದ್ದೇನೆ. ಇಲ್ಲಿ ಕುಟುಂಬದ ಹೆಸರು ತರಬೇಡಿ. ಇದು ವ್ಯಕ್ತಿಯ ಪ್ರಶ್ನೆಯೇ ಹೊರತು ಕುಟುಂಬದ ಪ್ರಶ್ನೆ ಅಲ್ಲ. ವ್ಯಕ್ತಿಯ ಬಗ್ಗೆ ಚರ್ಚೆ ಮಾಡಿಕೊಳ್ಳಿ. ವ್ಯಕ್ತಿಗತವಾಗಿ ಒಬ್ಬೊಬ್ಬರದ್ದು ಒಂದೊಂದು ವರ್ತನೆ ಇರುತ್ತದೆ ಎಂದು ಹೇಳಿದರು.
ಪೆನ್‌ಡ್ರೈವ್ ವಿಚಾರದಲ್ಲಿ ಎಲ್ಲವೂ ವೈಯಕ್ತಿಕವಾಗಿ ನಡೆದ ಸಂಗತಿಗಳು. ಮೊದಲೇ ನಮ್ಮ ಗಮನಕ್ಕೆ ಬಂದಿದ್ದರೆ ತಪ್ಪಿಸಬಹುದಿತ್ತು. ಮಕ್ಕಳು ಎಲ್ಲಿಗೆ ಹೋಗುತ್ತಾರೆ ಏನು ಮಾಡುತ್ತಾರೆ ಎಂದು ಕಾಯಲು ಆಗುತ್ತದೆಯೇ. ಅದೇ ರೀತಿ ಪ್ರಜ್ವಲ್ ವಿದೇಶಕ್ಕೆ ಹೋಗುವಾಗಲೂ ನನ್ನ ಕೇಳಿ ಹೋಗುತ್ತಾನಾ’ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು. ಪ್ರಜ್ವಲ್ ಅವರನ್ನು ವಿದೇಶದಿಂದ ವಾಪಸ್ ಕರೆಸಿಕೊಳ್ಳುವ ವಿಚಾರದಲ್ಲಿ ಸರ್ಕಾರ ತೀರ್ಮಾನ ತೆಗೆದುಕೊಳ್ಳುತ್ತದೆ ಎಂದರು.
ಯಾರು ತಪ್ಪು ಮಾಡಿದ್ದರೂ ಈ ನೆಲದ ಕಾನೂನಿಗೆ ತಲೆಬಾಗಲೇಬೇಕು. ಶಿಕ್ಷೆ ಅನುಭವಿಸಬೇಕು. ಹೀಗಾಗಿ ಮುಂದಿನ ವಿಷಯಗಳು ನನಗೆ ಸಂಬಂಧವಿಲ್ಲ. ಎಸ್‌ಐಟಿ ತನಿಖೆ ವಿಚಾರದಲ್ಲಿ ಯಾರ ಮೇಲೂ ಪ್ರಭಾವ ಬೀರುವ ಪ್ರಶ್ನೆಯೇ ಇಲ್ಲ. ಇಲ್ಲಿ ಯಾರನ್ನೂ ವಹಿಸಿಕೊಳ್ಳುವುದಿಲ್ಲ. ಆದರೆ ಪಾರದರ್ಶಕ ತನಿಖೆ ನಡೆಯಲಿ ಎಂದು ಒತ್ತಾಯಿಸಿದರು.

