ಪ್ಯಾಂಕ್ರಿಯಾಟಿಕ್ ಕ್ಯಾನ್ಸರ್ ಎಂಬ ಮಾರಕರೋಗ
ಪ್ಯಾಂಕ್ರಿಯಸ್ ಗ್ರಂಥಿಯ ಕ್ಯಾನ್ಸರ್ ಅಥವ ಪ್ಯಾಂಕ್ರಿಯಾಟಿಕ್ ಕ್ಯಾನ್ಸರ್ ಬಗ್ಗೆ
ಬಹುತೇಕರಿಗೆ ಗೊತ್ತಿಲ್ಲ. ಎಲ್ಲಾ ಕ್ಯಾನ್ಸರ್ ಕಾಯಿಲೆಗಳಂತೆ ಇದರ ಲಕ್ಷಣವೂ ಭೀಕರವಾಗಿರುತ್ತದೆ.
ಪ್ಯಾಂಕ್ರಿಯಸ್ ಗ್ರಂಥಿಯ ಅಂಗಾಂಶಗಳಲ್ಲಿ ಕ್ಯಾನ್ಸರ್ ಜೀವಕೋಶಗಳು ರೂಪುಗೊಂಡಾಗ
ಪ್ಯಾಂಕ್ರಿಯಾಟಿಕ್ ಕ್ಯಾನ್ಸರ್ ಬರುತ್ತದೆ.
ಪ್ಯಾಂಕ್ರಿಯಸ್ ಹೊಟ್ಟೆಯ ಹಿಂದೆ ಮತ್ತು ಬೆನ್ನುಮೂಳೆಯ ಮುಂದೆ ಇರುವ ಗ್ರಂಥಿಯಾಗಿದೆ. ಜೀರ್ಣಕಾರಿ ರಸ ಮತ್ತು ರಕ್ತದಲ್ಲಿನ
ಸಕ್ಕರೆಯನ್ನು ನಿಯಂತ್ರಿಸುವ ಹಾರ್ಮೋನುಗಳನ್ನು ಉತ್ಪಾದಿಸುವುದು ಈ ಗ್ರಂಥಿಯ ಕೆಲಸ.
ಪ್ಯಾಂಕ್ರಿಯಾಟಿಕ್ ಕ್ಯಾನ್ಸರ್ ಲಕ್ಷಣಗಳು
ಕಾಮಾಲೆ ಅಂದರೆ ಚರ್ಮ ಹಳದಿಯಾಗಿ, ಕಣ್ಣುಗಳು ಬಿಳಿಯಾಗುವುದು,
ಮೇಲಿನ ಅಥವ ಮಧ್ಯದ ಹೊಟ್ಟೆ ಮತ್ತು ಹಿಂಭಾಗದಲ್ಲಿ ನೋವು ಕಾಣಿಸಿಕೊಳ್ಳುವುದು,
ಭಾರಿ ಪ್ರಮಾಣದಲ್ಲಿ ತೂಕ ಕಡಿಮೆಯಗುವುದು,
ಹಸಿವಾಗದಿರುವಿಕೆ,
ಆಯಾಸವಾಗುವುದು
ಖಿನ್ನತೆ ಆವರಿಸುವುದು
ಪ್ಯಾಂಕ್ರಿಯಾಟಿಕ್ ಕ್ಯಾನ್ಸರ್’ಗೆ ಕಾರಣಗಳು
ಈ ಕ್ಯಾನ್ಸರ್ ಗೆ ನಿಖರವಾದ ಕಾರಗಳನ್ನು ಇನ್ನೂ ಕಂಡು ಹಿಡಿಯಲಾಗಿಲ್ಲವಾದರು ಈ ಕೆಳಗಿನವು ಕೆಲವು ಕಾರಣಗಳು ಎಂದು ಸಂದೇಹಿಸಲಾಗಿದೆ.
ಧೂಮಪಾನ,
ದೀರ್ಘಕಾಲದ ಪ್ಯಾಂಕ್ರಿಯಾಟೈಟಿಸ್ ಅಂದರೆ, ಪ್ಯಾಂಕ್ರಿಯಸ್ ಗ್ರಂಥಿಯ ಉರಿಯೂತ,
ಅನುವಂಶಿಕ ಪ್ಯಾಂಕ್ರಿಯಾಟೈಟಿಸ್,
ದೀರ್ಘಕಾಲದ ಮಧುಮೇಹ,
ಬೊಜ್ಜು ಅಥವ ಸ್ಥೂಲಕಾಯ.
ಪ್ಯಾಂಕ್ರಿಯಾಟಿಕ್ ಕ್ಯಾನ್ಸರ್ ತಗುಲಿರುವುದನ್ನು ತಿಳಿಯುವುದು ಹೇಗೆ?
ಈಗ ಹೇಳಲಾದ ಯಾವುದಾದರು ಒಂದು ಲಕ್ಷಣ ನಿಮ್ಮಲ್ಲಿ ಕಾಣಿಸಿಕೊಂಡಾಗ ಮೊದಲು
ವೈದ್ಯರು ನಿಮ್ಮ ಆರೋಗ್ಯದ ಬಗ್ಗೆ ವಿವರವಾದ ಮಾಹಿತಿ ಪಡೆದುಕೊಂಡು, ದೈಹಿಕ ಪರೀಕ್ಷೆ
ನಡೆಸುತ್ತಾರೆ. ಮೇಲ್ನೋಟಕ್ಕೆ ಅವರಿಗೆ ನಿಮಗೆ ಪ್ಯಾಂಕ್ರಿಯಾಟಿಕ್ ಕ್ಯಾನ್ಸರ್ ಇದೆ ಎಂದು
ಕಂಡುಬಂದರೆ ಹಲವಾರು ಪರೀಕ್ಷೆಗಳಿಗೆ ಬರೆಯಬಹುದು. ಸಿ.ಟಿ. ಸ್ಕ್ಯಾನ್, ಎಂಆರ್ ಐ, ಎಂಡೋಸ್ಕೋಪಿಕ್
ಅಲ್ಟ್ರಾಸೌಂಡ್, ಲ್ಯಾಪರೊಸ್ಕೋಪಿ, ಎಂಡೋಸ್ಕೋಪಿಕ್ ರೆಟ್ರೊಗ್ರೇಡ್ ಕೊಲಾಂಜಿಯೋಪಾಂಕ್ರಿಯಾಟೋಗ್ರಫಿ
, ಪೆರ್ಕ್ಯುಟೇನಿಯಸ್ ಟ್ರಾನ್ಸ್‌ಹೆಪಾಟಿಕ್ ಕೋಲಾಂಜಿಯೋಗ್ರಫಿ , ಬಯಾಪ್ಸಿ ಇಂಥ ಪರೀಕ್ಷೆಗಳು ಸೇರಿವೆ. ಯಾವುದೇ
ವೈದ್ಯರಾದರು ಸಾಮಾನ್ಯವಾಗಿ ಈ ಪರೀಕ್ಷೆಗಳನ್ನು ಮಾಡಿಸಲು ಸಲಹೆ ನೀಡುತ್ತಾರೆ.
ಪ್ಯಾಂಕ್ರಿಯಾಟಿಕ್ ಕ್ಯಾನ್ಸರ್ ಗಿರುವ ಚಿಕಿತ್ಸೆ
ಪ್ಯಾಂಕ್ರಿಯಾಟಿಕ್ ಕ್ಯಾನ್ಸರ್ ಬಂದರೆ ಶಸ್ತ್ರಚಿಕಿತ್ಸೆ, ಖೀಮೋಥೆರಪಿ ಮತ್ತು ವಿಕಿರಣ ಚಿಕಿತ್ಸೆ
ಸೇರಿದಂತೆ ವಿವಿಧ ಚಿಕಿತ್ಸೆಗಳಿವೆ. ಕೀಮೋಥೆರಪಿ ಚಿಕಿತ್ಸೆಯಲ್ಲಿ ಔಷಧಿಗಳನ್ನು ಬಳಸಿದರೆ, ವಿಕಿರಣ
ಚಿಕಿತ್ಸೆಯಲ್ಲಿ ಕ್ಯಾನ್ಸರ್ ಕೋಶಗಳನ್ನು ಕೊಲ್ಲಲು ಎಕ್ಸರೆ ಅಥವಾ ಇತರ ವಿಕಿರಣಗಳನ್ನು
ಬಳಸುತ್ತಾರೆ. ಇನ್ನು ಗೆಡ್ಡೆಯನ್ನು ತೆಗೆದುಹಾಕಲು ಶಸ್ತ್ರಚಿಕಿತ್ಸೆಯನ್ನೂ ಮಾಡಬಹುದು.
ವರದಿಗಳು ಹೇಳುವುದೇನು?
ಪ್ಯಾಂಕ್ರಿಯಾಟಿಕ್ ಕ್ಯಾನ್ಸರ್ ಹೊಂದಿರುವ ಸುಮಾರು ಶೇ.23ರಷ್ಟು ರೋಗಿಗಳು ರೋಗ
ಪತ್ತೆಯಾದ ಒಂದು ವರ್ಷದ ನಂತರವೂ ಬದುಕಿದ್ದಾರೆ ಎಂದು ಅಮೆರಿಕನ್ ಕ್ಯಾನ್ಸರ್
ಸೊಸೈಟಿ ವರದಿ ಮಾಡಿದೆ. ಸುಮಾರು ಶೇ. 8.2ರಷ್ಟು ಜನರು 5 ವರ್ಷದ ನಂತರವೂ
ಬದುಕುಳಿದಿದ್ದಾರೆ ಎನ್ನುವ ಆಶಾಭಾವನೆ ಸಂಶೋಧನೆಯಿಂದ ತಿಳಿದುಬಂದಿದೆ.
2019 ರಲ್ಲಿ ಸುಮಾರು 57,000 ಅಮೆರಿಕನ್ನರಿಗೆ ಪ್ಯಾಂಕ್ರಿಯಾಟಿಕ್ ಕ್ಯಾನ್ಸರ್ ಇರುವುದು
ಪತ್ತೆಯಾಯಿತು. ಪ್ಯಾಂಕ್ರಿಯಾಟಿಕ್ ಕ್ಯಾನ್ಸರ್ ಮಹಿಳೆಯರಿಗಿಂತ ಪುರುಷರಲ್ಲಿ ಸ್ವಲ್ಪ
ಹೆಚ್ಚು. ಸಾಮಾನ್ಯವಾಗಿ ಇದು 45 ವರ್ಷದ ನಂತರ ಸಂಭವಿಸುತ್ತದೆ.
ಪ್ಯಾಂಕ್ರಿಯಾಟಿಕ್ ಕ್ಯಾನ್ಸರ್ ಕಾಣಿಸಿಕೊಳ್ಳುವ ಮೊದಲು ಅದು ಸದ್ದಿಲ್ಲದೆ ಹರಡುತ್ತದೆ. ಇದು
ಅತ್ಯಂತ ಮಾರಕ ಕ್ಯಾನ್ಸರ್’ಗಳಲ್ಲಿ ಒಂದಾಗಿದೆ. 2019ರಲ್ಲಿ 45,000 ಕ್ಕೂ ಹೆಚ್ಚು ಜನರು
ಈ ಕಾಯಿಲೆಯಿಂದ ಸಾವನ್ನಪ್ಪಿರುವ ಬಗ್ಗೆ ವರದಿಯಾಗಿತ್ತು.
ನೆನಪಿನಲ್ಲಿಡಬೇಕಾದ ಅಂಶಗಳು
ಪ್ಯಾಂಕ್ರಿಯಾಟಿಕ್ ಕ್ಯಾನ್ಸರ್ ಬಂತೆಂದರೆ ತಡೆಗಟ್ಟಲು ಯಾವುದೇ ಮಾರ್ಗವಿಲ್ಲ.
ಈ ಕಾಯಿಲೆ ಬಂದರೆ ಸಾಮಾನ್ಯವಾಗಿ ಬದುಕುಳಿಯುವುದು ಸುಮಾರು 3 1/2 ತಿಂಗಳುಗಳು ಮಾತ್ರ.
ಉತ್ತಮ ಚಿಕಿತ್ಸೆ ತೆಗೆದುಕೊಂಡರೂ ಸುಮಾರು ಎಂಟು ತಿಂಗಳವರೆಗೆ ಬದುಕಬಹುದು.
ಆದರೂ ಅನೇಕರು ಹೆಚ್ಚು ದಿನಗಳ ಕಾಲ ಬದುಕುತ್ತಾರೆ.
ಪ್ಯಾಂಕ್ರಿಯಾಟಿಕ್ ಕ್ಯಾನ್ಸರ್ 4ನೇ ಹಂತದಲ್ಲಿದ್ದರೆ ಗುಣಪಡಿಸಲಾಗುವುದಿಲ್ಲ.
ರೋಗವಿರುವುದು ಗೊತ್ತಾದ ನಂತರ ಸುಮಾರು 3–6 ತಿಂಗಳು ಬದುಕುಳಿಯುತ್ತಾರೆ.
ಕೆಲವರು ಇದಕ್ಕಿಂತ ಹೆಚ್ಚು ಕಾಲ ಬದುಕುತ್ತಾರೆ. ಇದರಲ್ಲಿ ವಯಸ್ಸು ಮತ್ತು ಸಾಮಾನ್ಯ
ಆರೋಗ್ಯ ಸೇರಿದಂತೆ ಅನೇಕ ವೈಯಕ್ತಿಕ ಅಂಶಗಳು ಪಾತ್ರವಹಿಸುತ್ತವೆ. ಜೀವನಶೈಲಿಯ
ಜೊತೆಗೆ ಚಿಕಿತ್ಸೆಗಳು ಕೂಡ ಜೀವಿತಾವಧಿ ಹೆಚ್ಚಿಸಲು ಸಹಾಯ ಮಾಡುತ್ತವೆ.
ಪ್ಯಾಂಕ್ರಿಯಾಟಿಕ್ ಕ್ಯಾನ್ಸರ್ ಒಂದು ಮತ್ತು ಎರಡನೇ ಹಂತದಲ್ಲಿದ್ದರೆ ಸುಮಾರು 5
ವರ್ಷದವರೆಗೆ ಬದುಕುವ ಸಾಧ್ಯತೆಯೂ ಇರುತ್ತದೆ.
ಪ್ಯಾಂಕ್ರಿಯಾಟಿಕ್ ಕ್ಯಾನ್ಸರ್ ಕೊನೆಯ ಹಂತದಲ್ಲಿರುವಾಗ ಕಾಣಿಸಿಕೊಳ್ಳುವ
ಚಿಹ್ನೆಗಳೆಂದರೆ- ಸಾಮಾನ್ಯವಾಗಿ ಹಿಂಭಾಗ ಅಥವಾ ಹೊಟ್ಟೆಯಲ್ಲಿ ನೋವು, ತೂಕ ಇಳಿಕೆ,
ಹಸಿವು ಕಡಿಮೆಯಾಗುವುದು ಅಥವಾ ಕಡಿಮೆ ತಿನ್ನುವುದು ಮತ್ತು ಕುಡಿಯುವುದು,
ವಾಕರಿಕೆ, ಮಲದ ಬಣ್ಣದಲ್ಲಿ ಬದಲಾವಣೆಗಳು, ಕಿಬ್ಬೊಟ್ಟೆ ಉಬ್ಬುವುದು, ಗಾಢ ಬಣ್ಣದ
ಮೂತ್ರ, ಉಸಿರಾಟದಲ್ಲಿ ಬದಲಾವಣೆ.
ಕೊನೆಯ ತಿಂಗಳುಗಳು ಅಥವ ವಾರಗಳಲ್ಲಿ ರೋಗ ಲಕ್ಷಣಗಳು ಬದಲಾಗಿ, ಹೊಸ
ರೋಗಲಕ್ಷಣಗಳು ಉದಾಹರಣೆಗೆ ನೋವು, ತೀವ್ರ ಆಯಾಸ ಕಾಣಿಸಿಕೊಳ್ಳಬಹುದು..
ಇಂಥಾ ಭಯಂಕರ ಕ್ಯಾನ್ಸರ್ ಉಲ್ಬಣವಾಗುವ ಮೊದಲೇ ಪತ್ತೆ ಹಚ್ಚಿ ಅದನ್ನು ಆರಂಭದಲ್ಲೇ ಕೊನೆಯಾಗಿಸಿದರೆ ವ್ಯಕ್ತಿ ಬದುಕುಳಿಯುವ ಸಾಧ್ಯತೆ ಹೆಚ್ಚು. ಆರಂಭದಲ್ಲಿ ಲಕ್ಷಣಗಳನ್ನು ತೋರಿಸದೆ ಮೂರನೇ ನಾಲ್ಕನೇ ಹಂತದಲ್ಲಿಯೇ ತನ್ನ ಗುಣವನ್ನು ಪ್ರದರ್ಶಿಸುವ ಈ ಭಯಾನಕ ಕ್ಯಾನ್ಸರ್ ಅನ್ನು ಆರಂಭದಲ್ಲಿ ಪತ್ತೆ ಹಚ್ಚುವುದೂ ಬಹಳ ಕಷ್ಟ. ಆದರೂ ಉದರ ಸಮಸ್ಯೆಗಳು ಹುಳಿ ತೇಗು, ಹೊಟ್ಟೆ ಅಥವ ಬೆನ್ನು ನೋವು ಆಗಾಗ ಅಜೀರ್ಣವಾಗುವುದು ಕಾಮಾಲೆಯ ಲಕ್ಷಣಗಳು, ದೇಹ ತೂಕ ಹೆಚ್ಚಿಸಿಕೊಳ್ಳುವುದರಲ್ಲಿ ಸಮಸ್ಯೆ ಹೀಗೆ ಏನೇ ಲಕ್ಷಣಗಳಿದ್ದರೂ ತಪಾಸಣೆ ಮಾಡಿಸಿ ವಿಶೇಷವಾಗಿ ಪ್ಯಾಂಕ್ರಿಯಾಸ್ ನ ಆರೋಗ್ಯ ಮತ್ತು ಸುಸ್ಥಿತಿಯ ಬಗ್ಗೆ ಖಾತ್ರಿ ಮಾಡಿಕೊಂಡರೆ ಮುಂದೊಂದು ದಿನ ಆಘಾತಕ್ಕೊಳಗಾಗುವುದನ್ನು ತಪ್ಪಿಸಬಹುದು.