ನವ ದೆಹಲಿ – ರಾಜ್ಯದಲ್ಲಿ ನೂತನ ಮುಖ್ಯಮಂತ್ರಿ ಆಯ್ಕೆ ಪ್ರಕ್ರಿಯೆ ಕಾಂಗ್ರೆಸ್ ಹೈಕಮಾಂಡ್ ಗೆ ಕಗ್ಗಂಟಾಗಿ ಪರಿಣಮಿಸಿದೆ.
ಉನ್ನತ ಹುದ್ದೆಗಾಗಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಪಟ್ಟು ಹಿಡಿದಿರುವ ಬೆನ್ನಲ್ಲೇ ಇಬ್ಬರ ಜಗಳ ಮೂರನೆಯವರಿಗೆ ಲಾಭ ಎಂಬಂತೆ ಮತ್ತೊಬ್ಬರು ಸಿಎಂ ಹುದ್ದೆಗೇರುವ ಸಾಧ್ಯತೆಗಳು ಗೋಚರಿಸಿವೆ.
ಹೈಕಮಾಂಡ್ ಸೂಚನೆಯ ಮೇರೆಗೆ ದೆಹಲಿಗೆ ಆಗಮಿಸಿರುವ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಜೊತೆಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಎರಡು ಸುತ್ತಿನಲ್ಲಿ ಮಾತುಕತೆ ನಡೆಸಿದರೂ ಸಮಸ್ಯೆ ಬಗೆಹರಿದಿಲ್ಲ. ಮೊದಲ ಅವಧಿಗೆ ತಮಗೆ ಸಿಎಂ ಹುದ್ದೆ ನೀಡಬೇಕು ಎಂದು ಶಿವಕುಮಾರ್ ಪಟ್ಟು ಹಿಡಿದಿದ್ದಾರೆ.
ಮತ್ತೊಂದೆಡೆ ಸಿದ್ದರಾಮಯ್ಯ ಪೂರ್ಣ ಅವಧಿಗೆ ತಮ್ಮನ್ನೇ ಮುಖ್ಯಮಂತ್ರಿಯಾಗಿ ಮಾಡಬೇಕು ಎಂದು ಹೈಕಮಾಂಡ್ ಗೆ ಮನವಿ ಮಾಡಿದ್ದು ಇದಕ್ಕಾಗಿ ತಮ್ಮ ಬೆಂಬಲಿಗರ ಮೂಲಕ ವರಿಷ್ಠರ ಮೇಲೆ ಒತ್ತಡ ಹೇರಲು ಮುಂದಾಗಿದ್ದಾರೆ.
ಇದರಿಂದಾಗಿ ಬಿಕ್ಕಟ್ಟು ತೀವ್ರಗೊಂಡಿರುವ ಬೆನ್ನಲ್ಲೇ ಡಿಕೆ ಶಿವಕುಮಾರ್ ಹೊಸ ರಾಜಿ ಸೂತ್ರ ಒಂದನ್ನು ಹೈಕಮಾಂಡ್ ಮುಂದೆ ಮಂಡಿಸಿದ್ದಾರೆ ಎಂದು ಹೇಳಲಾಗಿದೆ . ಹಲವು ವರ್ಷಗಳ ನಂತರ ಇದೇ ಮೊದಲ ಬಾರಿಗೆ ಕಾಂಗ್ರೆಸ್ ಭಾರಿ ಬಹುಮತದೊಂದಿಗೆ ಅಧಿಕಾರಕ್ಕೆ ಬಂದಿದೆ ಈ ಹಿನ್ನೆಲೆಯಲ್ಲಿ ಈ ಬಾರಿ ದಲಿತ ಸಮುದಾಯಕ್ಕೆ ಸೇರಿದ ನಾಯಕರಿಗೆ ಹುದ್ದೆ ನೀಡುವಂತೆ ಮನವಿ ಮಾಡಿದ್ದಾರೆ.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಈ ಹುದ್ದೆಗೆ ಅರ್ಹರಿದ್ದಾರೆ. ಎಂದೊ ಅವರಿಗೆ ಈ ಹುದ್ದೆ ಸಿಗಬೇಕಿತ್ತು ಈಗ ಅಂತಹ ಅವಕಾಶ ಬಂದಿದೆ ಅವರಿಗೆ ಸ್ಥಾನ ಕಲ್ಪಿಸಬೇಕು ಎಂದು ಮನವಿ ಮಾಡಿದ್ದಾರೆ. ಒಂದು ವೇಳೆ ಖರ್ಗೆ ಅವರು ಈ ಹುದ್ದೆಯನ್ನು ಒಪ್ಪಿಕೊಳ್ಳದೆ ಹೋದಲ್ಲಿ ಅವರಷ್ಟೇ ಅರ್ಹರಿರುವ ಜಿ ಪರಮೇಶ್ವರ್ ಅವರಿಗೆ ಈ ಸ್ಥಾನ ನೀಡಬೇಕು ಈ ಮೂಲಕ ಲೋಕಸಭಾ ಚುನಾವಣೆಗೆ ಸ್ಪಷ್ಟ ಸಂದೇಶವನ್ನು ರವಾನಿಸಬೇಕಾಗಿದೆ ಕಾಂಗ್ರೆಸ್ ಪಕ್ಷ ಸಾಮಾಜಿಕ ನ್ಯಾಯಕ್ಕೆ ಬದ್ಧವಾಗಿದ್ದು ಶೋಷಿತರು ಮತ್ತು ತುಳಿತಕ್ಕೊಳ್ಳಗಾದವರಿಗೆ ಅವಕಾಶ ಕಲ್ಪಿಸಲಿದೆ ಎಂಬ ಸಂದೇಶ ರವಾನೆಯಾದರೆ ರಾಷ್ಟ್ರಿಯ ಮಟ್ಟದಲ್ಲಿ ಪಕ್ಷಕ್ಕೆ ಅನುಕೂಲಕರ ವಾತಾವರಣ ಸೃಷ್ಟಿಯಾಗಲಿದೆ ಎಂದು ವಾದಿಸಿದ್ದಾರೆ ಹೀಗಾಗಿ ಇಡೀ ಬೆಳವಣಿಗೆ ಹೈಕಮಾಂಡ್ ಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ