ನವದೆಹಲಿ- ಸಮಾಜದ ಶಾಂತಿ ಭಂಗಕ್ಕೆ ಯತ್ನ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವ ಚಟುವಟಿಕೆಗಳನ್ನು ನಡೆಸಿದ ಆರೋಪದ ಹಿನ್ನೆಲೆಯಲ್ಲಿ ದೇಶದಲ್ಲಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್ ಐ) ಸಂಘಟನೆಯನ್ನು ನಿಷೇಧಿಸಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ.
ಪಿಎಫ್‌ಐ ಮತ್ತು ಅದರ ಅಂಗ ಸಂಸ್ಥೆಗಳಾದ ರಿಹಾಬ್ ಇಂಡಿಯಾ ಫೌಂಡೇಶನ್ (ಆರ್‌ಐಎಫ್), ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ (ಸಿಎಫ್ಐ), ಆಲ್ ಇಂಡಿಯಾ ಇಮಾಮ್ಸ್ ಕೌನ್ಸಿಲ್ (ಎಐಐಸಿ), ಎನ್‌ಸಿಎಚ್‌ಆರ್‌ಒ, ನ್ಯಾಷನಲ್ ವುಮೆನ್ಸ್ ಫ್ರಂಟ್ (ಎನ್‌ಡಬ್ಲ್ಯೂಎಫ್), ಜೂನಿಯರ್ ಫ್ರಂಟ್, ಎಂಪವರ್ ಇಂಡಿಯಾ ಫೌಂಡೇಶನ್ ಸಂಘಟನೆಗಳನ್ನು ಮುಂದಿನ ಐದು ವರ್ಷಗಳ ಅವಧಿಗೆ ನಿಷೇಧಿಸಲಾಗಿದೆ ಎಂದು ಕೇಂದ್ರ ಗೃಹ ಇಲಾಖೆ ತಿಳಿಸಿದೆ.
ಸ್ವಾಗತಾರ್ಹ:
ಕೇಂದ್ರದ ನಿರ್ಧಾರವನ್ನು ಸ್ವಾಗತಿಸಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿಧ್ವಂಸಕ ಕೃತ್ಯಗಳಿಗೆ ಈ ದೇಶದಲ್ಲಿ ಅವಕಾಶವಿಲ್ಲ. ಅದೂ ನರೇಂದ್ರ ಮೋದಿ ಹಾಗೂ ಅಮಿತ್ ಶಾ ಅವರ ನಾಯಕತ್ವದಲ್ಲಿ ಇಂಥವುಗಳಿಗೆ ಎಡೆಯಿಲ್ಲ ಎಂಬುದು ಈ ನಿರ್ಣಯದಿಂದ ಸ್ಪಷ್ಟವಾಗಿದೆ ಎಂದು ಹೇಳಿದ್ದಾರೆ.
ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಪಿಎಫ್ಐ ಸಂಘಟನೆಯ ಬಹಳಷ್ಟು ಜನ ಪ್ರಮುಖರು ಗಡಿಯಾಚೆ ಹೋಗಿ ತರಬೇತಿ ಪಡೆದವರಿದ್ದಾರೆ. ಅವರು ಅಲ್ಲಿಂದಲೇ ಕಾರ್ಯಾಚರಣೆ ಮಾಡುತ್ತಿದ್ದು, ಸಂಸ್ಥೆ ಹಲವಾರು ವರ್ಷ, ಹಲವಾರು ಪ್ರಕರಣಗಳಲ್ಲಿ ಭಾಗಿಯಾಗಿದೆ. ಕರ್ನಾಟಕದಾದ್ಯಂತ ವಿಧ್ವಂಸಕ ಕೃತ್ಯಗಳನ್ನು ನಡೆಸಿರುವುದು ಜಗಜ್ಜಾಹೀರಾಗಿದೆ’ ಎಂದರು.
‘ದೇಶದ್ರೋಹಿ ಸಂಘಟನೆಗಳನ್ನು ನಿಷೇಧಿಸುವಂತೆ ಎಲ್ಲಾ ರಾಜ್ಯಗಳ ಜನ ಒಕ್ಕೊರಲಿನಿಂದ ಬೇಡಿಕೆ ಇಟ್ಟಿದ್ದಾರೆ. ವಿರೋಧ ಪಕ್ಷದವರೂ, ಸಿಪಿಐ, ಕಾಂಗ್ರೆಸ್, ಸಿಪಿಎಂ ಎಲ್ಲರೂ ಕೂಡ ಪಿಎಫ್ಐ ನಿಷೇಧಿಸಬೇಕೆಂದು ಬೇಡಿಕೆ ಇಟ್ಟಿದ್ದರು. ನಿಷೇಧಿತ ಸಂಸ್ಥೆಗಳೊಂದಿಗೆ ಯಾರೂ ಸಂಪರ್ಕ ಅಥವಾ ನಂಟನ್ನು ಇಟ್ಟುಕೊಳ್ಳಬಾರದು’ ಎಂದು ಹೇಳಿದರು.
ಗೃಹ ಸಚಿವ ಅರಗ ಜ್ಞಾನೇಂದ್ರ ಮಾತನಾಡಿ ಪಿಎಫ್‌ಐ ನಿಷೇಧಿಸಿ ಕೇಂದ್ರ ಹೊರಡಿಸಿರುವ ಆದೇಶವನ್ನು ನಾನು ಸ್ವಾಗತಿಸುತ್ತೇನೆ. ದೇಶದಲ್ಲಿ ಭಯೋತ್ಪಾದಕ ಕೃತ್ಯಗಳಿಗೆ ನೆರವು ನೀಡುತ್ತಿರುವ ಕೋಮುವಾದಿ ಪಿಎಫ್‌ಐ ಮತ್ತು ಅದರ ಇತರ ಅಂಗ ಸಂಸ್ಥೆಗಳ ವಿರುದ್ಧ ಕೇಂದ್ರ ಸರ್ಕಾರ ಸೂಕ್ತ ಕ್ರಮ ಕೈಗೊಂಡಿದೆ ಎಂದು ತಿಳಿಸಿದ್ದಾರೆ.
ಧನ್ಯವಾದ:
ಬಿಜೆಪಿ ಹಿರಿಯ ನಾಯಕ ಈಶ್ವರಪ್ಪ ಪ್ರತಿಕ್ರಿಯಿಸಿ,ದೇಶದಲ್ಲಿ ಆಂತರಿಕವಾಗಿ ವಿಧ್ವಂಸಕ ಕೃತ್ಯಗಳನ್ನು ಮಾಡುವ ದೇಶದ್ರೋಹಿ ಪ್ರಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಸಂಘಟನೆಯನ್ನು ಕೇಂದ್ರ ಸರ್ಕಾರ ನಿಷೇಧ ಮಾಡಿ ಆದೇಶ ಹೊರಡಿಸಿದೆ. ಕರ್ನಾಟಕದ ಸಮಸ್ತ ದೇಶಪ್ರೇಮಿಗಳ ಪರವಾಗಿ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಅವರಿಗೆ ಧನ್ಯವಾದ ಸಲ್ಲಿಸುತ್ತೇನೆ’ ಎಂದು ಹೇಳಿದರು.
ಸ್ವತಂತ್ರ ಹೋರಾಟಗಾರ ಭಗತ್ ಸಿಂಗ್ ಅವರ ಜಯಂತಿಯಂದು ದೇಶದ್ರೋಹಿ ಪಿಎಫ್‌ಐ ಸಂಘಟನೆಯನ್ನು ಬ್ಯಾನ್ ಮಾಡಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದ್ದು, ಎಲ್ಲ ಸ್ವತಂತ್ರ ಹೋರಾಟಗಾರರ ಆತ್ಮಕ್ಕೆ ಶಾಂತಿ ಸಿಕ್ಕಂತಾಗಿದೆ ಎಂದು ತಿಳಿಸಿದರು.
ಸಿ.ಟಿ.ರವಿ ಪ್ರತಿಕ್ರಿಯಸಿ,ನಿಷೇಧದ ಸುತ್ತ ಯಾವ ರಾಜಕೀಯ ಪಕ್ಷವೂ ತುಷ್ಟಿಕರಣದ ಮತ್ತು ತಕ್ಷಣದ ರಾಜಕೀಯ ಲಾಭ ಪಡೆದುಕೊಳ್ಳುವ ದೃಷ್ಟಿಯ ರಾಜಕಾರಣ ಹಾಗು ವಿಚ್ಛಿದ್ರಕಾರಿ ಮನಸ್ಥಿತಿಯ ಸಂಘಟನೆಗಳು ಸಮಾಜ ಒಳಗಡೆ ರೂಪುಗೊಳ್ಳದಂತೆ ಎಚ್ಚರಿಕೆ ವಹಿಸಬೇಕಾಗಿದೆ ಎಂದು ಹೇಳಿದರು.
ದೇಶದ ಭದ್ರತೆಯ, ಸಮಾಜದ ಗೌರವ ಕಾಪಾಡುವ ನಿಟ್ಟಿನಲ್ಲಿ, ದೇಶಪ್ರೇಮಿ ಮುಸ್ಲಿಮರು ಯೋಚನೆ ಮಾಡಬೇಕಾದ ಅಗತ್ಯ ಮತ್ತು ರಾಷ್ಟ್ರ ವಿರೋಧಿ ಹಾಗು ಮತಾಂಧತೆಯ ವಿರುದ್ಧ ಅರಿವು ಮೂಡಿಸಬೇಕಾಗಿದೆ ಎಂದಿದ್ದಾರೆ.
ನಿಷೇಧದ ನಂತರ ಪಿ ಎಫ್ ಐ ಸಂಘಟನೆಗೆ ಸೇರಿದ ದುಷ್ಟ ಶಕ್ತಿಗಳು ಭೂಗತರಾಗಿ ಕಾರ್ಯನಿರ್ವಹಿಸುವ, ಸಮಾಜವನ್ನು. ಪ್ರಚೋದಿಸುವ, ದೇಶ ವಿರೋಧಿ ಚಟುವಟಿಕೆಗಳಲ್ಲಿ ಭಾಗವಹಿಸುವ ಸಾಧ್ಯತೆ ಇದ್ದು, ಇಂತಹ ಯಾವುದೇ ಘಟನೆಗಳು ಗಮನಕ್ಕೆ ಬಂದರೆ ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿ ಮುಂದಾಗುವ ಸಮಸ್ಯೆಗಳನ್ನು ತಪ್ಪಿಸಲು ಕಾನೂನಿನ ಜೊತೆ ಕೈ ಜೋಡಿಸಲು ಮನವಿ ಮಾಡುತ್ತೇನೆ ಎಂದಿದ್ದಾರೆ.