ಬೆಂಗಳೂರು,ಜ.19: ಕಳೆದ ವಿಧಾನಸಭೆ ಚುನಾವಣೆಯ ಕಹಿ ನೆನಪನ್ನು ಮರೆತು ಹೊಸ ಉತ್ಸಾಹದೊಂದಿಗೆ ಕೆಲಸ ಮಾಡುವ ಮೂಲಕ ಕಳೆದ ಲೋಕಸಭಾ ಚುನಾವಣೆಯಲ್ಲಿ ಮಾಡಿದ ಸಾಧನೆ ಪುನರಾವರ್ತನೆ ಮಾಡುವಂತೆ ರಾಜ್ಯ ಬಿಜೆಪಿ ನಾಯಕರಿಗೆ ಪ್ರಧಾನಿ ನರೇಂದ್ರ ಮೋದಿ ಸಲಹೆ ಮಾಡಿದ್ದಾರೆ.
ಸರ್ಕಾರದ ಅಧಿಕೃತ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ರಾಜ್ಯಕ್ಕೆ ಆಗಮಿಸಿದ ಅವರು ಕಲಬುರಗಿ ವಿಮಾನ ನಿಲ್ದಾಣ ಮತ್ತು ಬೆಂಗಳೂರಿನ ವಿಮಾನ ನಿಲ್ದಾಣದಲ್ಲಿ ಆಯ್ದ ಪ್ರಮುಖ ನಾಯಕರೊಂದಿಗೆ ಅನೌಪಚಾರಿಕ ಮಾತುಕತೆ ನಡೆಸಿದರು.
ಲೋಕಸಭೆ ಚುನಾವಣೆವರೆಗೂ ಕಾರ್ಯಕರ್ತರು ವಿಶ್ರಾಂತಿ ಇಲ್ಲದೆ ದುಡಿಯಬೇಕೆಂದು ಸೂಚನೆ ಕೊಟ್ಟಿದ್ದಾರೆ. ರಾಜ್ಯ ಸರ್ಕಾರದ ವೈಫಲ್ಯಗಳನ್ನು ಜನತೆಯ ಮುಂದಿಡಲು ಹಿಂದೆ ಮುಂದೆ ನೋಡಬೇಡಿ. ಒಗ್ಗಟ್ಟಿನಿಂದ ಚುನಾವಣೆ ಎದುರಿಸಿದರೆ ಗೆಲುವು ಸಾಧ್ಯ ಎಂದು ಮುಖಂಡರಿಗೆ ಮನವರಿಕೆ ಮಾಡಿಕೊಟ್ಟರು.
ಮಹಾರಾಷ್ಟ್ರದ ಸೊಲ್ಲಾಪುರ ಕಾರ್ಯಕ್ರಮ ಮುಗಿಸಿಕೊಂಡು ಕಲಬುರಗಿಗೆ ಆಗಮಿಸಿದ ಮೋದಿ ಅವರು, ಕೇಂದ್ರ ಸಚಿವ ಭಗವಂತ ಕೂಬಾ ಲೋಕಸಭಾ ಸದಸ್ಯ ಡಾ.ಉಮೇಶ್ ಜಾಧವ್, ಶಾಸಕರು, ವಿಧಾನಪರಿಷತ್ ಸದಸ್ಯರೊಂದಿಗೆ ಮಾತನಾಡಿದರು.
ಇದಾದ ನಂತರ ಬೆಂಗಳೂರಿಗೆ ಆಗಮಿಸಿದ ಅವರು,
ದೇವನಹಳ್ಳಿಯ ಬಿ.ಮಾರೇನಹಳ್ಳಿಯಲ್ಲಿರುವ ಬೋಯಿಂಗ್ ಇಂಡಿಯಾ ಇಂಜಿನಿಯರಿಂಗ್ ಅಂಡ್ ಟೆಕ್ನಾಲಜಿ ಸೆಂಟರ್ ಉದ್ಘಾಟಿಸಿದರು. ಬಳಿಕ ಬೋಯಿಂಗ್ ಸುಕನ್ಯಾ ಯೋಜನೆಗೂ ಚಾಲನೆ ನೀಡಿದರು.
ಕಾರ್ಯಕ್ರಮ ಮುಗಿಸಿ ಚೆನೈ ಗೆ ತೆರಳುವ ಮುನ್ನ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ,ಪ್ರತಿಪಕ್ಷ ನಾಯಕ ಆರ್.ಅಶೋಕ್, ಸಂಸದರಾದ ಸದಾನಂದ ಗೌಡ, ತೇಜಸ್ವಿ ಸೂರ್ಯ, ಪಿ.ಸಿ.ಮೋಹನ್,ಹಾಗೂ ಕೆಲವು ಶಾಸಕರೂ ಸೇರಿ 30 ನಾಯಕರೊಂದಿಗೆ ಮಾತುಕತೆ ನಡೆಸಿದರು.
ಈ ವೇಳೆ, ಲೋಕಸಭೆ ಚುನಾವಣೆಯನ್ನು ಪ್ರತಿಯೊಬ್ಬರು ಗಂಭೀರವಾಗಿ ತೆಗೆದುಕೊಳ್ಳಬೇಕು. ಬಿಜೆಪಿ ಈ ಬಾರಿ 400 ಕ್ಷೇತ್ರಗಳನ್ನು ಗೆಲ್ಲುವ ಗುರಿ ಹಾಕಿಕೊಂಡಿದೆ. ನಮಗೆ ಒಂದೊಂದು ಕ್ಷೇತ್ರವು ಮುಖ್ಯ. ಕರ್ನಾಟಕದ 28 ಲೋಕಸಭಾ ಕ್ಷೇತ್ರಗಳ ಪೈಕಿ ಕನಿಷ್ಠ ಪಕ್ಷ 20ಕ್ಕೂ ಹೆಚ್ಚು ಕ್ಷೇತ್ರಗಳನ್ನು ಗೆಲ್ಲಬೇಕು ಎಂದು ಸೂಚನೆ ಕೊಟ್ಟರು ಎಂದು ಉನ್ನತ ಮೂಲಗಳು ತಿಳಿಸಿವೆ.
ಯಾವುದೇ ರೀತಿಯ ವಿವಾದವನ್ನು ಮೈಮೇಲೆ ಎಳೆದುಕೊಳ್ಳದೆ ಕೇಂದ್ರ ಸರ್ಕಾರ ಕಳೆದ 9 ವರ್ಷಗಳ ಅವಧಿಯಲ್ಲಿ ಮಾಡಿರುವ ಸಾಧನೆಗಳನ್ನುಮನೆ ಮನೆಗೆ ತಲುಪಿಸಿ ಒಂದೇ ಒಂದು ಹಗರಣವಿಲ್ಲದೆ ಪಾರದರ್ಶಕ ಆಡಳಿತ ಕೊಟ್ಟಿದ್ದೇವೆ. ಇದನ್ನು ಮತದಾರರಿಗೆ ಮನವರಿಕೆ ಮಾಡಿಕೊಡಬೇಕು ಎಂದು ಸಲಹೆ ಮಾಡಿದರು.