ನವದೆಹಲಿ.
ಸಮಾಜದ ಎಲ್ಲಾ ವಲಯಗಳಲ್ಲೂ ಮಹಿಳಾ ಪ್ರಾತಿನಿಧ್ಯಕ್ಕೆ ಬೇಡಿಕೆ ಹೆಚ್ಚಿದೆ. ಅದರಂತೆ ಪೊಲೀಸ್ ಇಲಾಖೆಯಲ್ಲಿ ಮಹಿಳಾ ಪ್ರಾತಿನಿಧ್ಯವನ್ನು ಶೇ 33ಕ್ಕೆ ಏರಿಸಬೇಕೆಂದು ನಿರ್ಧಾರ ಮಾಡಿದ್ದರೂ ಇದು ಕೇವಲ ಶೇ 11.75ರಷ್ಟು ಮಾತ್ರ ಇದೆ. ಈ ಮಹಿಳಾ ಪ್ರಾತಿನಿಧ್ಯವನ್ನು ಶೇ. 33ಕ್ಕೆ ಹೆಚ್ಚಳ ಮಾಡುವಂತೆ ರಾಜ್ಯಗಳಿಗೆ ಕೇಂದ್ರ ಸರ್ಕಾರ ಅಧಿಕೃತ ಜ್ಞಾಪನ ಪತ್ರದ ಮೂಲಕ ಆರು ಬಾರಿ ಸಲಹೆ ನೀಡಿದೆ. ಆದರೆ, ಇದು ನಿರೀಕ್ಷಿತ ಫಲಿತಾಂಶ ನೀಡಿಲ್ಲ ಎಂದು ಕೇಂದ್ರ ಗೃಹ ಸಚಿವ ನಿತ್ಯಾನಂದ ರೈ (Nityanand Rai) ಹೇಳಿದ್ದಾರೆ.
ರಾಜ್ಯಸಭೆಯಲ್ಲಿ ಲಿಖಿತ ಉತ್ತರ ನೀಡಿರುವ ಅವರು, ಖಾಲಿ ಇರುವ ಕಾನ್‌ಸ್ಟೇಬಲ್ ಹಾಗೂ ಸಬ್ ಇನ್‌ಸ್ಪೆಕ್ಟರ್ ಹುದ್ದೆಗಳನ್ನು ಹೆಚ್ಚುವರಿ ಮಹಿಳಾ ಕಾನ್‌ಸ್ಟೇಬಲ್ ಮತ್ತು ಸಬ್ ಇನ್‌ಸ್ಪೆಕ್ಟರ್ ಹುದ್ದೆಗಳಾಗಿ ಪರಿವರ್ತಿಸಿ ಎಂದು ಎಲ್ಲ ರಾಜ್ಯ ಸರ್ಕಾರಗಳಿಗೂ ಸಲಹೆ ಮಾಡಲಾಗಿದೆ ಎಂದು ತಿಳಿಸಿದರು.
ಲಡಾಖ್ ನಲ್ಲಿ ಮಹಿಳಾ ಪ್ರಾತಿನಿಧ್ಯವು ಅತಿಹೆಚ್ಚು, ಅಂದರೆ ಶೇ 28.3ರಷ್ಟಿದೆ. ಆಂಧ್ರ ಪ್ರದೇಶದಲ್ಲಿ ಶೇ 21.7, ಛತ್ತೀಸಗಢದಲ್ಲಿ ಶೇ 21.6 ಹಾಗೂ ಬಿಹಾರದಲ್ಲಿ ಶೇ 21.2ರಷ್ಟಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ (ಶೇ 3.2) ಅತಿಕಡಿಮೆ ಮಹಿಳಾ ಪ್ರಾತಿನಿಧ್ಯವಿದೆ. ತ್ರಿಪುರಾದಲ್ಲಿ ಶೇ 5.29 ಹಾಗೂ ಮೇಘಾಲಯದಲ್ಲಿ ಶೇ 5.9ರಷ್ಟಿದೆ ಎಂದು ಪೊಲೀಸ್ ಸಂಶೋಧನೆ ಹಾಗೂ ಅಭಿವೃದ್ಧಿ ಬ್ಯುರೊ ಈ ಅಂಕಿ ಸಂಖ್ಯೆಯನ್ನು ನೀಡಿದೆ ಎಂದು ವಿವರಿಸಿದರು.

