ಹಾಸನ,ಜ.23- ರಾಜಕೀಯ ವಿಚಾರಕ್ಕೆ ಸ್ನೇಹಿತರಿಬ್ಬರ ನಡುವೆ ಶುರುವಾದ ಜಗಳ ಮಚ್ಚಿನಿಂದ ಸ್ನೇಹಿತನ ಕೈ ಕಡಿಯುವ ಮೂಲಕ ಅಂತ್ಯವಾಗಿರುವ ಘಟನೆ ಸಕಲೇಶಪುರ ತಾಲೂಕಿನ ಹೊಸ್ಕವಳ್ಳಿ ಗ್ರಾಮದಲ್ಲಿ ನಡೆದಿದೆ.
ಗುರುಮೂರ್ತಿ ಮಚ್ಚಿನಿಂದ ಹಲ್ಲೆಗೊಳಗಾದ ವ್ಯಕ್ತಿಯಾಗಿದ್ದು, ಇವರ ಮೇಲೆ ಹೊಸ್ಕವಳ್ಳಿಕೊಪ್ಪಲು ಗ್ರಾಮದ ರಮೇಶ್ ಮಚ್ಚಿನಿಂದ ಹಲ್ಲೆ ಮಾಡಿದ ಆರೋಪಿಯಾಗಿದ್ದಾನೆ.
ರಮೇಶ್ ಹಾಗೂ ಗುರುಮೂರ್ತಿ ಇಬ್ಬರೂ ಸ್ನೇಹಿತರಾಗಿದ್ದು, ಬಾಳ್ಳುಪೇಟೆಯ ಜೆಪಿ ನಗರದಲ್ಲಿ ಹಣಕಾಸು ವಿಚಾರ ಮಾತನಾಡುತ್ತಿದ್ದರು. ಗುರುಮೂರ್ತಿ ಬಳಿ ರಮೇಶ್ 85 ಸಾವಿರ ರೂ. ಸಾಲ ಪಡೆದಿದ್ದ. ಇದೀಗ ಹಣವನ್ನು ವಾಪಸ್ ಕೊಡುವಂತೆ ಗುರುಮೂರ್ತಿ ಕೇಳಿದ್ದ. ಈ ವೇಳೆ ರಮೇಶ್ ಕೊಡುತ್ತೇನೆ ಎಂದಿದ್ದ. ನಂತರ ಇಬ್ಬರ ನಡುವೆ ರಾಜಕೀಯ ಚರ್ಚೆ ಶುರುವಾಗಿದೆ.
ಗುರುಮೂರ್ತಿ ಬಿಜೆಪಿ ಪಕ್ಷದ ಕಾರ್ಯಕರ್ತ, ರಮೇಶ್ ಜೆಡಿಎಸ್ ಪಕ್ಷದ ಕಾರ್ಯಕರ್ತ. ಹೀಗಾಗಿ ಈ ಬಾರಿ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಗೆಲ್ಲುತ್ತಾರೆ ಎಂದು ಗುರುಮೂರ್ತಿ ಹೇಳಿದ್ದಾನೆ. ಇತ್ತ ರಮೇಶ್ ಇಲ್ಲ ಈ ಬಾರಿ ಜೆಡಿಎಸ್ ಅಭ್ಯರ್ಥಿ ಗೆಲ್ಲುತ್ತಾರೆ ಎಂದು ಹೇಳಿದ್ದಾನೆ. ಇದು ಅತಿರೇಕಕ್ಕೆ ಹೋಗಿ ಇಬ್ಬರ ನಡುವೆ ಜಗಳ ಶುರುವಾಗಿ ಪರಸ್ಪರ ತಳ್ಳಾಡಿದ್ದಾರೆ. ಕೊನೆಗೆ ಸ್ಥಳೀಯರು ಮಧ್ಯಪ್ರವೇಶ ಮಾಡಿ ಇಬ್ಬರ ಜಗಳವನ್ನು ಬಿಡಿಸಿ ಕಳುಹಿಸಿದ್ದರು.
ಇದೇ ವಿಚಾರಕ್ಕೆ ಹೊಸ್ಕಳ್ಳಿ ಗ್ರಾಮಕ್ಕೆ ಕಾರಿನಲ್ಲಿ ಬಂದ ರಮೇಶ್, ಹಣ ಕೊಡುತ್ತೇನೆ ಮನೆಯಿಂದ ಹೊರಗೆ ಬಾ ಎಂದು ಗುರುಮೂರ್ತಿಗೆ ಫೋನ್ ಮಾಡಿದ್ದಾನೆ. ಮನೆಯಿಂದ ಹೊರಗೆ ಬಂದು ಗುರುಮೂರ್ತಿ ಕಾರಿನ ಬಳಿ ಬರುತ್ತಿದ್ದಂತೆ ರಮೇಶ್ ಮಚ್ಚು ಬೀಸಿದ್ದಾನೆ. ಆಗ ಗುರುಮೂರ್ತಿ ತನ್ನ ಎಡಗೈ ಅಡ್ಡ ಕೊಟ್ಟಿದ್ದ. ಪರಿಣಾಮ ಗುರುಮೂರ್ತಿ ಎಡಗೈ ತೀವ್ರ ಗಾಯಗಳಾಗಿವೆ.
ಘಟನೆಯ ಬಳಿಕ ಗುರುಮೂರ್ತಿ ಹಾಸನದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಸಕಲೇಶಪುರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.