ಬೆಳಗಾವಿ, ಡಿ. 29- ವಿಧಾನ ಮಂಡಲದ ಚಳಿಗಾಲದ ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಸಮಸ್ಯೆಗಳ ಚರ್ಚೆಗೆ ರಾಜ್ಯ ಸರ್ಕಾರ ಅವಕಾಶ ನೀಡದೇ ಮೊಟಕುಗೊಳಿಸಿದೆ ಎಂದು ಶಾಸಕ ಪ್ರಿಯಾಂಕ ಖರ್ಗೆ ಅವರು ಅಸಮಾಧಾನ ವ್ಯಕ್ತಪಡಿಸಿದರು.
ಸುವರ್ಣ ಸೌಧದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು ಉತ್ತರ ಕರ್ನಾಟಕ ಹತ್ತು ಹಲವು ಸಮಸ್ಯೆಗಳನ್ನು ಚರ್ಚೆ ಮಾಡಲು ಸದನವನ್ನು ಮೊಟಕುಗೊಳಿಸುವುದು ಬೇಡ,
ಮುಖ್ಯಮಂತ್ರಿಗಳು ದೆಹಲಿ ಪ್ರವಾಸದ ನಂತರ ಅಧಿವೇಶನವನ್ನು ಮೊಟಕುಗೊಳಿಸುವ ತೀರ್ಮಾನ ಮಾಡಲಾಗಿದೆ ಎಂದು ತಿಳಿಸಿದರು.
ರಾಜ್ಯ ಸರ್ಕಾರದ ವಿರುದ್ಧ ಕಾಂಗ್ರೆಸ್ ಧ್ವನಿ ಎತ್ತಲಿಲ್ಲ ಎನ್ನುವ ಆರೋಪವನ್ನು ನಿರಾಕರಿಸಿದ ಅವರು, ರೈತರ ಸಮಸ್ಯೆ ವಿಚಾರ ಅಧಿವೇಶನದ ಮೊದಲ ಪ್ರಶ್ನೆಯಾಗಿತ್ತು. ಆದರೆ, ರೈತರ ವಿಚಾರ ಮುಂದೂಡಿ, ಕುಕ್ಕರ್ ಸ್ಪೋಟ ವಿಚಾರಕ್ಕೆ ಆದ್ಯತೆ ನೀಡಲಾಯಿತು ಎಂದು ಆರೋಪಿಸಿದರು.
ಮಂಗಳೂರಿನ ಕುಕ್ಕರ್ ಸ್ಪೋಟದ ವಿಚಾರದ ಬಗ್ಗೆ ಚರ್ಚಿಸುವ ಅಗತ್ಯವಿತ್ತೆ ಎಂದು ಪ್ರಶ್ನಿಸಿದ ಅವರು, ರೈತರು, ಸಾರ್ವಜನಿಕರ ವಿಚಾರದ ಬಗ್ಗೆ ಚರ್ಚೆಗೆ ಅವಕಾಶ ನೀಡಲೇ ಇಲ್ಲ ಎಂದರು.
ಬೆಂಗಳೂರಿನ ಚಿಲುಮೆ ಹಗರಣ, ಮಹದಾಯಿ ಯೋಜನೆ, ಪಿಎಸ್‍ಐ ನೇಮಕಾತಿ ಹಗರಣದ ಬಗ್ಗೆ ಯಾವುದೇ ರೀತಿಯ ಚರ್ಚೆ ನಡೆಸಲಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಕಾಂಗ್ರೆಸ್‍ನಲ್ಲಿ ಯಾವುದೇ ರೀತಿಯ ಅಸಮಾಧಾನವಿಲ್ಲ. ಆದರೆ, ಬಿಜೆಪಿಯಲ್ಲಿ ಬಿ.ಎಸ್.ಯಡಿಯೂರಪ್ಪ ಮತ್ತು ಬಿಜೆಪಿ, ಸಂಸದ ಪ್ರತಾಪಸಿಂಹ ಮತ್ತು ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್, ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮತ್ತು ಯಡಿಯೂರಪ್ಪ ಎಂಬಂತಾಗಿದೆ. ಆಡಳಿತ ಪಕ್ಷದಲ್ಲಿ ಏನಾಗುತ್ತಿದೆ ಎಂಬುದನ್ನು ನೋಡಿಕೊಳ್ಳಲಿ ಎಂದು ತಿರುಗೇಟು ನೀಡಿದರು.