ಬೆಂಗಳೂರು,ಜ.16-
ಕರ್ನಾಟಕದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಸರ್ಕಾರ ಕಳೆದ ಮೂರು ವರ್ಷಗಳ ಅವಧಿಯಲ್ಲಿ ಶೇಕಡ 40ರಷ್ಟು ಲಂಚದ ಮೂಲಕ ₹1.5 ಲಕ್ಷ ಕೋಟಿ ಲೂಟಿ ಮಾಡಿದೆ ಎಂದು AICC ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ (Priyanka Gandhi) ವಾಗ್ದಾಳಿ ಆರೋಪಿಸಿದ್ದಾರೆ.
ವಿಧಾನಸಭೆ ಚುನಾವಣೆಗೆ ಸಜ್ಜುಗೊಳ್ಳುತ್ತಿರುವ ರಾಜ್ಯ ಕಾಂಗ್ರೆಸ್ ಆಯೋಜಿಸಿದ್ದ ನಾ ನಾಯಕಿ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು,
ನಾ ನಾಯಕಿ’ ಸಮಾವೇಶದಲ್ಲಿ ಮಾತನಾಡಿದ ಅವರು, ‘ಇಲ್ಲಿನ ಸರ್ಕಾರ ಯಾವ ಕೆಲಸ ಮಾಡಿದರೂ ಶೇ 40ರಷ್ಟು ಲಂಚ ಪಡೆಯುತ್ತಿದೆ. ಜನರ ತೆರಿಗೆಯ ಹಣ ಲಂಚದ ರೂಪದಲ್ಲಿ ಸರ್ಕಾರದಲ್ಲಿರುವ ಕೆಲವರ ಜೇಬು ಸೇರುತ್ತಿದೆ’ ಎಂದು ದೂರಿದರು.
ಸರ್ಕಾರದ ಕಾಮಗಾರಿಗಳಲ್ಲಿ ಕಮೀಷನ್ ಸಂಗ್ರಹ ಮಾಡುವುದಷ್ಟಕ್ಕೆ ಈ ಭ್ರಷ್ಟಾಚಾರ ನಿಂತಿಲ್ಲ ಸರ್ಕಾರದ ವಿವಿಧ ಹುದ್ದೆಗಳ ನೇಮಕಾತಿಯಲ್ಲೂ ದೊಡ್ಡ ಪ್ರಮಾಣದ ಅಕ್ರಮವೆಸಗಲಾಗುತ್ತಿದೆ ಎಂದು ಹೇಳಿದರು
ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ನೇಮಕಾತಿಯಲ್ಲಿ ನಡೆದಿರುವ ಹಗರಣ ನಾಚಿಕೆಗೇಡಿನ ಸಂಗತಿ. ಬಿಜೆಪಿ ಸರ್ಕಾರವು ಪೊಲೀಸ್ ಪಡೆಗಳನ್ನೂ ಮಾರಾಟಕ್ಕಿಟ್ಟಿದೆ.ವಾಹನ ಚಾಲನಾ ಪರವಾನಗಿ, ನೋಂದಣಿ ಎಲ್ಲದಕ್ಕೂ ಲಂಚ ಕೊಡಬೇಕು. ಅಧಿಕಾರಿಗಳ ನೇಮಕ, ವರ್ಗಾವಣೆ, ಸ್ಥಳ ನಿಯುಕ್ತಿಯಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ ಎಂದು ಆಪಾದಿಸಿದರು.
ಇಂತಹ ಸರ್ಕಾರದಿಂದ ನಿಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ, ಉದ್ಯೋಗ ದೊರಕುವ ಭರವಸೆ ಇದೆಯೆ? ಇವರಿಂದ ಭವಿಷ್ಯ ಉತ್ತಮಗೊಳ್ಳುವ ಭರವಸೆ ಇದೆಯೆ’ ಎಂದು ಸಭೆಯಲ್ಲಿದ್ದ ಜನರನ್ನು ಪ್ರಶ್ನಿಸಿದ ಅವರು ಭ್ರಷ್ಟಾಚಾರದ ವಿಷಯದಿಂದ ಜನರ ಗಮನವನ್ನು ಬೇರೆಡೆ ಸೆಳೆಯಲು ಅನೇಕ ಕಸರತ್ತು ಮಾಡುತ್ತಿದ್ದಾರೆ ಎಂದು ದೂರಿದರು.
ಮಕ್ಕಳ ಕಲಿಕೆಯ ಪಠ್ಯಕ್ರಮಕ್ಕೂ ಕೈ ಹಾಕಿದ್ದಾರೆ. ಬಸವಣ್ಣ ಸೇರಿದಂತೆ ಅನೇಕ ಮಹನೀಯರಿಗೆ ಸಂಬಂಧಿಸಿದ ಪಠ್ಯಗಳನ್ನು ತಿರುಚಿದ್ದಾರೆ. ಇದೆಲ್ಲವೂ ಕೆಲವರ ಆಣತಿಯಂತೆ ನಡೆದಿದೆ ಎಂದು ದೂರಿದರು.
ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಜನರ ಬದುಕು ದುಸ್ತರವಾಗಿದೆ.ಅಡುಗೆ ಅನಿಲ ದರ ದುಪ್ಪಟ್ಟಾಗಿದೆ ಎಲ್ಲಾ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದ್ದು ಜನ ಸಾಮಾನ್ಯರ ಬದುಕು ದುಸ್ತರವಾಗಿದೆ ಎಂದರು.
ಮಹಿಳೆಗೆ ಆರ್ಥಿಕ ನೆರವು:
ಇದೇ ವೇಳೆ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ರಾಜ್ಯದಲ್ಲಿ ಅಧಿಕಾರಕ್ಕೆ ಬಂದರೆ ಗೃಹಲಕ್ಷ್ಮಿ ಯೋಜನೆ ಹೆಸರಿನಲ್ಲಿ ಪ್ರತಿ ಕುಟುಂಬದ ಯಜಮಾನಿಗೆ ತಿಂಗಳಿಗೆ ₹2,000 ನೆರವು ನೀಡುವುದಾಗಿ ಘೋಷಣೆ ಮಾಡಿದ್ದು,ಈ ಘೋಷಣಾ ಪತ್ರವನ್ನು ರಾಜ್ಯ ಕಾಂಗ್ರೆಸ್ ನಾಯಕರು ಪ್ರಿಯಾಂಕಾ ಗಾಂಧಿ ಅವರಿಗೆ ಹಸ್ತಾಂತರಿಸಿದರು.
ವೇದಿಕೆಯಲ್ಲಿ ಅನೇಕ ನಾಯಕರು, ಗೃಹಲಕ್ಷ್ಮಿ ಯೋಜನೆಯ ಘೋಷಣೆಯ ಭಿತ್ತಿಪತ್ರಗಳನ್ನು ಹಿಡಿದು ಭರವಸೆ ನೀಡಿದರು
ಅದ್ದೂರಿ ಸ್ವಾಗತ:
ನಾ ನಾಯಕಿ ಸಮಾವೇಶಕ್ಕೆ ಆಗಮಿಸಿದ ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕ ಗಾಂಧಿ ಅವರನ್ನು ರಾಜ್ಯ ಕಾಂಗ್ರೆಸ್ ನಾಯಕರು ಅದ್ಧೂರಿಯಾಗಿ ಬರಮಾಡಿಕೊಂಡರು.
ಪ್ರತಿಪಕ್ಷದ ನಾಯಕರಾದ ಸಿದ್ದರಾಮಯ್ಯ, ಬಿ.ಕೆ.ಹರಿಪ್ರಸಾದ್, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ (DK Shivakumar) ಸೇರಿ ಅನೇಕ ನಾಯಕರು ವಿಮಾನ ನಿಲ್ದಾಣದಲ್ಲಿ ಪ್ರಿಯಾಂಕಗಾಂಧಿ ಅವರನ್ನು ಸ್ವಾಗತಿಸಿದರು
ವಿಮಾನನಿಲ್ದಾಣದ ಹೊರಗೆ ಸಾದಹಳ್ಳಿ ಗೇಟ್ ಬಳಿ ಬೃಹತ್ ಸೇಬಿನ ಹಾರ ಹಾಕಿ ಸ್ವಾಗತಿಸಲಾಯಿತು. ಅಲ್ಲಿಂದ ಕೆಲ ದೂರ ಮೆರಣಿಗೆಯಲ್ಲಿ ಪ್ರಿಯಾಂಕ ಆಗಮಿಸಿದರು. ಹಾದಿಯುದ್ಧಕ್ಕೂ ಕಾದು ನಿಂತಿದ್ದ ಅಭಿಮಾನಿಗಳಿಗೆ ಪ್ರಿಯಾಂಕ ಕೈ ಬಿಸಿ ಶುಭಾಷಯ ವಿನಿಮಯ ಮಾಡಿಕೊಂಡರು.
ಸಮಾವೇಶಕ್ಕೆ ಆಗಮಿಸಿದ ಆಗಮಿಸಿದ ಪ್ರಿಯಾಂಕ ಗಾಂಧಿ ಭದ್ರತೆಯನ್ನು ಲೆಕ್ಕಿಸದೆ ಸಮಾವೇಶಗೊಂಡಿದ್ದ ಮಹಿಳಾ ಕಾರ್ಯಕರ್ತರ ಕೈ ಕುಲುಕುವ ಮೂಲಕ ಸಂಚಲನ ಮೂಡಿಸಿದರು.
ಸಭಾಂಗಣದ ಹಾದಿಯುದ್ಧಕ್ಕೂ ಕೈ ನೀಡಿದವರಿಗೆ ಹಸ್ತಲಾಘವ ನೀಡುತ್ತಾ, ಅಲ್ಲಲ್ಲಿ ಕೆಲವರಿಗೆ ಸೆಲ್ಫಿಗೆ ಪೋಸು ನೀಡುತ್ತಾ ಪ್ರಿಯಾಂಕ ವೇದಿಕೆಯತ್ತ ಬಂದರು.
ವಿಧಾನ ಪರಿಷತ್ ನ ಮಾಜಿ ಸದಸ್ಯೆ ಜಲಜಾನಾಯಕ್ ಪ್ರಿಯಾಂಕ ಅವರಿಗೆ ಲಂಬಾಣಿ ಸಾಂಪ್ರದಾಯಿಕ ದುಪ್ಪಟ್ಟ ಹೊದಿಸುವ ಮೂಲಕ ಬರಮಾಡಿಕೊಂಡರೆ, ಮಾಜಿಸಚಿವೆ ಮೊಟಮ್ಮ ಎರಡು ಎಳೆಯ ಚಿನ್ನದ ಸರವನ್ನು ಖುದ್ದು ಪ್ರಿಯಾಂಕರ ಕೊರಳಿಗೆ ಹಾಕಿ ಗಮನ ಸೆಳೆದರು.
ರಾಜ್ಯ Congressನಲ್ಲಿ ಪ್ರಿಯಾಂಕಾ ಸಂಚಲನ
Previous Articleನೇಪಾಳದಲ್ಲಿ ಭೀಕರ ವಿಮಾನ ಅಪಘಾತ. 72 ಜನರ ದುರ್ಮರಣ!
Next Article ಅಂಥವನಿಂದ ದುಡ್ಡು ತಗೋಳ್ಳೊದಕ್ಕಿಂತ ಸಾಯೋದು ವಾಸಿ!