ಬೆಂಗಳೂರು, ಜ.12- ಮುಂಬರುವ ಲೋಕಸಭೆ ಚುನಾವಣೆಯಲ್ಲಿ ರಾಜ್ಯದಿಂದ ಹೆಚ್ಚಿನ ಸಂಸದರನ್ನು ಆಯ್ಕೆ ಮಾಡಿ ಕಳುಹಿಸಬೇಕೆಂದು ತಾಕೀತು ಮಾಡಿರುವ ಕಾಂಗ್ರೆಸ್ ಹೈಕಮಾಂಡ್ ಸೋಲು ಕಂಡರೆ ಅದಕ್ಕೆ ಚುನಾವಣಾ ಸಂಯೋಜಕರಾಗಿರುವ ಸಚಿವರುಗಳ ತಲೆದಂಡ ಮಾಡುವುದಾಗಿ ಎಚ್ಚರಿಕೆ ನೀಡಿದೆ.
ಲೋಕಸಭೆ ಚುನಾವಣೆ ಹಿನ್ನೆಲೆ ಯಲ್ಲಿ ನಿನ್ನೆ ದೆಹಲಿಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನೇತೃತ್ವದಲ್ಲಿ ಚುನಾವಣಾ ವೀಕ್ಷ ಕರ ಸಭೆ ನಡೆಯಿತು.ಈ ಸಭೆಯಲ್ಲಿ ಚುನಾವಣಾ ಜವಾಬ್ದಾರಿಯನ್ನು ಹೆಚ್ಚು ಗಂಭೀರವಾಗಿ ತೆಗೆದುಕೊಂಡು ನಿರ್ವಹಿಸಬೇಕು ಎಂದು ಸೂಚನೆ ನೀಡಿದ್ದಾರೆ ಎಂದು ಗೃಹ ಸಚಿವ ಡಾ. ಪರಮೇಶ್ವರ್ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಯಾವ ಕ್ಷೇತ್ರದಲ್ಲಿ ಪಕ್ಷದ ಅಭ್ಯರ್ಥಿಗಳು ಗೆಲ್ಲಲು ಸಾಧ್ಯವಿದೆಯೋ, ಅಂತಹ ಕಡೆ ಸೋತರೆ, ಸಚಿವರು ಸರಿಯಾಗಿ ಕೆಲಸ ಮಾಡಿಲ್ಲ ಎಂದು ತಿಳಿದುಕೊಳ್ಳಬೇಕಾಗುತ್ತದೆ ಎಂಬುದನ್ನು ಸ್ಪಷ್ಟವಾಗಿ ತಿಳಿಸಿದ್ದಾರೆ ಎಂದು ಹೇಳಿದರು.
ಲೋಕಸಭಾ ಚುನಾವಣೆಗೆ ಪಕ್ಷವು ಐದು ಕ್ಲಸ್ಟರ್ ಅನ್ನು ಮಾಡಿದೆ. ಮೊದಲ ಕ್ಲಸ್ಟರ್ಸ್‌ನಲ್ಲಿ ಕರ್ನಾಟಕ, ತೆಲಂಗಾಣ, ಕೇರಳ ರಾಜ್ಯಗಳಿವೆ. ಮೊದಲ ಕ್ಲಸ್ಟರ್‌ನಲ್ಲಿರುವ ಎಲ್ಲ ರಾಜ್ಯಗಳ ನಾಯಕರು ಆಗಮಿಸಿದ್ದರು.ಪಂಚಾಯಿತಿ ಹಂತಗಳಲ್ಲಿ ಸಮಿತಿಗಳ ರಚನೆ ಮಾಡುವುದು, ಪ್ರಚಾರ ಯಾವ ರೀತಿ ಕೈಗೊಳ್ಳಬೇಕು ಹಾಗೂ ಅಭ್ಯರ್ಥಿಗಳ ಆಯ್ಕೆ ನಂತರ ಏನೆಲ್ಲಾ ಕ್ರಮ ತೆಗೆದುಕೊಳ್ಳಬೇಕು ಎಂಬುದರ ಕುರಿತು ಬಹಳ ವ್ಯವಸ್ಥಿತವಾಗಿ ಸೂಚನೆ ಕೊಟ್ಟಿದ್ದಾರೆ” ಎಂದು ಹೇಳಿದರು.
ಈ ಹಿಂದೆ ಪ್ರತಿ ಕ್ಷೇತ್ರಕ್ಕೆ ಒಬ್ಬರನ್ನು ವೀಕ್ಷಕರನ್ನು ನೇಮಿಸಲಾಗುತ್ತಿತ್ತು. ಈ ಬಾರಿ, ಅದರ ಬದಲಿಗೆ ಸಮನ್ವಯಕಾರರನ್ನು ನೇಮಿಸಲಾಗಿದೆ. ವಾರ್ ರೂಮ್ ಎನ್ನುವುದನ್ನು ಕನೆಕ್ಟ್ ಸೆಂಟರ್ ಎಂದು ಬದಲಿಸಲಾಗಿದೆ. ಇದೆಲ್ಲವನ್ನು ಪಕ್ಷದ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್, ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ, ರಾಷ್ಟ್ರೀಯ ಕೋರ್ಡಿನೇಷನ್ ಚೇರ್ಮನ್ ಶಶಿಕಾಂತ್ ಸೆಂಥಿಲ್ ಅವರು ನೋಡಿಕೊಳ್ಳುತ್ತಾರೆ. ಕರ್ನಾಟಕ, ತೆಲಂಗಾಣ, ಆಂಧ್ರ ಪ್ರದೇಶ, ಕೆರಳ ಸೇರಿದಂತೆ ದಕ್ಷಿಣ ಭಾರತದ ಜಿಲ್ಲೆಗಳಲ್ಲಿ ಹೆಚ್ಚು ಸ್ಥಾನಗಳನ್ನು ಗೆಲ್ಲುವ ಬಗ್ಗೆ ಸೂಚನೆ ನೀಡಿದರು. ಕನೆಕ್ಟ್ ಸೆಂಟರ್ ಮೂಲಕ ನೇರವಾಗಿ ಕೋರ್ಡಿನೇಟರ್ ಜೊತೆ ಸಂಪರ್ಕದಲ್ಲಿದ್ದು ಕೆಲಸ ಮಾಡಬೇಕು ಎಂಬುದನ್ನು ತಿಳಿಸಿದ್ದಾರೆ” ಎಂದರು.
“ಶಶಿಕಾಂತ್ ಸೆಂಥಿಲ್ ಅವರು ರಾಜ್ಯದ ಎಲ್ಲಾ ಸಚಿವರನ್ನು ಪ್ರತ್ಯೇಕವಾಗಿ ಭೇಟಿ ಮಾಡಿ, ಚುನಾವಣೆಯಲ್ಲಿ ರಾಜ್ಯದ ಮೇಲೆ ಹೈಕಮಾಂಡ್ ಇಟ್ಟಿರುವ ನಿರೀಕ್ಷೆ ಹಾಗೂ ಸಚಿವರ ಜವಾಬ್ದಾರಿಗಳ ಬಗ್ಗೆ ತಿಳಿಸಿದ್ದಾರೆ ಎಂದು ಹೇಳಿದರು.
ಅಲ್ಪಸಂಖ್ಯಾತರ ಮತಗಳನ್ನು ಸೆಳೆಯಲು ಬಿಜೆಪಿ ತಂತ್ರ ರೂಪಿಸಿದೆ ಈ ಬಗ್ಗೆ ನಿಮ್ಮ ಅಭಿಪ್ರಾಯ ಏನು ಎಂಬ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, “ಮತದಾರರ ಹತ್ತಿರ ಹೋಗಲು ಆಕ್ಷೇಪಣೆ ಇಲ್ಲ. ಯಾರು ಬೇಕಾದರೂ ಮತ ಕೇಳಬಹುದು. ಭಾರತೀಯ ಜನತಾ ಪಾರ್ಟಿಯವರು ಚುನಾವಣೆಯನ್ನು ಎದುರಿಸುವ ವಿಧಾನ ಹಾಗೂ ಚುನಾವಣಾ ವಿಧಾನ ಬೇರೆ ರೀತಿಯಾಗಿರುತ್ತದೆ. ಆದರೆ, ಅಂತಿಮವಾಗಿ ಮತದಾರರು ಮಾಡುವ ತೀರ್ಮಾನವನ್ನು ಯಾರು ಊಹಿಸಲು ಸಾಧ್ಯವಿಲ್ಲ” ಎಂದರು.
ಸುರ್ಜೇವಾಲಾ ಮತ್ತೆ ರಾಜ್ಯಕ್ಕೆ ಭೇಟಿ “ದೆಹಲಿಯಲ್ಲಿ ನಡೆದ ಸಭೆಯಲ್ಲಿ ಲೋಕಸಭಾ ಚುನಾವಣೆಯ ಅಭ್ಯರ್ಥಿಗಳ ಬಗ್ಗೆ ಯಾವುದೇ ರೀತಿಯ ಚರ್ಚೆಯಾಗಿಲ್ಲ. ಚುನಾವಣಾ ತಂತ್ರಗಾರಿಕೆ ಬಗ್ಗೆ ಮಾತ್ರ ಚರ್ಚೆಯಾಗಿದೆ. ಈ ವೇಳೆ, ಆದಷ್ಟು ಬೇಗ ಅಭ್ಯರ್ಥಿಗಳ ಹೆಸರುಗಳನ್ನು ಅಂತಿಮ ಮಾಡಿ ಪಟ್ಟಿ ಬಿಡುಗಡೆ ಮಾಡುವಂತೆ ತಿಳಿಸಿದ್ದೇವೆ. ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರು ಪ್ರದೇಶ ಚುನಾವಣಾ ಸಮಿತಿ ಸಭೆ ಕರೆದು ಇಲ್ಲಿ ತೀರ್ಮಾನ ಮಾಡಿ, ಅದನ್ನು ಪಕ್ಷದ ಕೇಂದ್ರ ಚುನಾವಣಾ ಸಮಿತಿಗೆ ನೀಡುತ್ತೇವೆ ಎಂದಿದ್ದಾರೆ. ಇನ್ನೆರಡು ದಿನಗಳಲ್ಲಿ ರಾಜ್ಯಕ್ಕೆ ಆಗಮಿಸಿ ಸಭೆ ನಡೆಸಬಹುದು” ಎಂದು ತಿಳಿಸಿದರು.
ಮುದ್ದಹನುಮೇಗೌಡ ಸೇರ್ಪಡೆ “ಮಾಜಿ ಸಂಸದ ಮುದ್ದ ಹನುಮೇಗೌಡ ಅವರು ನನ್ನನ್ನು ಸಹ ತುಮಕೂರಿನ ನಿವಾಸದಲ್ಲಿ ಭೇಟಿಯಾಗಿದ್ದಾರೆ. ಅವರು ಪಕ್ಷಕ್ಕೆ ಸೇರ್ಪಡೆಯಾಗಲು ಯಾವುದೇ ಅಭ್ಯಂತರವಿಲ್ಲ. ಈ ಬಗ್ಗೆ ಒಮ್ಮತದಿಂದ ತೀರ್ಮಾನ ತೆಗೆದುಕೊಳ್ಳುತ್ತೇವೆ. ಈ ವಿಚಾರವನ್ನು ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್ ಅವರ ಗಮನಕ್ಕೆ ತಂದಿದ್ದು, ಜಿಲ್ಲೆಯ ನಾಯಕರು ತೀರ್ಮಾನ ಮಾಡುವಂತೆ ಹೇಳಿದ್ದಾರೆ” ಎಂದರು.
1 ಟಿಪ್ಪಣಿ
i-tec.ru https://www.multimedijnyj-integrator.ru .