ವಿಜಯಪುರ,ಸೆ.22- ಅಕ್ರಮ ಪಿಎಸ್‌ಐ ನೇಮಕ ಹಾಗೂ ಅಕ್ರಮ ಶಿಕ್ಷಕರ ನೇಮಕದ ಬಳಿಕ ಪಿಡ್ಲ್ಯೂಡಿ ಇಲಾಖೆಯ ನೇಮಕಾತಿ ಅಕ್ರಮಕ್ಕೂ ಜಿಲ್ಲೆಯ ನಂಟು ಇರುವುದು ಪತ್ತೆಯಾಗಿದೆ.
ಪಿಡಬ್ಲ್ಯೂಡಿ ಇಲಾಖೆ ಜೆಇ ಹಾಗೂ ಎಇ ನೇಮಕಾತಿ ಅಕ್ರಮ ಪರೀಕ್ಷೆಯಲ್ಲಿ ವಿಜಯಪುರ ಜಿಲ್ಲೆಯ ಓರ್ವ ಶಿಕ್ಷಕ ಭಾಗಿಯಾಗಿದ್ದು ಅವರನ್ನು ಅಮಾನತುಗೊಳಿಸಲಾಗಿದೆ.
ಪ್ರಶ್ನೆ ಪತ್ರಿಕೆ ಸೋರಿಕೆ, ಕೀ ಉತ್ತರ ಸಿದ್ಧಪಡಿಸಿದ ಆರೋಪದಡಿ ಶಿಕ್ಷಕ ಗೊಲ್ಲಾಳಪ್ಪ ಅವರನ್ನು ಅಮಾನತ್ತು ಮಾಡಿ ಡಿಡಿಪಿಐ ಉಮೇಶ ಶಿರಹಟ್ಟಿಮಠ ಆದೇಶ ಹೊರಡಿಸಿದ್ದಾರೆ.
ಸಿಂದಗಿ ತಾಲೂಕಿನ ಗುತ್ತರಗಿ ಗ್ರಾಮದ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ಶಿಕ್ಷಕ ಅಮಾನತುಗೊಂಡಿದ್ದಾರೆ. ನೆರೆಯ ಕಲಬುರ್ಗಿ ಬಾಲಾಜಿ ಪಾಲಿಟೆಕ್ನಿಕ್ ಪರೀಕ್ಷಾ ಕೇಂದ್ರದಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆ ಮಾಡಿದ್ದರಲ್ಲಿ ಶಿಕ್ಷಕನ ಕೈವಾಡವಿರುವುದು ದೃಢಪಟ್ಟಿದೆ.
ತಲೆ ಮರಿಸಿಕೊಂಡಿರುವ ಶಿಕ್ಷಕ ಗೊಲ್ಲಾಳಪ್ಪನ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ. ಪ್ರಭಾವಿಗಳು, ರಾಜಕಾರಣಿಗಳ ಬೆಂಬಲದ ಕಾರಣ ಪೊಲೀಸರಿಗೆ ಸಿಗದೇ ಗೊಲ್ಲಾಳಪ್ಪ ತಪ್ಪಿಸಿಕೊಂಡು ಓಡಾಡುತ್ತಿರುವ ಸಂಶಯ ಎದುರಾಗಿದೆ.
ತಮಟೆ ಮೂಲಕ ಮನವಿ:
ಇನ್ನು ಮತ್ತೊಂದು ಕಡೆ ಪಿಎಸ್‌ಐ ನೇಮಕಾತಿ ಹಗರಣ ಪ್ರಕರಣಕ್ಕೆ ಸಂಬಂಧಿಸಿ ಹೆಚ್.ಬಿ.ಬೋರೇಗೌಡ ಉದ್ಘೋಷಿತ ಆರೋಪಿ ಎಂದು ಬೆಂಗಳೂರಿನ 1ನೇ ಎಸಿಎಂಎಂ ನ್ಯಾಯಾಲಯ ಘೋಷಿಸಿದೆ. ಈ ಬೆಳವಣಿಗೆಯ ಬೆನ್ನಲ್ಲೇ ಪ್ರಕರಣದ ತನಿಖೆ ನಡೆಸುತ್ತಿರುವ ಸಿಐಡಿ ಪ್ರಕಟಣೆಗೊರಡಿಸಿದೆ. ಆರೋಪಿಯ ಸ್ವಂತ ಊರಲ್ಲಿ ತಮಟೆ ಮೂಲಕ ಡಂಗೂರ ಸಾರಿಸಿದೆ. ಮಾಹಿತಿ ಕೊಡುವಂತೆ ಸಾರ್ವಜನಿಕರನ್ನು ವಿನಂತಿಸಲಾಗಿದೆ.
ತುಮಕೂರು ಜಿಲ್ಲೆ ಕುಣಿಗಲ್ ತಾಲೂಕಿನ ಜೋಡಿ ಹೊಸಹಳ್ಳಿ ಆರೋಪಿ ಬೋರೇಗೌಡನ ಸ್ವಗ್ರಾಮದಲ್ಲಿ ಡಂಗೂರ ಸಾರಿಸುವ ಮೂಲಕ ಜನರು ಮಾಹಿತಿ ನೀಡುವಂತೆ ಕೇಳಿ ಕೊಳ್ಳಲಾಗಿದೆ. ಮನೆ ಮತ್ತು ಊರಿನ ಕೆಲ ಸ್ಥಳಗಳಲ್ಲಿ ಪೊಲೀಸ್ ಪ್ರಕಟಣೆಯ ಭಿತ್ತಿಪತ್ರ ಕೂಡ ಅಂಟಿಸಲಾಗಿದೆ. ಯಾರು ಮಾಹಿತಿ ಕೊಟ್ಟಿದ್ದಾರೆ ಎಂಬ ವಿವರವನ್ನು ಗೌಪ್ಯವಾಗಿ ಇರಿಸುತ್ತೇವೆ ಎಂದು ಸಿಐಡಿ ಭರವಸೆ ನೀಡಿದೆ.
Previous Articleಪುಟಿನ್ ಹಾಕಿದ ನ್ಯೂಕ್ಲಿಯರ್ ಧಮ್ಕಿ
Next Article SDPI ಮುಖಂಡರ ಸೆರೆ : ಪ್ರತಿಭಟನೆ