ಬೆಂಗಳೂರು.ಡಿ.26: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ರಾಜ್ಯದಿಂದ ಅತ್ಯಧಿಕ ಸಂಸದರನ್ನು ಆಯ್ಕೆ ಮಾಡಿ ಕಳುಹಿಸಬೇಕೆಂದು ಪಣತೊಟ್ಟಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ *(DK Shivakumar) ಇದೀಗ ಇದಕ್ಕಾಗಿ ಹೊಸದೊಂದು ತಂತ್ರವನ್ನು ರೂಪಿಸಿ,ಹೈಕಮಾಂಡ್ ಗೆ ರವಾನಿಸಿದ್ದರು.
ಆದರೆ, ಇದನ್ನು ಸಾರಾಸಗಟಾಗಿ ತಿರಸ್ಕರಿಸಿರುವ ಪಕ್ಷದ ಮುಖಂಡ ರಾಹುಲ್ ಗಾಂಧಿ, ಇದು ಯಾವುದೇ ಕಾರಣಕ್ಕೂ ಕಾರ್ಯಸಾಧುವಾದ ಯೋಜನೆ ಅಲ್ಲ.ಹೀಗಾಗಿ ತಾವು ಸಮೀಕ್ಷೆಯ ವರದಿ ಪರಿಶೀಲಿಸಿ ಮುಖ್ಯಮಂತ್ರಿ ಸೇರಿದಂತೆ ಎಲ್ಲಾ ನಾಯಕರೊಂದಿಗೆ ಕುಳಿತು ಚರ್ಚೆ ಮಾಡಿ ಅಭ್ಯರ್ಥಿಗಳ ಪಟ್ಟಿ ಸಿದ್ದ ಪಡಿಸುವಂತೆ ಸೂಚಿಸಿದ್ದಾರೆ.
ಅಂದಹಾಗೆ ಡಿ.ಕೆ.ಶಿವಕುಮಾರ್ ಹೈಕಮಾಂಡ್ ಗೆ ಸಲ್ಲಿಸದ್ದ ಸೂತ್ರ ಏನೆಂದರೆ, ಹೈಕಮಾಂಡ್ ಸೂಚನೆಯಂತೆ ಲೋಕಸಭಾ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆಗೆ ಎಲ್ಲಾ ಕ್ಷೇತ್ರಗಳಲ್ಲಿ ಕಾರ್ಯಕರ್ತರ ಸಭೆ ನಡೆಸಿ ಅಭ್ಯರ್ಥಿಗಳ ಆಯ್ಕೆ ಕುರಿತಂತೆ ಅಭಿಪ್ರಾಯ ಆಲಿಸಲಾಗಿದೆ.
ಉಸ್ತುವಾರಿಗಳ ಮೂಲಕ ಈ ಕುರಿತಂತೆ ವರದಿ ಪಡೆದುಕೊಳ್ಳಲಾಗಿದೆ.
ಇದರ ಜೊತೆಯಲ್ಲಿ ಎಲ್ಲ ಕ್ಷೇತ್ರಗಳಲ್ಲಿ ಆಂತರಿಕ ಸಮೀಕ್ಷೆ ನಡೆಸಿ ವರದಿಯನ್ನು ಪಡೆದುಕೊಳ್ಳಲಾಗಿದೆ.
ಅಚ್ಚರಿಯ ವಿಷಯ ಏನೆಂದರೆ, ಈ ವರದಿಯಲ್ಲಿ ರಾಜ್ಯದ ಮತದಾರರು ಕಾಂಗ್ರೆಸ್ ಪರವಾದ ಅಭಿಪ್ರಾಯ ಹೊಂದಿದ್ದರೂ ಕೂಡ ಅವುಗಳನ್ನು ಮತಗಳನ್ನಾಗಿ ಪರಿವರ್ತಿಸಿ ತಮ್ಮ ಪರವಾಗಿ ಮಾರ್ಪಡಿಸಿಕೊಳ್ಳುವಂತಹ ಅಭ್ಯರ್ಥಿಗಳು ಸಿಕ್ಕಿಲ್ಲ. ಎಲ್ಲಾ ಕ್ಷೇತ್ರಗಳಲ್ಲೂ ದೊಡ್ಡ ಪ್ರಮಾಣದ ಆಕಾಂಕ್ಷಿಗಳಿದ್ದಾರೆ.ಆದರೆ, ಬಹುತೇಕರು ಮತದಾರರ ವಿಶ್ವಾಸಗಳಿಸುವ ಸಾಮರ್ಥ್ಯ ಹೊಂದಿಲ್ಲ ಎಂದು ಈ ವರದಿಯಲ್ಲಿ ತಿಳಿಸಿದ್ದಾರೆ ಎನ್ನಲಾಗಿದೆ.
ಈ ವರದಿ ಅನ್ವಯ 20 ಕ್ಕೂ ಅಧಿಕ ಕ್ಷೇತ್ರಗಳಲ್ಲಿ ಪ್ರಬಲ ಅಭ್ಯರ್ಥಿಗಳ ಕೊರತೆಯನ್ನು ಕಾಂಗ್ರೆಸ್ ಎದುರಿಸುತ್ತಿದೆ.
ಇದಕ್ಕಾಗಿ ಈ ಹಿಂದೆ 1996ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಅಂದಿನ ಜನತಾದಳ ನೇತೃತ್ವದ ಸರ್ಕಾರ ಹೊಸದೊಂದು ತಂತ್ರವನ್ನು ರೂಪಿಸಿ ಯಶಸ್ವಿಯಾಗಿತ್ತು. ಇದೀಗ ಅದೇ ತಂತ್ರ ಅಳವಡಿಸಬೇಕು ಎಂದು ವರದಿಯಲ್ಲಿ ವಿವರಿಸಿದ್ದಾರೆ ಎನ್ನಲಾಗಿದೆ.
ಅಂದು ರಾಜ್ಯದ ಮುಖ್ಯಮಂತ್ರಿ ಆಗಿದ್ದ ದೇವೇಗೌಡರು ರಾಜ್ಯದ ಎಲ್ಲ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ರೂಪಿಸಿದ ತಂತ್ರಗಾರಿಕೆಯ ಪರಿಣಾಮವಾಗಿ ಜನತಾದಳ ರಾಜ್ಯದ ಇತಿಹಾಸದಲ್ಲಿ ಅತ್ಯಧಿಕ ಎನ್ನಿಸಬಹುದಾದ 16 ಹೆಚ್ಚು ಕ್ಷೇತ್ರಗಳಲ್ಲಿ ಜಯಗಳಿಸಿತ್ತು. ಅಂದು ಜನತಾದಳದ ಸರ್ಕಾರದಲ್ಲಿ ಮಂತ್ರಿಗಳಾಗಿದ್ದ ಜಾಲಪ್ಪ,ರಮೇಶ್ ಜಿಗಜಿಣಗಿ,ಎಚ್.ವೈ.ಮೇಟಿ, ಬಸವರಾಜ ರಾಯರೆಡ್ಡಿ,ಶಿವಾನಂದ ಕೌಜಲಗಿ,
ಖಮರುಲ್ ಇಸ್ಲಾಂ ಗೆಲುವು ಸಾಧಿಸಿದ್ದರು. ಶಾಸಕರಾಗಿದ್ದ ಸಿದ್ದರಾಜು, ರುದ್ರೇಶ್ ಗೌಡ,ಅವರಷ್ಟೇ ಅಲ್ಲದೆ ಪಕ್ಷದ ಪ್ರಭಾವದಿಂದಾಗಿ ಕೋದಂಡರಾಮಯ್ಯ,ಬಿ.ಎಲ್.ಶಂಕರ್, ಕುಮಾರಸ್ವಾಮಿ,ಅಂಬರೀಷ್ ಸೇರಿ 16 ಸಂಸದರು ಆಯ್ಕೆಯಾಗಿದ್ದರು.
ಈ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನ ಗಳಿಸಬೇಕಾದರೆ,ಅಂದು ಪ್ರಯೋಗಿಸಿದ್ದ ತಂತ್ರ ಈಗಲೂ ಅಳವಡಿಸಬೇಕು ಎಂದು ಶಿವಕುಮಾರ್ ತಮ್ಮ ವರದಿಯಲ್ಲಿ ಪ್ರತಿಪಾದಿಸಿರುವುದಾಗಿ ಗೊತ್ತಾಗಿದೆ.
ವರದಿಯಲ್ಲಿ ಹೇಳಿರುವಂತೆರಾಜ್ಯ ಸರ್ಕಾರದ ಪ್ರಭಾವಿ ಮಂತ್ರಿಗಳು ಚುನಾವಣೆಯ ಅಖಾಡಕ್ಕೆ ಧುಮುಕಬೇಕು.
ಬೆಳಗಾವಿಯಿಂದ ಸತೀಶ್ ಜಾರಕಿಹೊಳಿ,ಬೀದರ್ ನಿಂದ ಈಶ್ವರ ಖಂಡ್ರೆ,ಬಾಗಲಕೋಟೆಯಿಂದ ಎಂ.ಬಿ.ಪಾಟೀಲ್ ಕಾರವಾರದಲ್ಲಿ ಆರ್.ವಿ.ದೇಶಪಾಂಡೆ, ಹಾವೇರಿಯಿಂದ ಎಚ್.ಕೆ.ಪಾಟೀಲ್, ದಾವಣಗೆರೆ ಗೆ ಎಸ್.ಎಸ್.ಮಲ್ಲಿಕಾರ್ಜುನ, ಚಾಮರಾಜನಗರ ದಿಂದ ಡಾ.ಎಚ್.ಸಿ.ಮಹಾದೇವಪ್ಪ, ಕೋಲಾರದಿಂದ ಡಾ.ಜಿ.ಪರಮೇಶ್ವರ್, ಬಳ್ಳಾರಿಯಿಂದ ಕೆ.ಎನ್.ರಾಜಣ್ಣ,ಬೆಂಗಳೂರು ಉತ್ತರದಿಂದ ಕೃಷ್ಣ ಬೈರೇಗೌಡ, ಬೆಂಗಳೂರು ದಕ್ಷಿಣಕ್ಕೆ ದಿನೇಶ್ ಗುಂಡೂರಾವ್ ಅಥವಾ ರಾಮಲಿಂಗಾರೆಡ್ಡಿ ಮತ್ತು ಬೆಂಗಳೂರು ಕೇಂದ್ರದಿಂದ ಜಮೀರ್ ಅಹಮದ್ ಖಾನ್ ಅವರನ್ನು ಕಣಕ್ಕಿಳಿಸಿದರೆ ಗೆಲುವು ಸಾಧ್ಯ ಎಂದು ತಿಳಿಸಿರುವುದಾಗಿ ಗೊತ್ತಾಗಿದೆ.
ಸುರ್ಜೇವಾಲಾ ಅವರೊಂದಿಗೆ ನಿಗಮ ಮಂಡಳಿ ನೇಮಕಾತಿ ಕುರಿತಂತೆ ಸಭೆ ನಡೆಸಿದ ನಂತರ ಶಿವಕುಮಾರ್ ಪ್ರತ್ಯೇಕವಾಗಿ ಈ ವಿಷಯದ ಕುರಿತಂತೆ ಚರ್ಚೆ ನಡೆಸಿದ್ದು,ಹೈಕಮಾಂಡ್ ಗೆ ತಮ್ಮ ವರದಿ ಕುರಿತು ಮನವರಿಕೆ ಮಾಡಿಕೊಡಿ ಎಂದು ಹೇಳಿದ್ದಾರೆ ಎನ್ನಲಾಗಿದೆ.
ಈ ರೀತಿ ಮಾಡಿದ್ದೇ ಆದಲ್ಲಿ ಪಕ್ಷಕ್ಕೆ ಎರಡು ರೀತಿಯ ಅನುಕೂಲಗಳಿವೆ.ಈ ಹಿರಿಯ ನಾಯಕರು ಸಾಕಷ್ಟು ಜನಪ್ರಿಯರಾಗಿದ್ದು,ಖಚಿತವಾಗಿ ಸಂಸದರಾಗಿ ಆಯ್ಕೆಯಾಗಲಿದ್ದಾರೆ.ಆಗ,ಇವರಿಂದ ತೆರವಾಗುವ ಇಲಾಖೆಗಳಿಗೆ ಬೇರೆಯವರಿಗೆ ಅವಕಾಶ ನೀಡಬಹುದು. ಇದರಿಂದ ಮಂತ್ರಿ ಸ್ಥಾನ ಸಿಗದೆ ಬೇಸರಗೊಂಡ ಹಲವರನ್ನು ಸಮಾಧಾನ ಮಾಡಬಹುದು, ಇದಿಷ್ಟೇ ಅಲ್ಲದೆ ಸಂಸದರಾಗಿ ಆಯ್ಕೆಯಾದವರ ವಿಧಾನಸಭೆ ಕ್ಷೇತ್ರದಲ್ಲಿ ಪರ್ಯಾಯ ನಾಯಕರನ್ನು ಬೆಳೆಸಬಹುದಾಗಿದೆ ಎಂದು ವಿವರಿಸಿದ್ದಾರೆ.
ಆದರೆ, ಈ ವರದಿಯನ್ನು ಪರಿಶೀಲಿಸಿದ ರಾಹುಲ್ ಗಾಂಧಿ,ಯಾವುದೇ ಕಾರಣಕ್ಕೂ ಇದು ಸದ್ಯದ ಪರಿಸ್ಥಿತಿಯಲ್ಲಿ ಕಾರ್ಯಸಾಧ್ಯವಲ್ಲ. ಮಂತ್ರಿಗಳಾಗಿರುವವರು ಚುನಾವಣೆಯಲ್ಲಿ ಗೆಲ್ಲುವ ಸಾಧ್ಯತೆ ಕಡಿಮೆ. 1996ರಲ್ಲಿನ ರಾಜಕೀಯ ಪರಿಸ್ಥಿತಿ ಬೇರೆ,ಈಗಿನ ಲೆಕ್ಕಾಚಾರವೇ ಬೇರೆಯಾಗಿದೆ ಹೀಗಾಗಿ ಯಾವುದೇ ಕಾರಣಕ್ಕೂ ಯಾವುದೇ ಮಂತ್ರಿಯನ್ನು ಚುನಾವಣೆ ಅಖಾಡಕ್ಕೆ ಇಳಿಸಬಾರದು.ಬದಲಾಗಿ ಈ ಎಲ್ಲಾ ಮಂತ್ರಿಗಳಿಗೆ ಒಂದೊಂದು ಕ್ಷೇತ್ರದ ಉಸ್ತುವಾರಿ ನೀಡಿ ಗೆಲುವಿನ ಗುರಿ ನೀಡಬೇಕು. ತಮ್ಮ ಕ್ಷೇತ್ರದಲ್ಲಿ ಅಭ್ಯರ್ಥಿ ಗೆಲ್ಲಿಸಿಕೊಂಡು ಬಂದರೆ,ಸಂಪುಟದಲ್ಲಿ ಉಳಿಯಬಹುದು ಇಲ್ಲವಾದರೆ ಸಂಪುಟದಿಂದ ಕೈಬಿಡುವ ಸಂದೇಶ ರವಾನಿಸಬೇಕು ಎಂದು ಸ್ಪಷ್ಟವಾಗಿ ತಿಳಿಸಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.