ಬೆಂಗಳೂರು.
ಉದ್ಯಾನ ನಗರಿ ಸಿಲಿಕಾನ್ ಸಿಟಿ, ನಿವೃತ್ತರ ಸ್ವರ್ಗ ಎಂದೆಲ್ಲ ವಿಶೇಷಣಗಳಿಂದ ಕರೆಯಿಸಿಕೊಳ್ಳುವ ರಾಜಧಾನಿ ಬೆಂಗಳೂರು ಇದೀಗ ಗಬ್ಬೆದ್ದು ನಾರುತ್ತಿದೆ.
ಬೆಂಗಳೂರಿನ ಕೇಂದ್ರ ಭಾಗವಾದ ಮೆಜೆಸ್ಟಿಕ್ ಶಿವಾಜಿನಗರ, ಮಲ್ಲೇಶ್ವರಂ, ಜಯನಗರ, ಚಾಮರಾಜಪೇಟೆ, ಕೆ ಆರ್ ಮಾರುಕಟ್ಟೆ ಸೇರಿದಂತೆ ಬಹುತೇಕ ನಗರದ ಎಲ್ಲ ಪ್ರದೇಶಗಳಲ್ಲಿ ರಾಶಿ ರಾಶಿ ಕಸ ಬಿದ್ದು ಗಬ್ಬೆದ್ದು ನಾರುತ್ತಿದೆ.
ನಗರದಲ್ಲಿ ಕಳೆದೊಂದು ವಾರದಿಂದ ಮಳೆ ಅಬ್ಬರಿಸಿ ಭೋರ್ಗರೆಯುತ್ತಿದೆ. ಅದು ಕೂಡ ಬೆಳಗಿನ ಜಾವ ಧಾರಾಕಾರವಾಗಿ ಸುರಿಯುತ್ತಿದೆ.ಇದರ ಪರಿಣಾಮ ಪೌರಕಾರ್ಮಿಕರು ತಮ್ಮ ಕೆಲಸಕ್ಕೆ ಸಕಾಲದಲ್ಲಿ ಬರಲು ಸಾಧ್ಯವಾಗುತ್ತಿಲ್ಲ.
ಮಧ್ಯಾಹ್ನದ ವೇಳೆಗೆ ಮಳೆ ನಿಂತ ಮೇಲೆ ಬರುವ ಪೌರಕಾರ್ಮಿಕರು ಸಂಗ್ರಹವಾಗುವ ಎಲ್ಲ ಕಸವನ್ನು ಒಂದೆಡೆ ಸೇರಿಸಿ ಗುಡ್ಡೆ ಹಾಕುತ್ತಿದ್ದಾರೆ ಇದನ್ನು ತೆಗೆದುಕೊಂಡು ಹೋಗುವ ಲಾರಿಗಳಿಗೆ ಮಾತೊಂದು ಸಮಸ್ಯೆ ಎದುರಾಗಿದೆ.
ಕಸ ವಿಲೇವಾರಿಗಾಗಿ ನಿಗದಿಪಡಿಸಿರುವ ತ್ಯಾಜ್ಯ ಸಂಗ್ರಹಣ ಕೇಂದ್ರಗಳಿಗೆ ತೆರಳುವ ದಾರಿ ಭಾರಿ ಮಳೆಯ ಕಾರಣಕ್ಕೆ ಕೊಚ್ಚಿ ಹೋಗಿದೆ ಈ ಪ್ರದೇಶ ತಲುಪಲು ಸಾಧ್ಯವಾಗದೆ ಕಸ ತುಂಬಿದ ಲಾರಿಗಳು ಎಲ್ಲಂದರೆ ಅಲ್ಲೇ ನಿಂತಿವೆ ಹೀಗಾಗಿ ನಗರದಲ್ಲಿ ಸಂಗ್ರಹವಾಗಿರುವ ಕಸವನ್ನು ತುಂಬಿಕೊಂಡು ಹೋಗಲು ಲಾರಿಗಳು ಬಾರದ ಪರಿಸ್ಥಿತಿ ನಿರ್ಮಾಣವಾಗಿದೆ.
ಈ ಕಾರಣದಿಂದ ನಗರದ ಬಹುತೇಕ ಎಲ್ಲ ಪ್ರದೇಶಗಳಲ್ಲಿ ರಸ್ತೆ ಬದಿಯಲ್ಲಿ ಕಸ ರಾಶಿಯಾಗಿ ಗುಡ್ಡೆಯಂತೆ ಬಿದ್ದಿದೆ ಮಳೆಯ ಕಾರಣಕ್ಕಾಗಿ ಈ ಕಸ ಕೊಳೆಯ ತೊಡಗಿದ್ದು ಸುತ್ತ ಮುತ್ತಲಿನ ಪ್ರದೇಶ ದುರ್ವಾಸನೆಯಿಂದ ಕೂಡಿದೆ ಹೀಗಾಗಿ ಬೆಂಗಳೂರು ಇದೀಗ ಗಬ್ಬೆದ್ದು ನಾರುತ್ತಿದೆ.
ಕಸ ತೆಗೆಯುವಂತೆ ಸಾರ್ವಜನಿಕರು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಅಧಿಕಾರಿಗಳು ಮತ್ತು ಕಾಲ್ ಸೆಂಟರ್ ಗೆ ಹಲವಾರು ಕರೆಗಳನ್ನು ಮಾಡಿ ದೂರು ಸಲ್ಲಿಸಿದ್ದಾರೆ ಆದರೆ ಕಸ ವಿಲೇವಾರಿ ಮಾಡುವ ಲಾರಿಗಳು ಬಾರದ ಕಾರಣ ಮಹಾನಗರ ಪಾಲಿಕೆ ಕೂಡ ಏನು ಮಾಡದ ಪರಿಸ್ಥಿತಿ ನಿರ್ಮಾಣವಾಗಿದೆ.
Previous Articleಮೊಬೈಲ್ ಅಲ್ಲ ಟವರ್ ಕದ್ದೊಯ್ದ ಕಳ್ಳರು..
Next Article ಅಕ್ಟೋಬರ್ 24 – ವಿಶ್ವ ಸಂಸ್ಥೆಯ ದಿನ