‘ಒಂದು ಮೊಟ್ಟೆಯ ಕತೆ’, ‘ಗರುಡ ಗಮನ ವೃಷಭ ವಾಹನ’ ಅಂಥಹಾ ಅತ್ಯುತ್ತಮ ಸಿನಿಮಾಗಳನ್ನು ನೀಡಿರುವ ರಾಜ್ ಬಿ ಶೆಟ್ಟಿ ಪೋಷಕ ಪಾತ್ರದಲ್ಲಿ ನಟಿಸಿರುವ ‘777 ಚಾರ್ಲಿ’ ಸಿನಿಮಾ ಮುಂದಿನ ವಾರ ಬಿಡುಗಡೆ ಆಗಲಿದೆ. ದಶಕಗಳ ಕಾಲ ನೆನಪುಳಿವ ‘ಗರುಡ ಗಮನ ವೃಷಭ ವಾಹನ’ ಸಿನಿಮಾ ನೀಡಿರುವ ರಾಜ್ ಬಿ ಶೆಟ್ಟಿಯವರ ಮುಂದಿನ ಸಿನಿಮಾ ಯಾವುದಾಗಿರಲಿದೆ ಎಂಬ ಕುತೂಹಲ ಸಿನಿಪ್ರೇಮಿಗಳಲ್ಲಿ ಮನೆ ಮಾಡಿದೆ.
‘777 ಚಾರ್ಲಿ’ ಸಿನಿಮಾ ಸಂದರ್ಭದಲ್ಲಿ ಮಾಧ್ಯಮಗಳೊಟ್ಟಿಗೆ ಮಾತನಾಡಿರುವ ರಾಜ್ ಬಿ ಶೆಟ್ಟಿ ತಮ್ಮ ಮುಂದಿನ ಯೋಜನೆಯ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರ ನೀಡಿದ್ದಾರೆ. ನಿಮ್ಮ ಮುಂದಿನ ಸಿನಿಮಾ ಯಾವುದು? ಎಂಬ ಪ್ರಶ್ನೆಗೆ ಉತ್ತರಿಸಿರುವ ರಾಜ್ ಬಿ ಶೆಟ್ಟಿ, ‘ಗ್ಯಾಂಗ್‌ಸ್ಟರ್ ಮತ್ತು ಕಾಮಿಡಿ ಸಿನಿಮಾ ಮಾಡಬಾರದು ಎಂಬ ನಿಯಮ ಹಾಕಿಕೊಂಡಿದ್ದೇನೆ. ಆದರೆ ನನ್ನ ಮುಂದಿನ ಸಿನಿಮಾ ಯಾವುದಾಗಿರಲಿದೆ ಎಂಬುದು ನನಗೆ ಗೊತ್ತಿಲ್ಲ” ಎಂದಿದ್ದಾರೆ. ”ಗೊತ್ತಿಲ್ಲದ ವಿಷಯವನ್ನು ಹೆಕ್ಕಿಕೊಳ್ಳಬೇಕು. ಆ ವಿಷಯಗಳು ನಿಮಗೆ ಪೂರ್ಣ ಗೊತ್ತಾಗುವವರೆಗೆ ಸಿನಿಮಾ ಪ್ರಾರಂಭ ಮಾಡಬಾರದು. ಗೊತ್ತಾದ ಮೇಲಷ್ಟೆ ಸಿನಿಮಾ ಪ್ರಾರಂಭ ಮಾಡಬೇಕು ಇದನ್ನು ನಾನು ನಂಬಿದ್ದೇನೆ. ಈ ಪ್ರಕ್ರಿಯೆಯಿಂದ ಹೊಸದನ್ನು ಕಲೀತೀರ. ಇದರಿಂದ ಸಿನಿಮಾ ಫ್ರೆಶ್ ಆಗಿ ಕಾಣುತ್ತದೆ” ಎಂದಿದ್ದಾರೆ ರಾಜ್ ಬಿ ಶೆಟ್ಟಿ. ”ಕಾಮಿಡಿ ಮತ್ತು ಗ್ಯಾಂಗ್‌ಸ್ಟರ್ ಎರಡೂ ನನಗೆ ಗೊತ್ತಿಲ್ಲದ ವಿಷಯ. ಅದನ್ನು ಆಯ್ಕೆ ಮಾಡಿಕೊಂಡು ಸಿನಿಮಾ ಮಾಡಿದ್ದೇನೆ. ಈಗ ಮುಂದೇನು ಮಾಡುತ್ತೇನೆ ಅದೂ ನನಗೆ ಗೊತ್ತಿರಲ್ಲ. ಅದನ್ನೆಲ್ಲ ಗೊತ್ತು ಮಾಡಿಕೊಂಡು ಸಿನಿಮಾ ಮಾಡಲು ಸ್ವಲ್ಪ ಟೈಮ್ ಬೇಕು. ನನಗೆ ಒಂದರ ನಂತರ ಒಂದು ಸಿನಿಮಾ ಮಾಡಬೇಕು ಎಂಬ ತುರ್ತು ಇಲ್ಲ ಹಾಗಾಗಿ ಈಗ ಸದ್ಯಕ್ಕೆ ಆರಾಮವಾಗಿ ವಾಲಿಬಾಲ್ ಆಡಿಕೊಂಡು ಓಡಾಡಿಕೊಂಡು ಇದ್ದೀನಿ” ಎಂದಿದ್ದಾರೆ.