ಬೆಂಗಳೂರು.ಜ,7: ದೇಶದ ರಾಮಭಕ್ತರು ದಶಕಗಳಿಂದ ಜಾತಕ ಪಕ್ಷಿಗಳಂತೆ ಕಾಯುತ್ತಿದ್ದ ಅಯೋಧ್ಯೆಯ ರಾಮಮಂದಿರ ಉದ್ಘಾಟನೆ ಸಮಾರಂಭಕ್ಕೆ ದಿನಗಣನೆ ಆರಂಭಗೊಂಡಿದೆ.
ರಾಮ ಮಂದಿರ (Ram Mandir) ಉದ್ಘಾಟನೆ ಸಮಾರಂಭವನ್ನು ಮಹಾ ಉತ್ಸವದ ರೀತಿಯಲ್ಲಿ ಆಚರಿಸಲು ಕೇಂದ್ರ ಸರ್ಕಾರ ಮತ್ತು ಸಂಘ ಪರಿವಾರ ನಾಯಕರು ತೀರ್ಮಾನಿಸಿ ಸರಣಿ ಕಾರ್ಯಕ್ರಮಗಳನ್ನು ರೂಪಿಸಿರುವ ಬೆನ್ನಲ್ಲೇ ರಾಜ್ಯ ಸರ್ಕಾರ ಕೂಡ ವಿನೂತನ ಕಾರ್ಯಕ್ರಮವೊಂದಕ್ಕೆ ಮುನ್ನುಡಿ ಇಟ್ಟಿದೆ.
ರಾಮ ಮಂದಿರ ಉದ್ಘಾಟನೆಯ ಪವಿತ್ರ ದಿನವನ್ನು ಬಿಜೆಪಿ ಮತ್ತು ಸಂಘ ಪರಿವಾರ ಕಾರ್ಯಕರ್ತರು ಅದು ತಮ್ಮ ಹಬ್ಬದ ರೀತಿಯಲ್ಲಿ ಬಿಂಬಿಸುವ ಮೂಲಕ ಬಿಜೆಪಿ ಸಾಧನೆ ಎಂದು ಬಣ್ಣಿಸಲು ಮುಂದಾಗಿರುವ ಬೆನ್ನಲ್ಲೇ ರಾಜ್ಯ ಸರ್ಕಾರ ತಾನು ಏನು ಕಡಿಮೆ ಇಲ್ಲ ಎಂಬಂತೆ ಕಾರ್ಯಕ್ರಮ ಒಂದನ್ನು ರೂಪಿಸಿದೆ.
ಅದರಲ್ಲೂ ಮುಜರಾಯಿ ಇಲಾಖೆಯ ಉಸ್ತುವಾರಿ ಹೊತ್ತಿರುವ ಹಿರಿಯ ನಾಯಕ ರಾಮಲಿಂಗಾರೆಡ್ಡಿ ರೆಡ್ಡಿ ಅವರು ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿ ರಾಮಮಂದಿರ ಉದ್ಘಾಟನೆಯ ದಿನವನ್ನು ಒಂದು ರೀತಿಯಲ್ಲಿ ಹಬ್ಬದ ರೀತಿ ಆಚರಿಸಲು ತೀರ್ಮಾನಿಸಿದ್ದಾರೆ.
ಜನವರಿ 22ರಂದು 51 ಇಂಚು ಎತ್ತರದ ರಾಮಲಲ್ಲಾ ವಿಗ್ರಹವು ಅಯೋಧ್ಯೆಯ ಶ್ರೀರಾಮಮಂದಿರದಲ್ಲಿ ಸ್ಥಾಪನೆಯಾಗಲಿದೆ. ವಿಗ್ರಹಕ್ಕೆ ಜನವರಿ 16ರಿಂದ ಮಸ್ತಕಾಭಿಷೇಕ ಪ್ರಾರಂಭವಾಗಲಿದೆ. ಏಳು ದಿನಗಳ ಕಾಲ ಈ ಧಾರ್ಮಿಕ ಕೈಂಕರ್ಯ ನಡೆಯಲಿದೆ ಎಂದು ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಈಗಾಗಲೇ ತಿಳಿಸಿದೆ.
ಈ ಹಿನ್ನೆಲೆಯಲ್ಲಿ ಜನವರಿ 16 ರಿಂದ ರಾಜ್ಯದ ಎಲ್ಲಾ ಪ್ರಮುಖ ದೇವಾಲಯಗಳು ವಿಶೇಷ ಪೂಜೆ ಧಾರ್ಮಿಕ ಕೈಂಕರ್ಯಗಳನ್ನು ಮಾಡುವಂತೆ ಸೂಚಿಸಿರುವ ಸಚಿವ ರಾಮಲಿಂಗಾರೆಡ್ಡಿ ರೆಡ್ಡಿ ಶ್ರೀರಾಮ ಮಂದಿರದಲ್ಲಿ (Ram Mandir) ಜನವರಿ 22ರಂದು ಶ್ರೀರಾಮನ ಪ್ರಾಣ ಪ್ರತಿಷ್ಠಾಪನಾ ಕಾರ್ಯ ಜರುಗಲಿದೆ. ಈ ನಿಟ್ಟಿನಲ್ಲಿ ಅಂದು ರಾಜ್ಯದ ಎಲ್ಲಾ ಮುಜರಾಯಿ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ನೆರವೇರಿಸುವಂತೆ ರಾಜ್ಯ ಸರ್ಕಾರ ನಿರ್ದೇಶನ ನೀಡಿದ್ದಾರೆ.
ಅದರಂತೆ ಪ್ರಾಣ ಪ್ರತಿಷ್ಠಾಪನಾ ಸಮಯವಾದ ಹನ್ನೆರಡು ಗಂಟೆ 29 ನಿಮಿಷ 8 ಸೆಕೆಂಡ್‍ನಿಂದ 12 ಗಂಟೆ 30 ನಿಮಿಷ 32 ಸೆಕೆಂಡ್ ಸಮಯದಲ್ಲಿ ಏಕಕಾಲದಲ್ಲಿ ಎಲ್ಲಾ ದೇವಸ್ಥಾನಗಳಲ್ಲಿ ಮಹಾಮಂಗಳಾರತಿ ನಡೆಸಿ ದೇಶ, ರಾಜ್ಯಕ್ಕೆ ಶ್ರೀರಾಮನ ರಕ್ಷಣೆ ಇರಲಿ ಎಂದು ವಿಶೇಷ ಪ್ರಾರ್ಥನೆ ಸಲ್ಲಿಸುವಂತೆ ಸುತ್ತೋಲೆ ಹೊರಡಿಸಲಾಗಿದೆ.