ಬೆಂಗಳೂರು – ರಾಜ್ಯದಲ್ಲಿ ಮತ್ತೊಮ್ಮೆ ಅಧಿಕಾರ ಚುಕ್ಕಾಣಿ ಹಿಡಿಯಬೇಕೆಂದು ರಣತಂತ್ರ ರೂಪಿಸುತ್ತಿರುವ ಬಿಜೆಪಿಗೆ ಇದೀಗ ಹೊಸ ತಲೆ ನೋವು ಶುರುವಾಗಿದೆ.
ರಾಜ್ಯದಲ್ಲಿ ಬೆಂಗಳೂರು ಹೊರತುಪಡಿಸಿದರೆ ಅತಿಹೆಚ್ಚಿನ ವಿಧಾನಸಭಾ ಕ್ಷೇತ್ರಗಳಿರುವ ಬೆಳಗಾವಿಯಲ್ಲಿ ಬಿಜೆಪಿ ಒಡೆದ ಮನೆಯಾಗಿದೆ. ಕಳೆದ ಬಾರಿ ಇಲ್ಲಿನ ಹದಿಮೂರು ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದ ಬಿಜೆಪಿ ಈ ಬಾರಿ ಇನ್ನೂ ಹೆಚ್ಚಿನ ಸ್ಥಾನ ಗಳಿಸಲು ಯತ್ನಿಸುತ್ತಿರುವಾಗ ಇಲ್ಲಿನ ನಾಯಕರ ನಡುವಿನ ಬಿಕ್ಕಟ್ಟು ಹೈಕಮಾಂಡ್ ಗೆ ಕಗ್ಗಂಟಾಗಿ ಪರಿಣಮಿಸಿದೆ.
ರಾಜ್ಯದಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತಿ ಸರ್ಕಾರ ಪತನದಲ್ಲಿ ಪ್ರಮುಖ ಪಾತ್ರವಹಿಸಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ತರುವಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ ಬೆಳಗಾವಿ ಸಾಹುಕಾರ್ ರಮೇಶ್ ಜಾರಕಿಹೊಳಿ ಈ ಬಿಕ್ಕಟ್ಟಿನ ಕೇಂದ್ರ ಬಿಂದುವಾಗಿದ್ದಾರೆ.
ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬರುವಲ್ಲಿ ಮಾತ್ರವಲ್ಲ ನೆರೆಯ ಮಹಾರಾಷ್ಟ್ರದಲ್ಲಿ ಮಹಾ ವಿಕಾಸ ಅಘಾಡಿ ಸರ್ಕಾರದ ಪತನದಲ್ಲೂ ಇವರ ಪಾತ್ರ ಪ್ರಮುಖವಾಗಿದೆ. ಹೀಗಾಗಿ ಇವರು ಹೈಕಮಾಂಡ್ ವಲಯದಲ್ಲಿ ಸಾಕಷ್ಟು ಪ್ರಭಾವ ಹೊಂದಿದ್ದಾರೆ.
ಆದರೆ,ಬೆಳಗಾವಿಯ ಮೂಲ ಬಿಜೆಪಿ ನಾಯಕರು ಮತ್ತು ಸಂಘ ಪರಿವಾರದ ನಾಯಕರು ಇವರ ಕಾರ್ಯ ವೈಖರಿಗೆ ಅಸಮಾಧಾನ ಹೊಂದಿದ್ದು, ಇವರಿಗೆ ಯಾವುದೇ ಪ್ರಾಶಸ್ತ್ಯ ನೀಡಬಾರದು ಎಂದು ಹೈಕಮಾಂಡ್ ಮೇಲೆ ಒತ್ತಡ ಹೇರುತ್ತಿದ್ದಾರೆ.ಬಿಜೆಪಿ ಒತ್ತಡದ ರಾಜಕಾರಣಕ್ಕೆ ಮಣಿಯಬಾರದು.ರಮೇಶ್ ಜಾರಕಿಹೊಳಿ ಆರಂಭದಿಂದಲೂ ಒತ್ತಡದ ರಾಜಕಾರಣ ಮಾಡುತ್ತಾ ಬಂದಿದ್ದಾರೆ ಇದಕ್ಕೆ ಈಗಲೇ ಪೂರ್ಣ ವಿರಾಮ ಹಾಕಬೇಕು ಎಂಬುದು ಈ ನಾಯಕರ ವಾದವಾಗಿದೆ.
ಬಿಜೆಪಿ ಯಾವಾಗಲೂ ನಾಯಕ ಆಧಾರಿತ ಪಕ್ಷವಾಗದೆ ಕಾರ್ಯಕರ್ತರ ಆಧಾರಿತ ಪಕ್ಷವಾಗಬೇಕು.ರಮೇಶ್ ಜಾರಕಿಹೊಳಿ ಇದಕ್ಕೆ ಪೂರ್ಣ ವಿರುದ್ದವಿದ್ದು ಅವರಿಗೆ ಸರಿಯಾದ ಮಾರ್ಗದರ್ಶನ ಮಾಡಬೇಕು ಅವರ ಕ್ಷೇತ್ರಕ್ಕೆ ಅವರನ್ನು ಸೀಮಿತಗೊಳಿಸಬೇಕು ಇಲ್ಲವಾದರೆ ನಿರ್ದಾಕ್ಷಿಣ್ಯ ಕ್ರಮಕ್ಕೂ ಹಿಂಜರಿಯಬಾರದು ಎಂದು ಹೇಳಿರುವುದು ಈಗ ಗುಟ್ಟಾಗೇನೂ ಉಳಿದಿಲ್ಲ.

ಇದು ಇಷ್ಟಕ್ಕೇ ನಿಂತಿಲ್ಲ. ರಮೇಶ್ ಜಾರಕಿಹೊಳಿ ಅವರ ಸ್ವ ಕ್ಷೇತ್ರ ಗೋಕಾಕ್ ನಲ್ಲಿ ಪರ್ಯಾಯ ನಾಯಕನನ್ನು ಹುಟ್ಟು ಹಾಕುವ ಪ್ರಕ್ರಿಯೆಗೆ ಈ ಬಣ ಚಾಲನೆ ನೀಡಿದೆ .
ಗೋಕಾಕ ಕ್ಷೇತ್ರದಲ್ಲಿ ಉಪ್ಪಾರ ಸಮಾಜದ ಮತದಾರರ ಸಂಖ್ಯೆ 30 ಸಾವಿರಕ್ಕೂ ಅಧಿಕವಾಗಿದೆ ಎಂಬುದು ಗಮನಿಸಬೇಕಾದ ಸಂಗತಿ.ಈ ಸಮುದಾಯಕ್ಕೆ ಸೇರಿದ ಪ್ರಭಾವಿ ನಾಯಕ
ಸದಾಶಿವ ಗುದಗಗೋಳ ಅವರನ್ನು ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿಸಲು ಪ್ರಯತ್ನ ಆರಂಭಿಸಿದೆ.
ಮೂಲ ಬಿಜೆಪಿ ಹಾಗೂ ಸಂಘ ಪರಿವಾರದ ಪ್ರಮುಖರ ನೆರವಿನೊಂದಿಗೆ ಕ್ಷೇತ್ರದಲ್ಲಿ ಸದ್ದಿಲ್ಲದೆ ಪ್ರಚಾರದಲ್ಲಿ ತೊಡಗಿರುವ ಸದಾಶಿವ ಗುದಗಗೋಳ
ಸದ್ಯದಲ್ಲೇ ತಮ್ಮ ಸಮಾಜದ ಸಭೆ ಕರೆಯಲು ಚಿಂತನೆ ನಡೆಸಿದ್ದಾರೆ.
ಇದು ರಮೇಶ್ ಜಾರಕಿಹೊಳಿ ಅವರನ್ನು ಕೆರಳುವಂತೆ ಮಾಡಿದೆ.ಈ ಎಲ್ಲಾ ಬೆಳವಣಿಗೆಯ ಕೇಂದ್ರವಾಗಿರುವ ರಾಜ್ಯ ಸಭೆ ಸದಸ್ಯ ಈರಣ್ಣ ಕಡಾಡಿ,ಲಕ್ಷ್ಮಣ ಸವದಿ,ಮಹಾಂತೇಶ ಕವಟಗಿಮಠ ಮತ್ತು ಅಭಯ್ ಪಾಟೀಲ್ ವಿರುದ್ಧ ಕೆಂಡಾಮಂಡಲವಾಗಿರುವ ರಮೇಶ್ ಜಾರಕಿಹೊಳಿ ಪಕ್ಷದ ಹಿರಿಯ ನಾಯಕ ಅಮಿತ್ ಶಾ ನೇತೃತ್ವದಲ್ಲಿ
ನಡೆಯುವ ಬಿಜೆಪಿ ಕೋರ್ ಕಮಿಟಿ ಸಭೆಗೂ ಮುನ್ನ ಮುಖ್ಯಮಂತ್ರಿಗಳ ನಿವಾಸಕ್ಕೆ ಭೇಟಿ ನೀಡಿ ಮಾತುಕತೆ ನಡೆಸಿದರು.
ಅಥಣಿ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಮಹೇಶ ಕುಮಟಳ್ಳಿ ಅವರಿಗೆ ಟಿಕೆಟ್ ನೀಡಲೇಬೇಕು.ಅವರನ್ನು ಮಂತ್ರಿ ಸ್ಥಾನದಿಂದ ತೆಗೆದರೂ ಪಕ್ಷದ ಹಿತದೃಷ್ಟಿಯಿಂದ ಸಹಿಸಿಕೊಂಡಿದ್ದೆ ಆದರೆ ಈಗ ಟಿಕೆಟ್ ನೀಡುವುದಿಲ್ಲ ಎಂದರೆ ಸುಮ್ಮನಿರುವುದಿಲ್ಲ ಎಂದು ಮುಖ್ಯಮಂತ್ರಿಗಳಿಗೆ ಎಚ್ಚರಿಕೆ ನೀಡಿದರೆನ್ನಲಾಗಿದೆ.
ಗೋಕಾಕ್ ನಲ್ಲಿ ನನಗೆ ಟಿಕೆಟ್ ನೀಡದಿದ್ದರೂ ಚಿಂತೆ ಇಲ್ಲ ಅಲ್ಲಿ ನನ್ನಷ್ಟೇ ನನ್ನ ಮಗ ಅಮರನಾಥ ಜಾರಕಿಹೊಳಿ ಪ್ರಭಾವಿಯಾಗಿದ್ದಾನೆ ಅವನಿಗೆ ಟಿಕೆಟ್ ಕೊಡಿ ಆದರೆ ಅಥಣಿಯಲ್ಲಿ ಕುಮಟಳ್ಳಿ ಬಿಟ್ಟು ಬೇರೆ ಯೋಚನೆ ಮಾಡಿದರೆ ಪರಿಸ್ಥಿತಿ ಗಂಭೀರವಾಗಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ನೇರವಾಗಿ ಹೇಳಿದರೆನ್ನಲಾಗಿದೆ.
ಇದಾದ ನಂತರ ಅಮಿತ್ ಶಾ ನೇತೃತ್ವದ ಸಭೆಯಲ್ಲಿ ಈ ವಿಷಯ ಪ್ರಮುಖವಾಗಿ ಚರ್ಚೆಗೆ ಬಂದಿತು ಎನ್ನಲಾಗಿದೆ. ಈ ವಿಷಯದಲ್ಲಿ ರಾಜ್ಯ ನಾಯಕರು ಯಾವುದೇ ತೀರ್ಮಾನ ಕೈಗೊಳ್ಳುವ ಸ್ಥಿತಿಯಲ್ಲಿ ಇಲ್ಲ ಹೀಗಾಗಿ ಹೈಕಮಾಂಡ್ ಸೂಕ್ತವೆನಿಸುವ ತೀರ್ಮಾನ ಕೈಗೊಳ್ಳುವುದು ಸೂಕ್ತ ಎಂದು ಸಭೆಯಲ್ಲಿ ಮುಖ್ಯಮಂತ್ರಿ ಬೊಮ್ಮಾಯಿ ಹೇಳಿದರೆನ್ನಲಾಗಿದೆ ಈ ವೇಳೆ ಹಿರಿಯ ನಾಯಕ ಸಂತೋಷ್ ಮಾತನಾಡಲು ಮುಂದಾಗುತ್ತಿದ್ದಂತೆ ಅಮಿತ್ ಶಾ ಈ ವಿಷಯ ತಮಗೆ ಬಿಡಿ ಅದನ್ನು ನಾನು ಬಗೆಹರಿಸುತ್ತೇನೆ ಎಂದು ತಿಳಿಸಿದ್ದು,ಇಡೀ ಪ್ರಕರಣ ಇದೀಗ ಅಮಿತ್ ಶಾ ಅಂಗಳಕ್ಕೆ ಬಂದಿದೆ.

