ಬೆಂಗಳೂರು,ಏ.7- ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಕೋಲಾರ ಕಾಂಗ್ರೆಸ್ಸಿನಲ್ಲಿ ನಡೆಯುತ್ತಿರುವ ವಿದ್ಯಮಾನಗಳು ಕುತೂಹಲಕರ ಘಟ್ಟ ತಲುಪಿವೆ. ಕೋಲಾರದ ಕಾಂಗ್ರೆಸ್ ಅಭ್ಯರ್ಥಿ ವಿರುದ್ಧ ಪ್ರಚಾರ ಮಾಡುವುದಿಲ್ಲ ಎಂದು ಆಹಾರ ಸಚಿವ ಮುನಿಯಪ್ಪ ಹೇಳಿದರೆ ಸಕ್ರಿಯ ರಾಜಕಾರಣದಿಂದ ನಿವೃತ್ತಿಯಾಗುವುದಾಗಿ ಮಾಜಿ ಸಚಿವ ರಮೇಶ್ ಕುಮಾರ್ ಘೋಷಿಸಿದ್ದಾರೆ.
ಕೋಲಾರ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಆಯ್ಕೆ ವಿಚಾರವಾಗಿ ಸಚಿವ ಮುನಿಯಪ್ಪ ಬಣ ಮತ್ತು ಮಾಜಿ ಸಚಿವ ರಮೇಶ್ ಕುಮಾರ್ ಬಣದ ನಡುವಿನ ಪ್ರತಿಷ್ಠೆ ಮತ್ತು ಹಗ್ಗ ಜಗ್ಗಾಟ ದೆಹಲಿಯ ಅಂಗಳವನ್ನು ತಲುಪಿತ್ತು. ಈ ಇಬ್ಬರು ನಾಯಕರ ಜಟಾಪಟಿ ಹೈಕಮಾಂಡ್ ಗೆ ತಲೆನೋವು ತಂದೊಡ್ಡಿದೆ.
ಇದೀಗ ಮುಂಬರುವ ವಿಧಾನಸಭಾ ಚುನಾವಣೆಗೆ ನಿಲ್ಲುವುದಿಲ್ಲ. ಗೌರವಯುತವಾಗಿ ಸಕ್ರಿಯ ರಾಜಕಾರಣದಿಂದ ನಿವೃತ್ತಿನಾಗುತ್ತೇನೆ ಎಂದು ರಮೇಶ್ ಕುಮಾರ್ ತಮ್ಮ ರಾಜಕೀಯ ನಿವೃತ್ತಿಯನ್ನು ಘೋಷಿಸಿದ್ದಾರೆ.
ಶ್ರೀನಿವಾಸಪುರದಲ್ಲಿ ಏರ್ಪಡಿಸಿದ್ದ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು,ರಾಜ್ಯದಲ್ಲಿ ರಾಜಕೀಯ ವ್ಯವಸ್ಥೆಯೇ ಕಲುಷಿತಗೊಂಡಿದೆ. ರಾಜಕಾರಣದಲ್ಲಿ ಮೌಲ್ಯಗಳು ಉಳಿದಿಲ್ಲ. ರಾಜಕೀಯ ಜೀವನದಲ್ಲಿ ಇಷ್ಟು ವರ್ಷ ನ್ಯಾಯಯುತವಾಗಿ ಬದುಕಿದ್ದೇನೆ ಎಂದು ತಿಳಿಸಿದರು.
ಹಣ ಪಡೆದು ರಾಜಕೀಯ ಮಾಡಿಲ್ಲ. ಪಕ್ಷದ ಕೆಲವರು ಹಣಕ್ಕೆ ತಲೆ ಮಾರಿಕೊಂಡು ನನೆಗೆ ಮೋಸ ಮಾಡಿ ಸೋಲಿಸಿದರು. ತಾಯಿಯಂತಿರುವ ಪಕ್ಷಕ್ಕೆ ದ್ರೋಹ ಮಾಡಿದರು. ಅಧಿಕಾರದಾಸೆಗೆ ಅನೈತಿಕ ರಾಜಕಾರಣ ಮಾಡುತ್ತಿದ್ದಾರೆ. ಅವರು ಸರ್ವನಾಶವಾಗುತ್ತಾರೆ. ಆದರೆ ತಾನು ಮುಂಬರುವ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸುವುದಿಲ್ಲ. ಗೌರವಯುತವಾಗಿ ಸಕ್ರೀಯ ರಾಜಕಾರಣದಿಂದ ನಿವೃತ್ತನಾಗುತ್ತೇನೆ ಎಂದು ಘೋಷಿಸಿದರು.
ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಯಾವುದೇ ಕಾರಣಕ್ಕೂ ಮತ ಕೇಳಲು ನಿಮ್ಮ ಮುಂದೆ ಬರುವುದಿಲ್ಲ. ರಮೇಶ್ ಕುಮಾರ್ ಉತ್ತರಾಧಿಕಾರಿಯಾಗಿ ನನ್ನ ಮಗ ಹರ್ಷ ಕೂಡ ಮತ ಕೇಳಲು ಬರುವುದಿಲ್ಲ. ಕಳೆದ ಚುನಾವಣೆಯಲ್ಲಿ ನನ್ನ ಸೋಲಿಗೆ ಕೆಲಸ ಮಾಡಿದ ಕಾಂಗ್ರೆಸ್ ನಾಯಕರಿಗೆ ಯಾವ ಗತಿ ಬರಲಿದೆ ಎಂದು ಕಾದು ನೋಡಿ ಎಂದು ಮತದಾರರಿಗೆ ಹೇಳಿದರು.
ಚಿಕ್ಕಬಳ್ಳಾಪುರಕ್ಕೆ ಶಿಫ್ಟ್:
ಮತ್ತೊಂದೆಡೆ ಆಹಾರ ಸಚಿವ ಮುನಿಯಪ್ಪ ಅವರು ತಾವು ಕೋಲಾರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯ ಪರವಾಗಿ ಪ್ರಚಾರ ಮಾಡುವುದಿಲ್ಲ, ಪ್ರಚಾರ ಮಾಡುವಂತೆ ತಮಗೆ ಯಾರೂ ಕೂಡ ಆಹ್ವಾನ ನೀಡಿಲ್ಲ ಎಂದು ಹೇಳಿದರು.
ಮತದಾರರು ಕೋಲಾರ ಜಿಲ್ಲೆಯಲ್ಲಿ ನಾನು ಮಾಡಿರುವ ಅಭಿವೃದ್ಧಿ ಕಾಮಗಾರಿಯನ್ನು ಗಮನಿಸಿ ಕಾಂಗ್ರೆಸ್ ಅಭ್ಯರ್ಥಿ ಗೌತಮ್ ಅವರಿಗೆ ಮತ ಹಾಕಲಿ ಎಂದು ಹೇಳಿದ ಅವರು ಕೆಲವು ನಾಯಕರು ಕೋಲಾರದಲ್ಲಿ ಕಾಂಗ್ರೆಸ್ ಗೆಲ್ಲಿಸಿಕೊಂಡು ಬರುತ್ತೇವೆ ಎಂದು ಹೇಳಿದ್ದಾರೆ ಅವರು ಗೆಲ್ಲಿಸಿ ಕೊಂಡು ಬರಲಿ ಎಂದು ಆಶಿಸುತ್ತೇನೆ ಎಂದರು.
ನಿನ್ನ ಕುರುಡು ಮಲೆಯಲ್ಲಿ ನಡೆದ ಕಾಂಗ್ರೆಸ್ ಪ್ರಚಾರ ಸಭೆಗೆ ತಮಗೆ ಯಾವುದೇ ಆಹ್ವಾನ ನೀಡಿರಲಿಲ್ಲ ಹೀಗಾಗಿ ತಾವು ಆ ಸಭೆಗೆ ಹೋಗಿಲ್ಲ ಅಲ್ಲದೆ ನನಗೆ ನೆರೆಯ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಉಸ್ತುವಾರಿ ನೀಡಿದ್ದಾರೆ ಹೀಗಾಗಿ ಅಲ್ಲಿ ಸಕ್ರಿಯವಾಗಿ ಪ್ರಚಾರದಲ್ಲಿ ತೊಡಗುತ್ತೇನೆ ಎಂದರು.
ಚಿಕ್ಕಬಳ್ಳಾಪುರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ರಕ್ಷಾ ರಾಮಯ್ಯ ಅವರನ್ನು ಗೆಲ್ಲಿಸಿಕೊಂಡು ಬರುವುದು ನನ್ನ ಜವಾಬ್ದಾರಿ ಹೈಕಮಾಂಡ್ ನನಗೆ ನೀಡಿರುವ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸುತ್ತೇನೆ ಎಂದು ತಿಳಿಸಿದರು.