ಬೆಂಗಳೂರು, ಆ.14- ರಾಜ್ಯದಲ್ಲಿ ಎರಡೂವರೆ ವರ್ಷದ ನಂತರ ಅಧಿಕಾರ ಬದಲಾವಣೆಯಾಗಲಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅಧಿಕಾರ ಹಸ್ತಾಂತರ ಮಾಡಲಿದ್ದಾರೆ ಎಂಬ ಸುದ್ದಿಗಳಿಗೆ ಮತ್ತಷ್ಟು ಇಂಬು ತರುವ ನಿಟ್ಟಿನಲ್ಲಿ ವಿದ್ಯಮಾನಗಳು ನಡೆದಿವೆ. ಪ್ರದೇಶ ಕಾಂಗ್ರೆಸ್ ಸರ್ವ ಸದಸ್ಯರ ಸಭೆಯಲ್ಲಿ ಈ ಕುರಿತಾದ ಸುಳಿವು ನೀಡಿರುವ ಹಿರಿಯ ನಾಯಕ ಹಾಗೂ ಮಂತ್ರಿ ಕೆ.ಎಚ್. ಮುನಿಯಪ್ಪ (KH Muninappa) ಎರಡೂವರೆ ವರ್ಷದ ನಂತರ ತಾವು ಅಧಿಕಾರ ಬಿಡಲು ಸಿದ್ದ,ಉಳಿದವರು ಇದನ್ನು ಪಾಲಿಸಬೇಕು ಎಂದು ಹೇಳುವ ಮೂಲಕ ಅಚ್ಚರಿ ಮೂಡಿಸಿದರು.
ಹಾಲಿ ಸಚಿವರಾಗಿರುವವರು ಎರಡು ವರ್ಷಗಳ ಬಳಿಕ ಅಧಿಕಾರವನ್ನು ಬೇರೆಯವರಿಗೆ ಬಿಟ್ಟು ಕೊಡಬೇಕು.ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಮಾಡುವುದು ನಮ್ಮ ಕೈಲಿಲ್ಲ. ಅದು ಹೈಕಮಾಂಡ್‍ನ ತೀರ್ಮಾನ. ಆದರೆ, ಸಚಿವರಾಗಿರುವವರು ಎರಡೂವರೆ ವರ್ಷದ ಬಳಿಕ ಬೇರೆಯವರಿಗೆ ಅವಕಾಶ ಮಾಡಿಕೊಡಬೇಕು ಎಂಬುದು ನನ್ನ ವೈಯಕ್ತಿಕ ಅಭಿಪ್ರಾಯ ಎಂದು ಹೇಳಿದರು. ನಾವು ಸಚಿವರಾಗಿರುತ್ತೇವೆ. ನೀವು ನೋಡುತ್ತಾ ಇರಿ ಎನ್ನುವುದು ಸರಿಯಲ್ಲ. ಇದು ಯಾವುದೇ ತ್ಯಾಗ ಅಲ್ಲ ಎಂದು ಸ್ಪಷ್ಟಪಡಿಸಿದರು.
ನಾಲ್ಕೈದು ವರ್ಷಗಳಿಂದ ಪಕ್ಷ ಸಂಘಟನೆಗಾಗಿ ದುಡಿದ ಜಿಲ್ಲಾಧ್ಯಕ್ಷರನ್ನು ನಿಗಮ ಮಂಡಳಿಗಳಿಗೆ ಅಧ್ಯಕ್ಷರನ್ನಾಗಿ ನೇಮಿಸಬೇಕು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಿಗೂ ಅವಕಾಶ ನೀಡಬೇಕು ಎಂದು ಸಲಹೆ ನೀಡಿದರು.
ತಾವು ಮಂತ್ರಿಯಾದ ನಂತರ ಆಹಾರ ಮತ್ತು ಪಡಿತರ ಇಲಾಖೆಯಲ್ಲಿ ಸಾಕಷ್ಟು ಸುಧಾರಣೆ ತರಲಾಗಿದೆ. 3 ಲಕ್ಷ ಕಾರ್ಡ್‍ಗಳಿಗೆ ಅರ್ಜಿಗಳು ಬಾಕಿ ಉಳಿದಿದ್ದವು. ಅದರಲ್ಲಿ ಎರಡೂವರೆ ಲಕ್ಷ ಅರ್ಜಿಗಳಲ್ಲಿ ಅಕ್ಕಿ ಪಡೆದುಕೊಳ್ಳುವ ಆಕಾಂಕ್ಷಿಗಳಿದ್ದಾರೆ. ಉಳಿದವರು ಆರೋಗ್ಯ ಉದ್ದೇಶಕ್ಕಾಗಿ ಕಾರ್ಡ್ ಬೇಕು ಎಂದು ಬಯಸುತ್ತಿದ್ದಾರೆ. ಹೀಗಾಗಿ ಬಾಕಿ ಅರ್ಜಿಗಳನ್ನು ಎರಡು ಭಾಗಗಳಾಗಿ ವಿಂಗಡಿಸಿ ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.
ಹೊಸ ಕಾರ್ಡ್‍ಗಳನ್ನು ನೀಡುವ ನಿರ್ಧಾರ ತೆಗೆದುಕೊಳ್ಳುವ ವೇಳೆ ಎಚ್ಚರಿಕೆ ವಹಿಸಬೇಕಿದೆ. ಗೃಹಲಕ್ಷ್ಮಿ ಯೋಜನೆ ಹಣಕ್ಕಾಗಿ ಕುಟುಂಬಗಳನ್ನು ವಿಭಜಿಸಿ ಪ್ರತ್ಯೇಕ ಕಾರ್ಡ್‍ಗಳನ್ನು ಮಾಡಿಸಿಕೊಳ್ಳುವ ಸಾಧ್ಯತೆ ಇದೆ. ಈ ಬಗ್ಗೆ ಕಾಂಗ್ರೆಸ್ ಕಾರ್ಯಕರ್ತರು ನಿಗಾ ವಹಿಸಬೇಕು ಎಂದು ಮನವಿ ಮಾಡಿದರು.
ಈಗಾಗಲೇ ಕುಟುಂಬ ಒಟ್ಟಾಗಿದ್ದು, ಅಕ್ಕಿ ಪಡೆಯುತ್ತಿರುವವರ ಮಾಹಿತಿಯನ್ನು ಡಿಜಿಟಲ್ ರೂಪದಲ್ಲಿ ಸಂಗ್ರಹಿಸಿ ಮುಂದೆ ಕಾರ್ಡ್‍ಗಳು ವಿಭಜನೆಯಾಗದಂತೆ ಎಚ್ಚರಿಕೆ ವಹಿಸುವಂತೆ ಕೆಪಿಸಿಸಿ ಅಧ್ಯಕ್ಷರು ಸಲಹೆ ನೀಡಿದ್ದಾರೆ. ಅದನ್ನು ನಾವು ಸರ್ವಸಮ್ಮತವಾಗಿ ಒಪ್ಪಿಕೊಂಡಿದ್ದೇವೆ. ಅವರ ಜೊತೆ ಚರ್ಚಿಸಿ ಅಗತ್ಯ ಕ್ರಮ ಕೈಗೊಳ್ಳುತ್ತೇವೆ ಎಂದಿದ್ದಾರೆ.
Latest Kannada News
www.varthachakra.com